ಬೆಂಗಳೂರು: ‘ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಿಂದ ಆ.13, 14ರಂದು ವಿವಿಧ ರೀತಿಯ ಪೂಜೆ, ಹೋಮಗಳನ್ನು ನಡೆಸಲಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ, ನಟ ದೊಡ್ಡಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಾವಿದರು ಮತ್ತು ಚಿತ್ರರಂಗದ ಒಳಿತಿಗಾಗಿ ಗಣಪತಿ ಹೋಮ, ಮೃತ್ಯುಂಜಯ ಹೋಮ, ಸರ್ಪಶಾಂತಿ ಮೊದಲಾದ ಪೂಜೆಗಳನ್ನು ನೆರವೇರಿಸಲಾಗುವುದು. ಕಲಾವಿದರ ಸಂಘದ ಕಟ್ಟಡ ನಿರ್ಮಾಣಗೊಂಡ ಸಮಯದಲ್ಲಿಯೇ ಈ ಕಾರ್ಯಕ್ರಮಗಳು ನಡೆಯಬೇಕಿತ್ತು. ಆದರೆ ಕೋವಿಡ್ ಮತ್ತಿತರ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ’ ಎಂದರು.
ನಿರ್ಮಾಪಕ ಹಾಗೂ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, ‘ದರ್ಶನ್ ಪ್ರಕರಣಕ್ಕೂ ಈ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರರಂಗ ಪಾತಾಳಕ್ಕೆ ಇಳಿಯುತ್ತಿದೆ. ದೇವರು ಚಿತ್ರರಂಗದ ಕೈ ಹಿಡಿಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚಿತ್ರರಂಗದ ಎಲ್ಲರನ್ನು ಆಹ್ವಾನಿಸುತ್ತೇವೆ. ಸಂಘದ ಚುನಾವಣೆ ಹಾಗೂ ಸರ್ವಸಭೆಗೆ ಸಿದ್ಧತೆ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.