ಬೆಂಗಳೂರು: ಸರ್ಕಾರದ ನಾನಾ ಇಲಾಖೆಗಳ ಗೆಜೆಟೆಡ್ ಪ್ರೊಬೇಷನರಿ 106 ಹುದ್ದೆಗಳಿಗೆ 2021ರ ಫೆಬ್ರವರಿಯಲ್ಲಿ ನಡೆಸಿದ ಮುಖ್ಯಪರೀಕ್ಷೆಯ ಫಲಿತಾಂಶವನ್ನು ಆದಷ್ಟು ಶೀಘ್ರ ಪ್ರಟಿಸುವಂತೆ ಕೆಪಿಎಸ್‌ಸಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
‘2017ನೇ ಸಾಲಿನ ಈ ಹುದ್ದೆಗಳಿಗೆ ನೇಮಕಾತಿಗೆ 2020 ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ವರ್ಷ ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. 2021ರ ಫೆ. 13ರಿಂದ 16ರವರೆಗೆ ಮುಖ್ಯ ಪರೀಕ್ಷೆ ನಡೆದಿದೆ. ಆದರೆ, 11 ತಿಂಗಳು ಕಳೆದರೂ ಪರೀಕ್ಷೆಯ ಫಲಿತಾಂಶ ಹೊರಬಿದ್ದಿಲ್ಲ. ಕೆಪಿಎಸ್‌ಸಿಯ ಒಳಗಿನ ಮಾಹಿತಿ ಪ್ರಕಾರ ಇನ್ನೂ ಮೌಲ್ಯಮಾಪನವೇ ಆರಂಭವಾಗಿಲ್ಲ. ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದರಿಂದ ತೀವ್ರ ನಿರಾಶೆ ಆಗಿದೆ. ಕೆಪಿಎಸ್‌ಸಿಯ ಈ ನಡವಳಿಕೆ ಅತ್ಯಂತ ಕ್ರೂರವಾದುದು’ ಎಂದೂ ಪತ್ರದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರ ಹುದ್ದೆಗೆ ಪೂರ್ಣ ಪ್ರಮಾಣದ ಅಧಿಕಾರಿ ಇಲ್ಲದಿರುವುದು ಕೂಡಾ ಫಲಿತಾಂಶ ವಿಳಂಬಕ್ಕೆ ಕಾರಣವಾಗಿದೆ. ಈಗ ಪ್ರಭಾರ ಹೊಂದಿರುವ ಅಧಿಕಾರಿ, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಟಿಸಲು ಜವಾಬ್ದಾರಿ ನನಗೇಕೆ ಎಂಬಂತೆ ವರ್ತಿಸುತ್ತಿದ್ದಾರೆಂದು ಕೆಪಿಎಸ್‌ಸಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಕ್ಷಣ ಗಮನಹರಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.