ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದು ಮೂರು ದಿನಗಳಷ್ಟೇ ಆಗಿವೆ. ಆದರೆ, ನಗರದ ಬಹುತೇಕ ಕಾಲೇಜಿನಲ್ಲಿ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ! ಕೆಲವು ಕಾಲೇಜುಗಳಂತೂ ಮೊದಲ ಆಯ್ಕೆಪಟ್ಟಿ ಬಿಡುಗಡೆಗೂ ಮುನ್ನವೇ ಕಟ್ ಆಫ್ ಅಂಕಗಳನ್ನು ಪ್ರಕಟಿಸುತ್ತಿವೆ.ಅನೇಕ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಪ್ರವೇಶ ಸಿಗದೆ ಪರದಾಡುತ್ತಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯು ಬುಧವಾರವಷ್ಟೇ ಈ ಕುರಿತು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಗುರುವಾರದಿಂದ ಅರ್ಜಿ ವಿತರಿಸುವಂತೆ ಸೂಚಿಸಿದೆ. ಎಲ್ಲ ಅರ್ಜಿಗಳನ್ನು ಸ್ವೀಕರಿಸಿದ ನಂತರವೇ ಆಯ್ಕೆಪಟ್ಟಿ ಪ್ರಕಟಿಸುವಂತೆಯೂ ಅದು ಹೇಳಿದೆ.
‘ಖಾಸಗಿ ಕಾಲೇಜೊಂದರಲ್ಲಿ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ. ಕಾಲೇಜಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಗುರುವಾರ ಬೆಳಿಗ್ಗೆ ಕಾಲೇಜಿಗೆ ತೆರಳಿದಾಗ ಅಚ್ಚರಿಯಾಯಿತು. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಶೇ 94ಕ್ಕಿಂತ ಕಡಿಮೆ ಅಂಕ ತೆಗೆದವರ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸೂಚನಾ ಫಲಕದಲ್ಲಿ ಹಾಕಲಾಗಿತ್ತು’ ಎಂದು ಪೋಷಕರೊಬ್ಬರು ಹೇಳಿದರು.
ಬೆಂಗಳೂರು ದಕ್ಷಿಣದಲ್ಲಿರುವ ಆ ಪ್ರತಿಷ್ಠಿತ ಕಾಲೇಜಿಗೆ ಕರೆ ಮಾಡಿದಾಗ, ‘ಶೇ 98ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸಾಕಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಮೊದಲ ಆಯ್ಕೆಪಟ್ಟಿಗೆ ನಾವು ಶೇ 94ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳ ಅರ್ಜಿಗಳನ್ನು ಮಾತ್ರ ಪರಿಗಣಿಸುತ್ತಿದ್ದೇವೆ’ ಎಂದರು.
‘ಸದ್ಯ ನಾವು ಎಲ್ಲ ಅರ್ಜಿಗಳನ್ನೂ ಸ್ವೀಕರಿಸುತ್ತಿದ್ದೇವೆ. ಆದರೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಕಟ್ ಆಫ್ ಅಂಕ ಶೇ 98ರ ಆಸು–ಪಾಸು ಇರಲಿದೆ’ ಎಂದು ಮತ್ತೊಂದು ಕಾಲೇಜಿನವರು ಹೇಳಿದರು.
‘ಶೇ 80ಕ್ಕಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು. ಕೊರೊನಾ ಆತಂಕದ ನಡುವೆಯೇ ಪರೀಕ್ಷೆ ನಡೆಸಿದ್ದರಿಂದ ಶೇಕಡಾವಾರು ಫಲಿತಾಂಶವೂ ಕಡಿಮೆಯಾಗಿದೆ. ವಿದ್ಯಾರ್ಥಿ ಬಯಸಿದ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗದಿದ್ದರೆ ಅದಕ್ಕೆ ಯಾರು ಜವಾಬ್ದಾರರು’ ಎಂದು ಪೋಷಕರೊಬ್ಬರು ಪ್ರಶ್ನಿಸಿದರು.
‘ಗುರುವಾರ ಐದು ಕಾಲೇಜುಗಳಿಗೆ ಓಡಾಡಿದೆ. ಎಲ್ಲರೂ, ಶೆ 94ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಅರ್ಜಿಗಳನ್ನು ಮಾತ್ರ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಇಲಾಖೆಗೆ ಈ ಬಗ್ಗೆ ದೂರು ನೀಡುತ್ತೇನೆ’ ಎಂದು ಪೋಷಕ ನಾಗೇಶ್ ಶಂಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.