ADVERTISEMENT

ಪಿಟಿಸಿಎಲ್‌ ಮಸೂದೆಗೆ ಒಪ್ಪಿಗೆ: ಕಾಯ್ದೆ ಜಾರಿಗೆ ದಾರಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 21:30 IST
Last Updated 21 ಜುಲೈ 2023, 21:30 IST

ಬೆಂಗಳೂರು: ಪ‍ರಿಶಿಷ್ಟ ಜಾತಿ/ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ(ಪಿಟಿಸಿಎಲ್‌) ಮಸೂದೆಗೆ ಉಭಯ ಸದನಗಳು ಅನುಮೋದನೆ ದೊರೆತಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಕಾಯ್ದೆ ರೂಪದಲ್ಲಿ ಜಾರಿಯಾಗಲಿದೆ.

ಪರಿಶಿಷ್ಟರ ಜಮೀನುಗಳ ಅಕ್ರಮ ಪರಭಾರೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವುದಕ್ಕೆ ಕಾಲಮಿತಿಯನ್ನು ತೆಗೆದುಹಾಕಲು ಪಿಟಿಸಿಎಲ್ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು.

ವಿಧಾನಪರಿಷತ್‌ನಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ‘ಪರಿಶಿಷ್ಟರಿಗೆ ಅನ್ಯಾಯ ಆಗುವುದನ್ನು ತಪ್ಪಿಸಲು ತಿದ್ದುಪಡಿ ತರಲಾಗುತ್ತಿದೆ. 1978ರಿಂದ ಈ ಕಾಯ್ದೆ ಜಾರಿಯಲ್ಲಿತ್ತು. ಆದರೆ, 2017ರಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌, ಕಾಯ್ದೆಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಕಾಲಮಿತಿ ಕುರಿತು ಸ್ಪಷ್ಟತೆ ಇಲ್ಲದ ಕಾರಣ ಗೊಂದಲವಿದೆ ಎಂದು ಹೇಳಿತ್ತು. ಅದರ ಆಧಾರದಲ್ಲೇ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಬಹುತೇಕ ಪ್ರಕರಣಗಳು ವಜಾಗೊಂಡಿದ್ದವು’ ಎಂದು ವಿವರಿಸಿದರು.

ADVERTISEMENT

‘ಸರ್ಕಾರದ ಅನುಮತಿ ಪಡೆದು ಜಮೀನು ಪರಭಾರೆ ಮಾಡಬಹುದು. ಕೃಷಿಯೇತರ ಚಟುವಟಿಕೆಗೂ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ಪಿಟಿಸಿಎಲ್‌ ಮಸೂದೆಗೆ ತಿದ್ದುಪಡಿ ತಂದು, ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರ ಮಂಜೂರು ಮಾಡಿದ ಭೂಮಿಯ ಹಕ್ಕನ್ನು ಮತ್ತೆ ವಾಪಸ್‌ ಕೊಡಿಸಬೇಕು ಎಂದು ಈ ಸಮುದಾಯದ ಹಲವು ಸಂಘಟನೆಗಳನ್ನು ಹಲವು ಹಂತದಲ್ಲಿ ಹೋರಾಟ ನಡೆಸಿದ್ದವು. ಪಿಟಿಸಿಎಲ್ ಹೋರಾಟ ಸಮಿತಿ 150ಕ್ಕೂ ಹೆಚ್ಚು ದಿನ ಸತ್ಯಾಗ್ರಹ ನಡೆಸಿತ್ತು. ಅಧಿಕಾರಕ್ಕೆ ಬಂದರೆ, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಕಲಾಪ ನಡೆಯುವಾಗಲೇ, ವಿಶೇಷ ಸಚಿವ ಸಂಪುಟ ಸಭೆ ನಡೆಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಸೂದೆಗೆ ಒಪ್ಪಿಗೆಯನ್ನೂ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.