ಬೆಂಗಳೂರು: ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ರವೀಂದ್ರ ಕಲಾಕ್ಷೇತ್ರಕ್ಕೆ ಆಧುನಿಕ ಸ್ಪರ್ಶ ಒದಗಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಸೇರಿ ವಿವಿಧ ಅತ್ಯಾಧುನಿಕ ಸೌಲಭ್ಯಗಳ ಅಳವಡಿಕೆಗೆ ಇಲಾಖೆ ಮುಂದಾಗಿದ್ದು, ಈ ನವೀಕರಣಕ್ಕೆ ₹24 ಕೋಟಿ ವೆಚ್ಚವಾಗಲಿದೆಯೆಂದು ಲೋಕೋಪಯೋಗಿ ಇಲಾಖೆ ಅಂದಾಜಿಸಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ನವೀಕರಣ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಮಗ್ರ ನವೀಕರಣ ನಡೆಸುವ ಇಲಾಖೆಯ ಈ ಕ್ರಮ ರಂಗಕರ್ಮಿಗಳು, ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.
ಹೊಸ ರಂಗಮಂದಿರ ನಿರ್ಮಿಸಿ: ಇಲಾಖೆಯ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಕಲಾವಿದರು ಹಾಗೂ ರಂಗಕರ್ಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ‘ಇಷ್ಟೊಂದು ಮೊತ್ತದಲ್ಲಿ ರವೀಂದ್ರ ಕಲಾಕ್ಷೇತ್ರವನ್ನು ನವೀಕರಣ ಮಾಡುವ ಬದಲು, ಸೂಕ್ತ ತಂತ್ರಜ್ಞರನ್ನು ನೇಮಿಸಿ ಅವರಿಗೆ ವೇತನ ನೀಡಲಿ. ಈಗಿರುವ ಧ್ವನಿ–ಬೆಳಕಿನ ವ್ಯವಸ್ಥೆಯನ್ನೇ ನವೀಕರಿಸಿ ಪ್ರದರ್ಶನಗಳಿಗೆ ಅನುವು ಮಾಡಿಕೊಡಲಿ. ₹ 24 ಕೋಟಿಯಲ್ಲಿ ಹೊಸ ರಂಗಮಂದಿರಗಳನ್ನೇ ನಿರ್ಮಿಸಲಿ’ ಎಂದು ಹೇಳಿದ್ದಾರೆ.
‘ರಿಪೇರಿ ನೆಪದಲ್ಲಿ ಖರ್ಚು ಮಾಡುವ ಹಣವನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡಿರುವ ತಂತ್ರಜ್ಞರು, ಕಲಾವಿದರು ಹಾಗೂ ಸಿಬ್ಬಂದಿಗೆ ವೇತನದ ರೂಪದಲ್ಲಿ ನೀಡಿದರೆ ರಿಪೇರಿಯ ಅಗತ್ಯ ಬೀಳುವುದಿಲ್ಲ’ ಎಂದು ರಂಗಕರ್ಮಿ ಮಂಡ್ಯ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸ್ಕೃತಿ ಇಲಾಖೆಗೆ ಒಳಪಡುವ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಯ ಸಮುಚ್ಚಯ 2018ರಲ್ಲಿ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅವಘಡಕ್ಕೆ ಒಳಗಾಗಿತ್ತು. ಧ್ವನಿ–ಬೆಳಕಿನ ವ್ಯವಸ್ಥೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮೂರು ತಿಂಗಳಲ್ಲಿ ಸಿದ್ಧಗೊಳಿಸುವುದಾಗಿ ಭರವಸೆ ನೀಡಿದ್ದ ಇಲಾಖೆ, ಮೂರೂವರೆ ವರ್ಷಗಳ ಬಳಿಕ ಸಿದ್ಧಪಡಿಸಿತ್ತು. ಇದರಿಂದಾಗಿ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಈ ಅವಧಿಯಲ್ಲಿ ಕಲಾವಿದರು ಸಾಂಸ್ಕೃತಿಕ ಸಮುಚ್ಚಯ ಪುನರಾರಂಭಕ್ಕೆ ಪ್ರತಿಭಟನೆಯನ್ನೂ ನಡೆಸಿದ್ದರು.
ಈಗ ಇಲಾಖೆಯು ರವೀಂದ್ರ ಕಲಾಕ್ಷೇತ್ರದ ಸಮಗ್ರ ನವೀಕರಣಕ್ಕೆ ಪ್ರಸ್ತಾವ ಸಲ್ಲಿಸಿರುವುದು ರಂಗಕರ್ಮಿಗಳ ಆತಂಕಕ್ಕೆ ಕಾರಣವಾಗಿದೆ. ಈ ನವೀಕರಣ ಕಾಮಗಾರಿ ಪ್ರಾರಂಭವಾದಲ್ಲಿ ವರ್ಷಾನುಗಟ್ಟಲೆ ಕಲಾಕ್ಷೇತ್ರ ಬಂದ್ ಆಗುವ ಸಾಧ್ಯತೆಯಿದೆ. ಇದರಿಂದ ನಾಟಕ ಹಾಗೂ ವಿವಿಧ ಕಲಾ ಪ್ರದರ್ಶನಗಳಿಗೆ ಸಮಸ್ಯೆಯಾಗಲಿದೆ.
ಸಂಸ್ಕೃತಿ ಇಲಾಖೆಯು 2022ರಲ್ಲಿ ರಂಗಮಂದಿರಗಳ ಬಾಡಿಗೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ಪ್ರತಿ ವರ್ಷ ಬಾಡಿಗೆ ದರವನ್ನು ಶೇ 5 ರಷ್ಟು ಏರಿಕೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು. ಸರ್ಕಾರಿ ಆದೇಶದ ಅನ್ವಯ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ಕಳೆದ ವರ್ಷ ಶೇ 5 ರಷ್ಟು ಹೆಚ್ಚಳ ಮಾಡಲಾಗಿತ್ತು. ಸದ್ಯ ಒಂದು ಪಾಳಿಗೆ ₹5 ಸಾವಿರ ಠೇವಣಿ ಹಾಗೂ ಜಿಎಸ್‌ಟಿ ಸಹಿತ ₹ 12434 ಬಾಡಿಗೆಯಿದ್ದು ಠೇವಣಿ ಹಣವನ್ನು ಮರಳಿಸಲಾಗುತ್ತದೆ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಅತ್ಯಾಧುನಿಕ ಧ್ವನಿ–ಬೆಳಕಿನ ವ್ಯವಸ್ಥೆ ಸೇರಿ ವಿವಿಧ ಸೌಲಭ್ಯಗಳ ಅಳವಡಿಕೆ ಬಳಿಕ ಮತ್ತೆ ಬಾಡಿಗೆಯನ್ನು ಪರಿಷ್ಕರಿಸುವ ಸಾಧ್ಯತೆಯ ಬಗ್ಗೆಯೂ ಸಾಂಸ್ಕೃತಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದೆ. ‘ನವೀಕರಣದ ಬಳಿಕ ಇಲಾಖೆ ಬಾಡಿಗೆ ಹೆಚ್ಚಿಸಲು ಮುಂದಾಗುತ್ತದೆ. ಈಗಾಗಲೇ ಪುರಭವನ ಹಣ ಇರುವವರ ಪಾಲಾಗಿದೆ. ರವೀಂದ್ರ ಕಲಾಕ್ಷೇತ್ರವೂ ಆ ರೀತಿ ಆಗಬಾರದು. ಅತ್ಯಂತ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳನ್ನು ನವೀಕರಣ ಮಾಡಲಿ’ ಎಂದು ಗಾಯಕ ಆನಂದ ಮಾದಲಗೆರೆ ಆಗ್ರಹಿಸಿದ್ದಾರೆ.
ಇಲಾಖೆ ನಡೆಸಿದ ಸಭೆಯಲ್ಲಿ ರವೀಂದ್ರ ಕಲಾಕ್ಷೇತ್ರದ ಸಮಗ್ರ ನವೀಕರಣದ ಬಗ್ಗೆ ಚರ್ಚಿಸಿರಲಿಲ್ಲ. ಈ ನವೀಕರಣವೂ ಅಗತ್ಯವಿಲ್ಲ. ನವೀಕರಣದ ಹೆಸರಿನಲ್ಲಿ ಬಾಡಿಗೆ ಹೆಚ್ಚಿಸಿದರೆ ಕಲಾಕ್ಷೇತ್ರ ಕನ್ನಡಿಗರಿಗೆ ಸಿಗದಂತೆ ಆಗುತ್ತದೆ. ಹಾಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಉತ್ತಮವಾಗಿದೆ. ವೇದಿಕೆಯ ಮರದ ಹಾಸುಗಳನ್ನು ಪಾಲಿಶ್ ಮಾಡಿಸಿದರೆ ಸಾಕಾಗುತ್ತದೆ. ವೇದಿಕೆಯ ಮೇಲಿರುವ ಕಬ್ಬಿಣದ ಲೈಟ್ ಬಾರ್‌ಗಳನ್ನು ಕೆಳಗೆ ಇಳಿಸುವ ಹಾಗೂ ಮೇಲಕ್ಕೆ ಎತ್ತುವ ವ್ಯವಸ್ಥೆ ಈಗಾಗಲೇ ಇದ್ದು ಅದನ್ನು ಕಲಾವಿದರಿಗೆ ಬಳಸಲು ಅನುಕೂಲ ಮಾಡಿಕೊಡಬೇಕು. ನಿರ್ವಹಣೆಗೆ ಸಂಬಂಧಿಸಿದಂತೆ ಧ್ವನಿ ಹಾಗೂ ಬೆಳಕಿನಲ್ಲಿ ಅನುಭವ ಹಾಗೂ ರಂಗಶಿಕ್ಷಣ ಪಡೆದಿರುವ ವ್ಯಕ್ತಿಗಳನ್ನು ಕಾಯಂ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು.-ಶಶಿಧರ್ ಭಾರಿಘಾಟ್, ರಂಗಕರ್ಮಿ
‘ಸಮಗ್ರ ನವೀಕರಣ ಅಗತ್ಯವಿಲ್ಲ’ ನಗರದಲ್ಲಿ ರವೀಂದ್ರ ಕಲಾಕ್ಷೇತ್ರ ಮಾತ್ರ ಲಾವಿದರಿಗೆ ಕೈಗೆಟುಕುವಂತಹ ರಂಗಮಂದಿರವಾಗಿದೆ. ಇಲಾಖೆ ನಡೆಸಿದ ಸಭೆಯಲ್ಲಿ ಬಾಡಿಗೆ ದರವನ್ನು ವಾರ್ಷಿಕ ಶೇ 5 ರಷ್ಟು ಏರಿಕೆ ಮಾಡದಂತೆ ತಿಳಿಸಲಾಗಿತ್ತು. ಸಂಸ ಬಯಲು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳ ಧ್ವನಿವರ್ಧಕದಿಂದ ಕಲಾಕ್ಷೇತ್ರದ ಒಳಗೆ ನಡೆಯುವ ಕಾರ್ಯಕ್ರಮಕ್ಕೆ ಆಗುವ ತೊಂದರೆಗಳ ಬಗ್ಗೆ ತಿಳಿಸಿ ಈ ರಂಗಮಂದಿರಗಳ ನಡುವೆ ಇರುವ ರೋಲಿಂಗ್ ಶಟರ್ ಬದಲು ಒಂದು ಪೂರ್ಣ ಪ್ರಮಾಣದ ಶಾಶ್ವತ ಗೋಡೆಯನ್ನು ಕಟ್ಟುವ ಬಗ್ಗೆ ಮನವಿ ಮಾಡಲಾಗಿತ್ತು. ರವೀಂದ್ರ ಕಲಾಕ್ಷೇತ್ರದ ಕುರ್ಚಿಗಳು ಉತ್ತಮವಾಗಿವೆ. ಸಮಗ್ರ ನವೀಕರಣ ಅಗತ್ಯವಿಲ್ಲ.-ಜೆ. ಲೋಕೇಶ್ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.