ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಬಗ್ಗೆ ಫೋಟೊ ಸಮೇತ ದೂರು ಸ್ವೀಕರಿಸಲು ಸಂಚಾರ ಪೊಲೀಸರು ಅಭಿವೃದ್ಧಿಪಡಿಸಿರುವ ‘ಪಬ್ಲಿಕ್–ಐ’ ಆ್ಯಪ್‌ಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಇದು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ‘ದಂಡ’ದ ಅಸ್ತ್ರ ಬಳಸಲು ಪೊಲೀಸರಿಗೆ ನೆರವಾಗುತ್ತಿದೆ.
ಪಬ್ಲಿಕ್ ಐ ಆ್ಯಪ್‌ನಲ್ಲಿ ದಿನಕ್ಕೆ ಸರಾಸರಿ 800 ದೂರುಗಳು ಬರುತ್ತಿವೆ. ಅವುಗಳನ್ನು ಪರಿಶೀಲಿಸುವ ಪೊಲೀಸರು, ನಿಯಮ ಉಲ್ಲಂಘನೆಯನ್ನು ಗುರುತಿಸಿ 600ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.
ಪ್ರಸಕ್ತ ವರ್ಷದ ಆಗಸ್ಟ್ ಅಂತ್ಯಕ್ಕೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 2,55,048 ದೂರುಗಳು ಆ್ಯಪ್ ಮೂಲಕ ಸಲ್ಲಿಕೆಯಾಗಿವೆ. ಅವುಗಳನ್ನು ಆಧರಿಸಿ 2,13,048 ಪ್ರಕರಣ ದಾಖಲಿಸಲಾಗಿದೆ. 23,750 ದೂರುಗಳನ್ನು ತಿರಸ್ಕರಿಸಿದ್ದು, 18,250 ಪ್ರಕರಣಗಳು ಪರಿಶೀಲನೆ ಹಂತದಲ್ಲಿವೆ.
2023ರಲ್ಲಿ 3,14,564 ದೂರು ದಾಖಲಾಗಿದ್ದು, ಅವುಗಳಲ್ಲಿ 2,43,116 ಪ್ರಕರಣಗಳನ್ನು ಬಗೆಹರಿಸಲಾಗಿತ್ತು.
2015ರ ಸೆಪ್ಟೆಂಬರ್‌ನಲ್ಲಿ ಈ ವ್ಯವಸ್ಥೆ ಪ್ರಾರಂಭವಾದಾಗಿನಿಂದ ಒಟ್ಟು 19,30,584 ದೂರುಗಳು ಬಂದಿವೆ. ಈ ಪೈಕಿ 16,16,445 ಪ್ರಕರಣ ದಾಖಲಿಸಿ, 3,14,139 ದೂರುಗಳನ್ನು ತಿರಸ್ಕರಿಸಲಾಗಿದೆ.
ಈ ಆ್ಯಪ್ ಬಳಕೆ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸಂಚಾರ ನಿಯಮ ಉಲ್ಲಂಘನೆಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ, ದೋಷಪೂರಿತ ನೋಂದಣಿ ಫಲಕ (ನಂಬರ್ ಪ್ಲೇಟ್) ಅಳವಡಿಕೆ ಪ್ರಕರಣಗಳೇ ಹೆಚ್ಚು ಎಂಬುದನ್ನು ಅಂಕಿ ಅಂಶಗಳು ಹೇಳುತ್ತವೆ.
ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಜೊತೆಯಲ್ಲಿ ದಂಡ ವಿಧಿಸುವ ಕಾರ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಚಾರ ಪೊಲೀಸರು ಜಾರಿಗೆ ತಂದಿರುವ ಪಬ್ಲಿಕ್–ಐ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾರ್ವಜನಿಕರು ತಮ್ಮ ಸುತ್ತಮುತ್ತ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಫೋಟೊ ತೆಗೆದು ಆ್ಯಪ್, ಜಾಲತಾಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ (ಫೇಸ್‌ಬುಕ್, ಟ್ವಿಟರ್) ವಾಹನಗಳ ನೋಂದಣಿ ಸಂಖ್ಯೆ ಹಾಗೂ ಫೋಟೊ ಸಮೇತ ದೂರು ನೀಡಬಹುದು.
ಅಪ್‌ಲೋಡ್ ಮಾಡಿದ ಫೋಟೊದಲ್ಲಿ ವಾಹನದ ನೋಂದಣಿ ಸಂಖ್ಯೆ ಮತ್ತು ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿ ಗೋಚರಿಸಬೇಕು. ಅಂಥ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ವಾಹನಗಳ ಮಾಲೀಕರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ.
‘ನಗರದಲ್ಲಿ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಆ್ಯಪ್ ಬಳಸುತ್ತಿದ್ದಾರೆ. ಕೇವಲ ದಂಡ ವಿಧಿಸುವುದು ಇಲಾಖೆ ಉದ್ದೇಶವಲ್ಲ. ವಾಹನ ಸವಾರರು ಸಂಚಾರ ನಿಯಮ ಪಾಲಿಸುವುದು ಮುಖ್ಯ. ಪೊಲೀಸ್ ಸಿಬ್ಬಂದಿ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಪ್ರದೇಶಗಳಲ್ಲಿಯೂ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಜೈನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಗರದ ವಿವಿಧ ಪ್ರದೇಶಗಳಿಂದ ಸಾರ್ವಜನಿಕರು ಆ್ಯಪ್‌ನಲ್ಲಿ ದೂರು ದಾಖಲಿಸಿದ್ದಾರೆ. ಜನವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚು ನಿಯಮ ಉಲ್ಲಂಘನೆ ಆಗಿರುವ ಕುರಿತು ದೂರುಗಳು ಬಂದಿವೆ. ಆ್ಯಪ್‌ನಲ್ಲಿ ದಾಖಲಾಗುವ ದೂರಿನ ಅಂಕಿ ಅಂಶ ಆಧರಿಸಿ ಕಟ್ಟು ನಿಟ್ಟಿನ ನಿಯಮ ಜಾರಿಗೆ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಪಬ್ಲಿಕ್ ಐ ಆ್ಯಪ್ ಹಾಗೂ ಇತರೆ ಸಾಮಾಜಿಕ ಮಾಧ್ಯಮದ ಮೂಲಕವೂ ದೂರು ನೀಡಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.