ADVERTISEMENT

ಅರಣ್ಯ ರೋದನವಾದ 'ಪಿಟಿಸಿಎಲ್' ಹೋರಾಟ

​ಪ್ರಜಾವಾಣಿ ವಾರ್ತೆ
Published 24 ಮೇ 2023, 7:38 IST
Last Updated 24 ಮೇ 2023, 7:38 IST
ಪಿಟಿಸಿಎಲ್ ಕಾಯ್ದೆ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ 142ನೇ ದಿನವೂ ಮುಂದುವರಿದಿದೆ
ಪಿಟಿಸಿಎಲ್ ಕಾಯ್ದೆ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ 142ನೇ ದಿನವೂ ಮುಂದುವರಿದಿದೆ   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್‌) ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ 142 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಹೋರಾಟಗಾರರ ಕೂಗು ಅರಣ್ಯ ರೋದನವಾಗಿದೆ.

ಒಳ ಮೀಸಲಾತಿಗೆ ಆಗ್ರಹಿಸಿ ಹೋರಾಟ ಆರಂಭವಾದ ಮರು ದಿನವೇ ಜನವರಿ 2ರಂದು ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಹೋರಾಟವೂ ಆರಂಭವಾಯಿತು. ಬಜೆಟ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಹಿಂದಿನ ಸರ್ಕಾರ, ತಿದ್ದುಪಡಿಗೆ ಕ್ರಮ ಕೈಗೊಳ್ಳಲಿಲ್ಲ.

ಕಂದಾಯ ಸಚಿವರಾಗಿದ್ದ ಆರ್.ಅಶೋಕ ಅವರ ಮನೆ ಮುಂದೆಯೂ ಧರಣಿ ನಡೆಸಿ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಪಿಟಿಸಿಎಲ್ ಹೋರಾಟಗಾರರು ಮಾಡಿದರು. ಆದರೂ, ಸಚಿವ ಸಂಪುಟದ ಮುಂದೆ ವಿಷಯ ಬರಲಿಲ್ಲ. ಚುನಾವಣಾ ನೀತಿ ಸಂಹಿತೆ ಘೋಷಣೆಯಾದರೂ, ಪಟ್ಟು ಬಿಡದೆ ಸಂತ್ರಸ್ತರು ಹೋರಾಟ ಮುಂದುವರಿಸಿದರು.

ADVERTISEMENT

‘ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಿ.ಪರಮೇಶ್ವರ ಅವರು ಚುನಾವಣೆಗೂ ಮುನ್ನ ಧರಣಿಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ತಿದ್ದುಪಡಿ ಮಾಡುವ ಭರವಸೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಈ ವಿಷಯವನ್ನು ಪ್ರಕಟಿಸಿದ್ದರು’ ಎಂದು ಹೋರಾಟಗಾರರು ನೆನಪಿಸಿಕೊಂಡರು.

‘ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಾವೇಶದಲ್ಲೂ ಕಾಂಗ್ರೆಸ್‌ ಭರವಸೆ ನೀಡಿದೆ. ಈಗ ಸರ್ಕಾರ ಬದಲಾಗಿದ್ದು, ಮೊದಲ ಆದ್ಯತೆಯಾಗಿ ಪರಿಗಣಿಸಿ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕು’ ಎಂದು ಹೋರಾಟಗಾರ ಮಂಜುನಾಥ್ ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಬಲಾಢ್ಯರ ಪಾಲಾಗುವುದನ್ನು ತಪ್ಪಿಸಲು ಡಿ. ದೇವರಾಜ ಅರಸು ಮತ್ತು ಬಿ. ಬಸವಲಿಂಗಪ್ಪ ಅವರ ದಲಿತ ಪರ ಕಾಳಜಿಯಿಂದಾಗಿ ಈ ಕಾಯ್ದೆ 1978ರಲ್ಲಿ ಜಾರಿಗೆ ಬಂದಿತ್ತು. ಈ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳು ತಿರಸ್ಕರಿಸುತ್ತಿವೆ. ನ್ಯಾಯಾಲಯಗಳು ಅದೇ ರೀತಿ ತೀರ್ಪುಗಳನ್ನು ನೀಡುತ್ತಿವೆ. ಇದರಿಂದಾಗಿ ದಲಿತರು ಭೂಮಿ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ತಿದ್ದುಪಡಿ ಅಗತ್ಯ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.