ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಬರಲು ಇನ್ನೂ ಏಳು ತಿಂಗಳು ಇರುವಾಗಲೇ ರಾಜ್ಯದ ಕೆಲವೆಡೆ ಪ್ರಥಮ ಪಿಯು ತರಗತಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಅನಧಿಕೃತವಾಗಿ ಆರಂಭವಾಗಿದೆ.
ಈ ಬಗ್ಗೆ ಹಲವು ಪೋಷಕರು ನೀಡಿದ ಮಾಹಿತಿ ಮೇರೆಗೆ ವಾಸ್ತವ ತಿಳಿದುಕೊಳ್ಳಲುತೆರಳಿದಾಗ ಇದು ಗಮನಕ್ಕೆ ಬಂದಿದೆ.
ವಾರ್ಷಿಕ ಪರೀಕ್ಷೆಗಳು ನಡೆಯುವುದಕ್ಕೆ ಮೊದಲೇ ಪ್ರವೇಶ ಪ್ರಕ್ರಿಯೆ ನಡೆಸುವ ಪದ್ಧತಿ ಕಳೆದ ಕೆಲವಾರು ವರ್ಷಗಳಿಂದಲೂ ನಡೆಯುತ್ತಿದೆ. ಆದರೆ ಮಧ್ಯಾವಧಿ ಪರೀಕ್ಷೆಗೂ ಮೊದಲೇ ಹೀಗೆ ವಿದ್ಯಾರ್ಥಿಗಳಿಗೆ ಸೀಟು ಮೀಸಲು ಇಡುತ್ತಿರುವುದು ಇದೇ ಮೊದಲ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಜತೆಗೆ ಮೈಸೂರು, ಮಂಗಳೂರು ಕಡೆಯಲ್ಲೂ ಈ ವ್ಯವಸ್ಥೆ ಜಾರಿಯಲ್ಲಿರುವುದು ಗೊತ್ತಾಗಿದೆ.
ಕಾಲೇಜು ಸೀಟನ್ನು ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಹೆಸರಲ್ಲಿ ಮೀಸಲಿಡಲು ಮುಂಗಡವಾಗಿ ಶುಲ್ಕವನ್ನೂ ಪಡೆಯಲಾಗುತ್ತಿದೆ. ವಿದ್ಯಾರ್ಥಿ ಅಂತಿಮ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ ಸೀಟೂ ಇಲ್ಲ, ದುಡ್ಡೂ ಇಲ್ಲ.
‘ಅಂತಿಮ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಸೀಟು ಇಲ್ಲ, ಕಟ್ಟಿದ ಶುಲ್ಕವನ್ನೂ ವಾಪಸ್ ನೀಡುವುದಿಲ್ಲ. ಈ ಷರತ್ತಿಗೆ ಒಪ್ಪಿದರೆ ಮಾತ್ರ ಲಿಖಿತ ಪರೀಕ್ಷೆಗೆ ಅವಕಾಶ ಕೊಡುತ್ತೇವೆ’ ಎಂಬ ಷರತ್ತಿನೊಂದಿಗೆ ಕೆಲವು ಕಾಲೇಜುಗಳು ಲಿಖಿತ ಪರೀಕ್ಷೆ ಏರ್ಪಡಿಸುತ್ತಿವೆ.
ದೂರು ನೀಡಿದರೆ ಕ್ರಮ
‘ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿ, ಪ್ರವೇಶಾತಿ ಕ್ಯಾಲೆಂಡರ್ ಪ್ರಕಟವಾಗದ ಹೊರತು ನಡೆಸುವ ಪ್ರವೇಶಾತಿ ಅಕ್ರಮ ಎನಿಸುತ್ತದೆ. ಈ ಬಗ್ಗೆ ದೂರು ಬಂದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರ್ವಜನಿಕಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಬಸವರಾಜ್ ಸೋಮಣ್ಣನವರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.