ADVERTISEMENT

ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿಗೆ ಪಟ್ಟು

ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು - ಪ್ರಜಾವಾಣಿ ಚಿತ್ರ
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ಎಸ್‌ಸಿ, ಎಸ್‌ಟಿ ಉಪ ಯೋಜನೆ ಕಾಯ್ದೆ ಸೆಕ್ಷನ್‌ 7(ಡಿ) ರದ್ದು ಪಡಿಸುವುದು ಹಾಗೂ ಪಿಟಿಸಿಎಲ್‌ ಕಾಯ್ದೆ(ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಪರಭಾರೆ ನಿಷೇಧ ಕಾಯ್ದೆ)ಗೆ ತಿದ್ದುಪಡಿ ತಂದು ಪರಿಶಿಷ್ಟರ ಭೂಮಿ ರಕ್ಷಣೆ ಮಾಡುವಂತೆ ಆಗ್ರಹಿಸಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಸೆಕ್ಷನ್‌ 7(ಡಿ) ಅಡಿಯಲ್ಲಿರುವ ವೆಚ್ಚದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಡುವ ದೊಡ್ಡ ಮೊತ್ತವನ್ನು ಅನ್ಯಯೋಜನೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಪರಿಶಿಷ್ಟ ಪರವಿರುವ ಯೋಜನೆಗಳಿಗೆ ಹಣದ ಕೊರತೆ ಎದುರಾಗುತ್ತಿದೆ. ಕಲ್ಯಾಣ ಕಾರ್ಯಕ್ರಮಗಳೂ ನಡೆಯುತ್ತಿಲ್ಲ ಎಂದು ದೂರಿದರು.

‘ಪರಿಶಿಷ್ಟರಿಗೆ ಮೀಸಲಿಟ್ಟ ಹಣವು ಅವರ ಅಭ್ಯುದಯಕ್ಕೇ ಬಳಕೆ ಆಗಬೇಕು. ಈ ಹಣವನ್ನು ಬೇರೆಡೆಗೆ ವರ್ಗಾಯಿಸುವುದೇ ಆದರೆ ಎಸ್‌ಸಿ–ಎಸ್‌ಟಿ ಉಪ ಯೋಜನೆ ಕಾಯ್ದೆ ಆಶಯ ಮಣ್ಣು ಪಾಲಾಗುತ್ತದೆ. ಅಲಕ್ಷಿತ ಸಮುದಾಯವನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಉದ್ದೇಶವೇ ಹಳ್ಳ ಹಿಡಿಯಲಿದೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಕಾಯ್ದೆಯ ಸೆಕ್ಷನ್‌ 7(ಡಿ) ಅನ್ನು ತೆಗೆದರೆ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಡುವ ಹಣವು ಸದ್ವಿನಿಯೋಗ ಆಗಲಿದೆ. ಈ ಸೆಕ್ಷನ್‌ ರದ್ದು ಪಡಿಸಿ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಸಮಿತಿ ರಾಷ್ಟ್ರೀಯ ಅಧ್ಯಕ್ಷ ಡಾ.ಚಿ.ನಾ.ರಾಮು ಹೇಳಿದರು.

ಪಿಟಿಸಿಎಲ್‌ ಕಾಯ್ದೆಯಲ್ಲಿರುವ ಲೋಪದಿಂದ ಪರಿಶಿಷ್ಟರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಈ ಕಾಯ್ದೆಗೆ ಶೀಘ್ರವೇ ತಿದ್ದುಪಡಿ ತಂದು ದಲಿತರ ಭೂಮಿಯನ್ನು ರಕ್ಷಿಸಬೇಕು. ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಿದಾಗ ಹಿನ್ನಡೆಯಾಗಿದೆ. ಇದನ್ನು ತಪ್ಪಿಸಲು ಪರಿಶಿಷ್ಟರ ಹಿತ ಕಾಪಾಡುವ ರೀತಿಯಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ರಾಜ್ಯ ಅಧ್ಯಕ್ಷ ನಾಗರಾಜ್‌ ಬಳ್ಳೇಕೆರೆ, ಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷ ವಿಶ್ವನಾಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.