ADVERTISEMENT

ಪುಸ್ತಕೋದ್ಯಮದ ಸಮಸ್ಯೆ ಪರಿಹರಿಸಿ: ಸಚಿವ ಮಧು ಬಂಗಾರಪ್ಪಗೆ ಎಚ್‌.ವಿಶ್ವನಾಥ್ ಪತ್ರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 16:36 IST
Last Updated 18 ಅಕ್ಟೋಬರ್ 2024, 16:36 IST
<div class="paragraphs"><p>ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿದರು. </p></div>

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿದರು.

   

ಬೆಂಗಳೂರು: ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳನ್ನು ಆಯಾ ವರ್ಷವೇ ಆಯ್ಕೆ ಮಾಡಿ, ಖರೀದಿಸಲು ಅನುದಾನ ಬಿಡುಗಡೆ ಮಾಡಿಸಿ, ಸರ್ಕಾರ ಪುಸ್ತಕ ಖರೀದಿ ಬೆಲೆಯನ್ನು ಶೇ 40ರಷ್ಟು ಹೆಚ್ಚಿಸುವಂತೆ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್‌. ವಿಶ್ವನಾಥ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಪುಸ್ತಕೋದ್ಯಮದ ಸಮಸ್ಯೆಗಳಿಗೆ ಕಂಡುಕೊಳ್ಳುವ ಕುರಿತು ಪತ್ರ ಬರೆದಿರುವ ಅವರು, ‘ಎಲ್ಲ ವಸ್ತುಗಳ ಬೆಲೆಗಳೂ ಪರಿಷ್ಕರಣೆ ಅಗುತ್ತವೆ. ಏಳು ವರ್ಷಗಳಿಂದ ಸರ್ಕಾರ ಕನ್ನಡ ಪುಸ್ತಕಗಳ ಬೆಲೆ ಪರಿಷ್ಕರಿಸಿಲ್ಲ. ಪುಸ್ತಕ ಪ್ರಕಟಣೆ ಬೆಲೆ ಹೆಚ್ಚಾಗಿದೆ. ಪ್ರಕಾಶಕರೂ ಶೇ 18ರಷ್ಟು ಜಿಎಸ್‌ಟಿ ತೆರಿಗೆ ಪಾವತಿಸುತ್ತಿದ್ದಾರೆ. ಹೀಗಾಗಿ ಪುಸ್ತಕ ಖರೀದಿ ಬೆಲೆ ಹೆಚ್ಚಿಸಲು ತಾವು ಗಮನ ಹರಿಸಬೇಕಿದೆ' ಎಂದಿದ್ದಾರೆ.

ADVERTISEMENT

‘ಸರ್ಕಾರದಿಂದ ಮಂಜೂರಾಗಿದ್ದ ಅನುದಾನ ಬಾರದೇ ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕಗಳ ಖರೀದಿಗಿರುವ ಯಾವ ಯೋಜನೆಗಳೂ ಎರಡು ವರ್ಷಗಳಿಂದ ಸರಿಯಾಗಿ ನಡೆದಿಲ್ಲ. ಈ ಬಗ್ಗೆ ಗಮನ ಹರಿಸಿ, ಮುಂದಿನ ಯೋಜನೆಗಳಿಗೆ ಸರ್ಕಾರ ಅಗತ್ಯ ಹಣಕಾಸಿನ ನೆರವು ನೀಡಬೇಕು. 2020ರಲ್ಲಿ ಪುಸ್ತಕಗಳ ಖರೀದಿ ಬಾಕಿಯನ್ನು ಸಂದಾಯ ಮಾಡಬೇಕು. ಪ್ರಸ್ತುತವಿರುವ ಏಕ ಗವಾಕ್ಷಿ ಯೋಜನೆಯೂ ಸ್ಥಗಿತಗೊಳ್ಳುವುದಾಗಿ ಸುದ್ದಿಯಾಗಿದೆ. ಇದು ನಿಂತರೆ ಮುಂದೆ ನಮ್ಮ ಹೋರಾಟ ಅನಿವಾರ್ಯವಾಗಬಹುದು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷ ಸಾರ್ವಜನಿಕ ಗ್ರಂಥಾಲಯಗಳ ಬಜೆಟ್ ಅನುಮೋದನೆಯಲ್ಲೂ ಸಮಸ್ಯೆ ಇದೆ. ಇದರಲ್ಲಿ ಯಾರ ಪಾತ್ರವಿದೆ ಎಂದು ತಿಳಿಯುತ್ತಿಲ್ಲ. ಇಲಾಖೆಯ ಸಚಿವರಾಗಿರುವ ತಾವು ಈ ಸಮಸ್ಯೆಯನ್ನು ಪರಿಶೀಲಿಸಿ, ಪರಿಹಾರ ನೀಡಬೇಕು ಎಂದು ಕೋರಿದ್ದಾರೆ.

‘ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಆಯುಕ್ತಾಲಯವನ್ನಾಗಿ ಮಾಡಿದೆ. ಗ್ರಂಥಾಲಯ ಇಲಾಖೆಯ ಮುಖ್ಯ ಉದ್ದೇಶ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು. ಹಾಗಾಗಿ, ಗ್ರಾಮೀಣ ಗ್ರಂಥಾಲಯಗಳನ್ನು ಪಂಚಾಯತ್ ರಾಜ್ ಇಲಾಖೆಯಿಂದ ಮತ್ತೆ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ತರಬೇಕು. ಸರ್ಕಾರದ ಎಲ್ಲ ಶಾಲಾ ಕಾಲೇಜು ಮತ್ತು ಇಲಾಖಾವಾರು ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಗೆ ತನ್ನಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.