ಬೆಂಗಳೂರು: ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನ ಅರ್ಥಶಾಸ್ತ್ರ ಮತ್ತು ಭೌತವಿಜ್ಞಾನ ವಿಷಯಗಳ ಪರೀಕ್ಷೆ ಸುಗಮವಾಗಿ ನಡೆದವು.
ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ವಿದ್ಯಾರ್ಥಿಗಳ ಮೊಗದಲ್ಲಿ ಕಂಡ ಆತಂಕ, ದುಗುಡ ಹೊರಬಂದಾಗ ಕಾಣಲಿಲ್ಲ. ಅವರ ಮುಖದಲ್ಲಿ ನಿರಾಳತೆ ಎದ್ದುಕಾಣುತ್ತಿತ್ತು. ‘ನಾವು ಕ್ಲಾಸಿನಲ್ಲಿ ಡಿಸ್‌ಕಸ್ ಮಾಡಿದ್ದ ಪ್ರಶ್ನೆಯೇ ಬಂದಿತಲ್ಲ’, ‘ನಾನಂತೂ ಎರಡೂವರೆ ತಾಸಿನಲ್ಲಿಯೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದು ಮುಗಿಸಿದ್ದೆ’, ‘ಈ ಪ್ರಶ್ನೆಗೆ ನೀನು ಏನು ಉತ್ತರ ಬರೆದೆ’, ‘ಎಷ್ಟೇ ಯೋಚಿಸಿದರೂ, ಆ ಪ್ರಶ್ನೆಯ ಉತ್ತರವೇ ಹೊಳೆಯಲಿಲ್ಲ ಕಣೆ’ ಎಂಬ ಚರ್ಚೆಯ ಮಾತುಗಳು ಪರೀಕ್ಷೆಯ ಬಳಿಕ, ವಿದ್ಯಾರ್ಥಿಗಳ ಸಮೂಹದಿಂದ ಸಾಮಾನ್ಯವಾಗಿ ಕೇಳಿಬಂದವು.
ಹೆಚ್ಚಿನ ವಿದ್ಯಾರ್ಥಿಗಳು ‘ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು’ ಎಂದು ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು.
ಬಹುತೇಕ ವಿದ್ಯಾರ್ಥಿಗಳು ಪರೀಕ್ಷಾ ಸಮಯದ 30–40 ನಿಮಿಷ ಮುಂಚಿತವಾಗಿಯೇ ಕಾಲೇಜು ಆವರಣದಲ್ಲಿ ಸೇರಿದ್ದರು. ಗೆಳೆಯ–ಗೆಳತಿಯರೊಂದಿಗೆ ಚರ್ಚಿಸುತ್ತಾ ಅಂತಿಮ ಹಂತದವರೆಗೂ ವಿಷಯ ಮನನ ಮಾಡಿಕೊಂಡರು. ಕೇಂದ್ರದ ಕರೆಗಂಟೆ ಮೊಳಗುತ್ತಿದ್ದಂತೆ ಶೈಕ್ಷಣಿಕ ಪಯಣದ ಪ್ರಮುಖ ಹಂತ ದಾಟಲು ಹೊರಟರು.
ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಿತು. ಪರೀಕ್ಷಾ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸ ಲಾಗಿತ್ತು. ಅಲ್ಲಿ ಸಾರ್ವಜನಿಕರು ನಿಲ್ಲಲು, ಪೊಲೀಸ್ ಸಿಬ್ಬಂದಿ ಅವಕಾಶ ನೀಡುತ್ತಿರಲಿಲ್ಲ. ಗುರುತಿನ ಚೀಟಿ ಧರಿಸಿದ್ಧ ಪರೀಕ್ಷಾ ಸಿಬ್ಬಂದಿಗೆ ಮಾತ್ರ ಕೇಂದ್ರದ ಒಳಗೆ ಹೋಗಲು ಅವಕಾಶ ಮಾಡಿಕೊಡಲಾಗಿತ್ತು.
ಪರೀಕ್ಷಾ ಕೇಂದ್ರದ ಹೊರಗೆ ಪೋಷಕರ ದಂಡು
ಕೆಲವು ವಿದ್ಯಾರ್ಥಿಗಳೊಂದಿಗೆ ಪೋಷಕರು ಸಹ ಪರೀಕ್ಷಾ ಕೇಂದ್ರದ ವರೆಗೆ ಬಂದಿದ್ದರು. ಮಕ್ಕಳಿಗೆ ಧೈರ್ಯತುಂಬಿ ಕೇಂದ್ರದೊಳಗೆ ಕಳುಹಿಸಿದರು. ಬಳಿಕ, ಪರೀಕ್ಷೆ ಮುಗಿಯುವ ವರೆಗೆ ಕೇಂದ್ರದ ಹೊರಗೆ ಕುಳಿತು ಕಾದರು. ಅವರ ಮಕ್ಕಳು ಕೇಂದ್ರದಿಂದ ಹೊರಬಂದು ‘ಚೆನ್ನಾಗಿ ಪರೀಕ್ಷೆ ಬರೆದೆ’ ಎಂದು ಹೇಳಿದಾಗ, ಕೆಲವು ಪೋಷಕರು ನಿರಾಳರಾಗಿ ಮನೆಯಡೆಗೆ ಸಾಗಿದರು.
ಪರೀಕ್ಷಾ ಕೇಂದ್ರದ ಹೊರಗೆ ಪೋಷಕರ ದಂಡು
ಕೆಲವು ವಿದ್ಯಾರ್ಥಿಗಳೊಂದಿಗೆ ಪೋಷಕರು ಸಹ ಪರೀಕ್ಷಾ ಕೇಂದ್ರದ ವರೆಗೆ ಬಂದಿದ್ದರು. ಮಕ್ಕಳಿಗೆ ಧೈರ್ಯತುಂಬಿ ಕೇಂದ್ರದೊಳಗೆ ಕಳುಹಿಸಿದರು. ಬಳಿಕ, ಪರೀಕ್ಷೆ ಮುಗಿಯುವ ವರೆಗೆ ಕೇಂದ್ರದ ಹೊರಗೆ ಕುಳಿತು ಕಾದರು. ಅವರ ಮಕ್ಕಳು ಕೇಂದ್ರದಿಂದ ಹೊರಬಂದು ‘ಚೆನ್ನಾಗಿ ಪರೀಕ್ಷೆ ಬರೆದೆ’ ಎಂದು ಹೇಳಿದಾಗ, ಕೆಲವು ಪೋಷಕರು ನಿರಾಳರಾಗಿ ಮನೆಯಡೆಗೆ ಸಾಗಿದರು.
***
ಭೌತವಿಜ್ಞಾನ ಪತ್ರಿಕೆ ಸುಲಭವಿತ್ತು. ನಾನು ಪ್ರತಿದಿನ ಮೂರು ಗಂಟೆ ಅಧ್ಯಯನ ಮಾಡುತ್ತಿದ್ದೆ. ಹಾಗಾಗಿ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನೆ ಬರೆದಿದ್ದೇನೆ.
–ಈಶಾಂತ್
ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಅಭ್ಯಾಸ ಮಾಡಿದ್ದೆ. ಮೊದಲು ಸರಳವಾದ ಪ್ರಶ್ನೆಗಳಿಗೆ ಉತ್ತರಿಸಿ, ಬಳಿಕ ಸ್ವಲ್ಪ ಕಠಿಣವಾದ ಪ್ರಶ್ನೆಗಳಿಗೆ ಉತ್ತರ ಬರೆದಿದ್ದೇನೆ.
–ಸ್ಫೂರ್ತಿ
ವಿಷಯಗಳನ್ನು ಉಪನ್ಯಾಸಕರು ಚೆನ್ನಾಗಿ ಮನನ ಮಾಡಿ ಸಿದ್ದರು.ಅರ್ಥಶಾಸ್ತ್ರದ ಪ್ರಶ್ನೆಗಳು ಅಷ್ಟೇನೂ ಕಷ್ಟವಾಗಿರಲಿಲ್ಲ. ಹಾಗಾಗಿ ನಿರಾತಂಕವಾಗಿ ಪರೀಕ್ಷೆ ಬರೆದಿದ್ದೇನೆ.
–ಅರ್ಜುನ್
ಪರೀಕ್ಷೆಯ ದಿನ ಕೇಂದ್ರದ ವಿಳಾಸ ಹುಡುಕಲು ಮಗಳಿಗೆ ತೊಂದರೆಯಾಗಬಾರದು ಮೂರು ದಿನ ಹಿಂದೆಯೇ ಬಂದು ಕೇಂದ್ರವನ್ನು ನೋಡಿಕೊಂಡು ಹೋಗಿದ್ದೆ.
–ಸಿಜಿ ಜೋಸೆಫ್ ಜಾನ್, ಲಿಂಗರಾಜಪುರ
ಮಗನಿಗೆ ರಾತ್ರಿ ಜ್ವರ ಬಂದಿತ್ತು. ಆದ್ದರಿಂದ ನನಗೂ ಸ್ವಲ್ಪ ಆತಂಕವಾಗಿತ್ತು. ಅವನಿಗೆ ಸ್ವಲ್ಪ ಧೈರ್ಯ ಬರಲಿ, ಕೇಂದ್ರದ ವರೆಗೆ ಜತೆಗೆ ಬಂದಿದ್ದೇನೆ.
–ಸೆಂಥಿಲ್ ಕುಮಾರ್, ಕಸ್ತೂರಿನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.