ಬೆಂಗಳೂರು: ಎರಡು ನಾಯಿಮರಿಗಳನ್ನು ಮೂವರು ಮಕ್ಕಳು ಸೇರಿಕೊಂಡು ಜೀವಂತವಾಗಿ ಸುಟ್ಟ ಘಟನೆ ಹೆಣ್ಣೂರು ಸಮೀಪದ ಕೊತ್ತನೂರಿನಲ್ಲಿ ಇತ್ತೀಚೆಗೆ ನಡೆದಿದೆ.
ಈ ಮಕ್ಕಳನ್ನು ಭೇಟಿಯಾದ ಶ್ವಾನಪ್ರಿಯರ ತಂಡ ಅವರು ನಡೆಸಿದ ಕೃತ್ಯ ಎಷ್ಟು ಹೇಯವಾದುದು ಎಂಬ ಬಗ್ಗೆ ತಿಳಿವಳಿಕೆ ಹೇಳುವ ಮೂಲಕ ಅವರ ಮನಪರಿವರ್ತನೆ ಮಾಡುವ ಪ್ರಯತ್ನ ನಡೆಸಿದೆ. ಅಲ್ಲದೇ ಮಕ್ಕಳ ಪೋಷಕರಿಗೆ ಪೊಲೀಸರಿಂದ ಬುದ್ಧಿಮಾತು ಹೇಳಿಸಿದೆ.
‘ಮೂವರು ಬಾಲಕರು ವಾರದ ಹಿಂದೆ ಶಾಲೆಯಿಂದ ಮನೆಗೆ ಬರುವಾಗ ಮೂರು ನಾಯಿಮರಿಗಳಿಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು. ಅವುಗಳನ್ನು ಮೇಲಿನಿಂದ ಕೆಳಕ್ಕೆ ಬಿಸಾಡುತ್ತಿದ್ದರು. ಅಷ್ಟಕ್ಕೇ ಅವರ ಕೃತ್ಯ ನಿಂತಿರಲಿಲ್ಲ. ಆ ನಾಯಿಮರಿಗಳನ್ನು ಬೆಂಕಿಗೂ ಹಾಕಿದ್ದರು. ಎರಡು ನಾಯಿಮರಿಗಳು ಬೆಂಕಿಯ ತಾಪ ತಡೆಯದೇ ಸತ್ತಿವೆ. ಒಂದು ನಾಯಿ ಮರಿ ಹೇಗೋ ಬದುಕುಳಿದಿದೆ’ ಎಂದು ರಾಮ್ ಕುಮಾರ್ ಬಿ.ಕೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಗಾಯಗೊಂಡ ನಾಯಿಗಳ ರಕ್ಷಣೆಯಲ್ಲಿ ತೊಡಗಿರುವ ಕಾರ್ಯಕರ್ತರಾದ ಹರೀಶ್ ಕೆ.ಬಿ, ನೆವಿನಾ ಕಾಮತ್ ಹಾಗೂ ನಾನು ಸ್ಥಳಕ್ಕೆ ಹೋಗಿ ಮಕ್ಕಳ ತಪ್ಪು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ಮಕ್ಕಳಿಗೂ ಪಶ್ಚಾತ್ತಾಪ ಉಂಟಾಗಿದೆ’ ಎಂದರು.
‘ಮಕ್ಕಳಿಗೆ ಈಗಲೇ ಈ ಬಗ್ಗೆ ತಿಳಿಹೇಳದಿದ್ದರೆ ಭವಿಷ್ಯದಲ್ಲಿ ಅವರ ಮನಸ್ಸಿನಲ್ಲಿ ಮತ್ತಷ್ಟು ಹಿಂಸಾತ್ಮಕ ಪ್ರವೃತ್ತಿ ಬೆಳೆಯುವ ಸಾಧ್ಯತೆ ಇದೆ. ಈ ಕೃತ್ಯದಲ್ಲಿ ತೊಡಗಿರುವ ಮಕ್ಕಳಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುತ್ತೇವೆ’ ಎಂದರು.
‘ನಗರದಲ್ಲಿ ಅನೇಕ ಕಡೆ ಮಕ್ಕಳು ಅರಿವಿಲ್ಲದೇ ಬೀದಿನಾಯಿಮರಿಗಳಿಗೆ ಹಿಂಸೆ ಕೊಡುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಕೃತ್ಯದಲ್ಲಿ ತೊಡಗದಂತೆ ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ರಾಮ್ ಕುಮಾರ್ ಹೇಳಿದರು.
‘ಬೆಂಕಿಯಿಂದ ತಪ್ಪಿಸಿಕೊಂಡು ಬದುಕಿ ಉಳಿದಿರುವ ನಾಯಿಮರಿಗೆ ಚಿಕಿತ್ಸೆ ನೀಡಿದ್ದೇವೆ. ಗಾಯಗೊಂಡಿರುವ ಆ ನಾಯಿ ಮರಿ ಚೇತರಿಸಿಕೊಳ್ಳುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.