ಬೆಂಗಳೂರು: ಪುಲಕೇಶಿನಗರ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕೆಂಬ ವಿಷಯದಲ್ಲಿ ಕೊನೆಕ್ಷಣದವರೆಗೂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪಟ್ಟು ಸಡಿಲಿಸದ ಕಾರಣ, ಈ ಕ್ಷೇತ್ರದ ಟಿಕೆಟ್ ಜಿ. ಪರಮೇಶ್ವರ ಅವರ ಆಪ್ತ ಎ.ಸಿ. ಶ್ರೀನಿವಾಸ್ ಪಾಲಾಗಿದೆ.
ದುಷ್ಕರ್ಮಿಗಳಿಂದ ಮನೆಗೆ ಬೆಂಕಿ ಬಿದ್ದು ಕಂಗೆಟ್ಟಿದ್ದ ಕ್ಷೇತ್ರದ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಬೆಂಕಿ ಹಾಕಿದ ಆರೋಪಿಗಳಿಗೆ ಕುಮ್ಮಕ್ಕು ನೀಡಿದ ಆರೋಪ ದಲ್ಲಿ ಜೈಲು ಸೇರಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೂ ಟಿಕೆಟ್ ಸಿಕ್ಕಿಲ್ಲ.
ಕೆ.ಜಿ. ಹಳ್ಳಿ ಡಿ.ಜೆ.ಹಳ್ಳಿ ಗಲಾಟೆಯ ಸಂದರ್ಭದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಬಿದ್ದಿತ್ತು. ಈ ಘಟನೆಯ ಹಿಂದೆ ಸಂಪತ್ ರಾಜ್ ಕೈವಾಡದ ಆರೋಪ ಕೇಳಿಬಂದಿತ್ತು. ಈ ಘಟನೆಯ ಬಳಿಕ ಕ್ಷೇತ್ರದ ಮುಸ್ಲಿಂ ಸಮುದಾಯ ಅಖಂಡ ಅವರಿಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಿತ್ತು. ಹೀಗಾಗಿ ಕ್ಷೇತ್ರ ಟಿಕೆಟ್ ಹಂಚಿಕೆ ಕಾಂಗ್ರೆಸ್ ವರಿಷ್ಠರಿಗೆ ಕಗ್ಗಂಟಾಗಿತ್ತು.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಅನುಕಂಪದ ಆಧಾರದಲ್ಲಿ ಮತ್ತು ಹಾಲಿ ಶಾಸಕರೂ ಆಗಿರುವ ಶ್ರೀನಿವಾಸ ಮೂರ್ತಿ ಅವರಿಗೇ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಲಾಬಿ ಮಾಡಿದ್ದರು. ಆದರೆ, ಅಖಂಡ ಅವರಿಗೆ ಟಿಕೆಟ್ ನೀಡುವ ವಿಷಯದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಡಿ.ಕೆ. ಶಿವಕುಮಾರ್, ಸಂಪತ್ ರಾಜ್ ಪರ ಒಲವು ವ್ಯಕ್ತಪಡಿಸಿದ್ದರು.
ಈ ಇಬ್ಬರ ಹಗ್ಗಜಗ್ಗಾಟ ಪರಮೇಶ್ವರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎ.ಸಿ. ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದೆ. ಶ್ರೀನಿವಾಸ್ ಅವರು ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದರು. ಆದರೆ, ಅಲ್ಲಿ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಇದರಿಂದ ಶ್ರೀನಿವಾಸ್ ಅವರು ತೀವ್ರ ನಿರಾಶೆಗೆ ಒಳಗಾಗಿದ್ದರು.
ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಮೂರನೇ ಪಟ್ಟಿಯಲ್ಲಿಯೂ ಹೆಸರು ಇಲ್ಲದೇ ಇದ್ದಾಗ, ಟಿಕೆಟ್ ಕೈ ತಪ್ಪಿರುವುದನ್ನು ಖಚಿತಪಡಿಸಿಕೊಂಡಿದ್ದ ಅಖಂಡ ಶ್ರೀನಿವಾಸಮೂರ್ತಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.