ಚರಂಡಿ ಸ್ವಚ್ಛಗೊಳಿಸಿ
ಭುವನೇಶ್ವರಿ ನಗರದ ಎರಡನೇ ಹಂತದ ದೊಡ್ಡಬಸ್ತಿ ಮುಖ್ಯರಸ್ತೆಯಲ್ಲಿರುವ ಚರಂಡಿಯಲ್ಲಿ ಗಿಡ–ಗಂಟಿಗಳು ಬೆಳೆದು ತ್ಯಾಜ್ಯ ನೀರು ಹರಿಯದೇ ಕಟ್ಟಿಕೊಂಡಿದ್ದು, ಗಬ್ಬೆದ್ದು ನಾರುತ್ತಿದೆ. ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಇದರಿಂದ, ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ತೊಂದೆಯಾಗುತ್ತಿದೆ. ಚರಂಡಿ ಸ್ವಚ್ಛಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು.
ಮಧುಚಂದ್ರ, ಭುವನೇಶ್ವರಿ ನಗರ
**
ರಸ್ತೆ ಗುಂಡಿ ಮುಚ್ಚಿ
ಬಸವನಗುಡಿ ವಿಧಾನಸಭೆ ಕ್ಷೇತ್ರದ ವಿದ್ಯಾಪೀಠ ವಾರ್ಡ್‌ನ ಅಶೋಕನಗರದ ಎರಡನೇ ಅಡ್ಡರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ದ್ವಿಚಕ್ರ ವಾಹನ ಸವಾರರು ಹಲವಾರು ಬಿದ್ದು ಗಾಯ ಮಾಡಿಕೊಂಡಿರುವ ಹಲವು ಘಟನೆಗಳು ನಡೆದಿವೆ. ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ಕೂಡಲೇ ಬಿಬಿಎಂಪಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಕೆ.ಎಸ್ ನಾಗರಾಜ್, ಅಶೋಕನಗರ
**
ಪಾದಚಾರಿ ಮಾರ್ಗ ದುರಸ್ತಿಗೊಳಿಸಿ
ಆರ್.ಟಿ. ನಗರದ ಗಂಗೇನಹಳ್ಳಿ ಒಂದನೇ ಮುಖ್ಯರಸ್ತೆಯ ಪಾದಚಾರಿಮಾರ್ಗಕ್ಕೆ ಅಳವಡಿಸಿರುವ ಚಪ್ಪಡಿ ಕಲ್ಲುಗಳು ಕಿತ್ತುಹೋಗಿವೆ. ಇದರಿಂದ, ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಈ ರಸ್ತೆಯ ಸಮೀಪದಲ್ಲಿ ಕೇಂದ್ರ ಗೃಹ ಇಲಾಖೆಯ ಪ್ರಧಾನ ಕಚೇರಿ, ಶಾಲಾ–ಕಾಲೇಜುಗಳಿದ್ದು, ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಇಂತಹ ಪಾದಚಾರಿ ಮಾರ್ಗದಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ. ಕೆಲವು ಪಾದಚಾರಿಗಳು ಮುಖ್ಯರಸ್ತೆಯಲ್ಲಿ ಓಡಾಡುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಜೊತೆಗೆ ಸಂಚಾರ ದಟ್ಟಣೆಯೂ ಆಗುತ್ತಿದೆ. ಬಿಬಿಎಂಪಿ ಕೂಡಲೇ ಇಲ್ಲಿನ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಬೇಕು.
ಶಿವಪ್ರಸಾದ್ ಎಸ್., ಆರ್.ಟಿ. ನಗರ
**
ರಸ್ತೆ ಮೇಲೆ ಚರಂಡಿ ನೀರು
ಬೆಳ್ತೂರಿನಿಂದ ಸಾದಾರಮಂಗಳಕ್ಕೆ ಸಂಪರ್ಕ ಕಲ್ಪಿಸುವ ಸಿಲಸ್ ಅಪಾರ್ಟ್‌ಮೆಂಟ್ ಹತ್ತಿರದ ಮುಖ್ಯರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಇದರಿಂದಾಗಿ ಪಾದಚಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ರಸ್ತೆಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಪರಿಣಾಮವಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಅಲ್ಪದೆ, ಅಪಘಾತಗಳು ಸಂಭವಿಸುವ ಅಪಾಯವಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು.
ಆಶಾ, ಕಾಡುಗೋಡಿ
**
ಅತಿಗುಪ್ಪೆ ಮೆಟ್ರೊ ನಿಲ್ದಾಣದಿಂದ ಚಂದ್ರಾ ಲೇಔಟ್‌ಗೆ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆಯ ಪಾದಚಾರಿ ಮಾರ್ಗದಲ್ಲಿ ರಾಶಿಗಟ್ಟಲೆ ಕಸ ಹಾಕಲಾಗಿದೆ. ಇದರಿಂದ, ಪಾದಚಾರಿ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಈ ಕಸದ ರಾಶಿಯನ್ನು ಬೀದಿ ನಾಯಿಗಳು, ಹಸುಗಳು ಎಳೆದು ದಾರಿ ಮೇಲೆ ಹರಡುತ್ತಿವೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಆಗುತ್ತಿದೆ. ಬಿಬಿಎಂಪಿ ಕೂಡಲೇ ಇಲ್ಲಿ ಹಾಕಿರುವ ಕಸ ತೆಗೆಸಬೇಕು.
ಅಲೋಕ್, ಇನ್‌ಕಮ್‌ಟ್ಯಾಕ್ಸ್ ಬಡಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.