ಬೆಂಗಳೂರು: ಸಾವಿರಾರು ಸಂಖ್ಯೆಯ ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದ ಕಕ್ಷೆಯಿಂದ ಹೊರತಳ್ಳಿದ ಹಿಜಾಬ್ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಸ್ವಾಗತಾರ್ಹ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.
ಮಹಿಳೆಯರ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ, ವಸ್ತ್ರ ಸಂಹಿತೆಯೂ ಸೇರಿದಂತೆ ಮಹಿಳೆಯರ ಆಯ್ಕೆ ಸ್ಯಾತಂತ್ರ್ಯಕ್ಕೆ ತಡೆಯೊಡ್ಡುವ ಕ್ರಮಗಳನ್ನು ಜನವಾದಿ ಮಹಿಳಾ ಸಂಘಟನೆ ಬೆಂಬಲಿಸುವುದಿಲ್ಲ. ಶಿಕ್ಷಣ ಪಡೆಯುವುದು ಆದ್ಯತೆಯಾಗಬೇಕು ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಕಾರ್ಯದರ್ಶಿ ದೇವಿ, ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಪ್ರತಿಪಾದಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಶಿರವಸ್ತ್ರ ಕುರಿತು ವಿವಾದ ಎಬ್ಬಿಸಲಾಯಿತು. ಅದನ್ನು ಅಲ್ಲಿಯೇ ಪರಿಹರಿಸುವ ಬದಲು ಗದ್ದಲ ಮಾಡಲಾಯಿತು. ಲೋಡ್‌ಗಟ್ಟಲೆ ಕೇಸರಿ ಶಾಲುಗಳನ್ನು ಸರಬರಾಜು ಮಾಡಿ ರಾಜಕೀಯ ಲಾಭಕ್ಕಾಗಿ ಧರ್ಮಗಳ ನೆಲೆಯಲ್ಲಿ ವಿವಾದವನ್ನಾಗಿ ಪರಿವರ್ತಿಸಲಾಯಿತು. ಶಿಕ್ಷಣಕ್ಕೆ ತೆರೆದುಕೊಂಡ ಮೊದಲ ತಲೆಮಾರಿನ ಸಾವಿರಾರು ಯುವತಿಯರು ಆಧುನಿಕ ಆಲೋಚನಾ ಕ್ರಮಕ್ಕೆ ತೆರೆದುಕೊಳ್ಳುವ ಅವಕಾಶದಿಂದ ವಂಚಿತರಾಗಿ ಧರ್ಮದ ಕಟ್ಟು ಕಟ್ಟಳೆಯ ಒಳಗೆ ಇನ್ನಷ್ಟು ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಈಗಿನ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯು ಈ ಮೊದಲು ಹೊರಡಿಸಿದ ಸಮವಸ್ತ್ರ ಕಡ್ಡಾಯದ ವಿವಾದಿತ ಸುತ್ತೋಲೆಯ ಬಗ್ಗೆ ಕೂಡ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.