ADVERTISEMENT

ಪುಸ್ತಕ ಸಂತೆ | ಪುಸ್ತಕ ಖರೀದಿಸಿ ಸಂಭ್ರಮಿಸಿದ ಸಾಹಿತ್ಯ ಪ್ರಿಯರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 16:18 IST
Last Updated 11 ಫೆಬ್ರುವರಿ 2024, 16:18 IST
<div class="paragraphs"><p>ಪುಸ್ತಕ ಸಂತೆಯ ಸಮಾರಂಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ‘ಸಹಜ ಜೀವನ’ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು.  </p></div>

ಪುಸ್ತಕ ಸಂತೆಯ ಸಮಾರಂಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ‘ಸಹಜ ಜೀವನ’ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು.

   

ಬೊಮ್ಮನಹಳ್ಳಿ: ಎಚ್‌ಎಸ್‌ಆರ್‌ ಬಡಾವಣೆಯ ಸ್ವಾಭಿಮಾನ ಉದ್ಯಾನದಲ್ಲಿ ಎರಡು ದಿನಗಳ ಕಾಲ ನಡೆದ ‘ಪುಸ್ತಕ ಸಂತೆ’ಗೆ ಭಾನುವಾರ ರಾತ್ರಿ ಸಂಭ್ರಮದ ತೆರೆಬಿತ್ತು.

ರಾಜ್ಯದ ಹಿರಿಯ ಹಾಗೂ ಕಿರಿಯ ಪ್ರಕಾಶನ ಸಂಸ್ಥೆಗಳು ಒಗ್ಗೂಡಿ ವೀರಲೋಕ ಪುಸ್ತಕ ಪ್ರಕಾಶನದ ನೇತೃತ್ವದಲ್ಲಿ ಮೊದಲ ಬಾರಿಗೆ ನಗರದಲ್ಲಿ ಪುಸ್ತಕ ಸಂತೆ ಆಯೋಜಿಸಲಾಗಿತ್ತು. ಪುಸ್ತಕ ಸಂತೆಯಲ್ಲಿದ್ದ 135ಕ್ಕೂ ಹೆಚ್ಚು ಮಳಿಗೆಗಳು ಸಾಹಿತ್ಯಾಸಕ್ತರ ಗಮನ ಸೆಳೆದವು.

ADVERTISEMENT

ಎರಡು ದಿನಗಳ ಕಾಲ ನಡೆದ ಸಂತೆಯಲ್ಲಿ ಪಾಲ್ಗೊಂಡಿದ್ದವರು ತಮ್ಮಿಷ್ಟದ ಪುಸ್ತಕ ಖರೀದಿಸಿ ಸಂಭ್ರಮಿಸಿದರು. ಬೆಂಗಳೂರು ನಗರ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಸಾಹಿತ್ಯಾಸಕ್ತರು ಪುಸ್ತಕ ಸಂತೆಗೆ ಬಂದಿದ್ದರು.

ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಇದೆ ಮೊದಲ ಬಾರಿಗೆ ಸಂತೆ ಸ್ವರೂಪ ನೀಡಲಾಗಿತ್ತು. ಪುಸ್ತಕ ಸಂತೆಯು ಪ್ರಕಾಶಕರು, ಲೇಖಕರು ಮತ್ತು ಓದುಗರನ್ನು ಒಟ್ಟಿಗೆ ಬೆಸೆಯಿತು. ಶಾಲಾ ಮಕ್ಕಳಿಗೆ ಅಗತ್ಯವಿದ್ದ ಪಠ್ಯಪುಸ್ತಕಗಳು ಲಭ್ಯವಿದ್ದವು. ಸಂಗೀತ ಕಾರ್ಯಕ್ರಮ ರಸದೌತಣ ಉಣಬಡಿಸಿತು.

ಪುಸ್ತಕ ಸಂತೆಯ ಎರಡನೆ ದಿನವಾದ ಭಾನುವಾರ ನಿರೀಕ್ಷೆಗೂ ಮೀರಿ ಪುಸ್ತಕ ಪ್ರೇಮಿಗಳು ಸೇರಿದ್ದರು. ಸಮಾರೋಪ ಸಮಾರಂಭದಲ್ಲಿ ಜೋಗಿಲ ಸಿದ್ದರಾಜು ಅವರಿಂದ ಜಾನಪದ ಗೀತೆಗಳ ಗಾಯನ ಮತ್ತು ಚೌಡಿಕೆ ಪದಗಳ ಗಾಯನ ನಡೆಯಿತು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ‘ಸಹಜ ಜೀವನ’ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಮಾತನಾಡಿ, ‘ಮನುಷ್ಯರಾದ ನಾವು ಪರಸ್ಪರ ಪ್ರೀತಿಸೋಣ. ಯಾವ ಕ್ರಾಂತಿಯೂ ತರಲಾರದಷ್ಟು ಬದಲಾವಣೆಯನ್ನು ಪುಸ್ತಕಗಳು ತಂದಿವೆ. ಪುಸ್ತಕ ಓದೋಣ, ಬರೆಯೋಣ, ಪುಸ್ತಕ ಉಡುಗೊರೆ ನೀಡೋಣ’ ಎಂದು ಕರೆ ನೀಡಿದರು.

‘ವರಮಾನದಲ್ಲಿ ಸ್ವಲ್ಪಭಾಗವನ್ನು ಪುಸ್ತಕ ಖರೀದಿಗೆ ಮೀಸಲಿಟ್ಟರೆ ಒಳ್ಳೆಯದು’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ವಿ.ಎಸ್.ಉಗ್ರಪ್ಪ, ‘ಜನರನ್ನು ಒಡೆಯುವ ಶಕ್ತಿಗಳು ನಮ್ಮ ಮಧ್ಯೆ ಕೆಲಸ ಮಾಡುತ್ತಿವೆ. ಇದಕ್ಕೆ ಸೊಪ್ಪು ಹಾಕಬಾರದು. ಈ ಪುಸ್ತಕ ಸಂತೆಯನ್ನು ಭವಿಷ್ಯದಲ್ಲೂ ಮುಂದುವರಿಸೋಣ’ ಎಂದು ಹೇಳಿದರು.

ಸರ್ಕಾರಿ ಶಾಲೆಗಳಿಗೆ ‘ಸಾರ್ವಜನಿಕರಿಂದ ಉಚಿತ ಪುಸ್ತಕ ಉಡುಗೊರೆ’ ಅಭಿಯಾನದಲ್ಲಿ ಸುಮಾರು 500ಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹವಾದವು.

ಪ್ರಕಾಶಕರು ಓದುಗರ ಅನಿಸಿಕೆಗಳು...

ಎಚ್ಎಸ್ಆರ್ ಬಡಾವಣೆಯಲ್ಲಿ ಕನ್ನಡಿಗರೇ ಇಲ್ಲ. ಅಲ್ಲಿಗ್ಯಾಕೆ ಹೋಗ್ತೀರಿ ಎಂದು ಮೂಗು ಮುರಿದವರೇ ಹೆಚ್ಚು. ₹50 ಸಾವಿರ ಮೌಲ್ಯದ ಪುಸ್ತಕ ಮಾರಾಟವಾಗಿವೆ –ನಂದೀಶ್, ಸಾವಣ್ಣ ಪ್ರಕಾಶನ

ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಪುಸ್ತಕಗಳ ಮಾರಾಟ ಕಡಿಮೆ ಇದೆ. ಆದರೆ ನಿರಾಸೆಯಾಗಿಲ್ಲ- ಬೆಟ್ಟಸ್ವಾಮಿ, ನವ ಕರ್ನಾಟಕ ಪ್ರಕಾಶನ

ಪೂರ್ಣಚಂದ್ರ ತೇಜಸ್ವಿ ಕುವೆಂಪು ಅವರ ಪುಸ್ತಕಗಳು ಅತಿ ಹೆಚ್ಚು ಮಾರಾಟವಾಗಿವೆ –ಲಕ್ಷ್ಮಿಕಾಂತ್, ಟೋಟಲ್ ಕನ್ನಡ

ಮೊದಲಿನಿಂದಲೂ ಓದುವ ಅಭ್ಯಾಸ ಇದೆ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳನ್ನು ಇಷ್ಟಪಡುತ್ತೇನೆ. ಈ ಪುಸ್ತಕ ಸಂತೆ ಪ್ರತೀ ವರ್ಷವೂ ನಡೆಯಬೇಕು –ಹರೀಶ್, ಎಂಜಿನಿಯರ್ ಎಚ್ಎಸ್ಆರ್ ಬಡಾವಣೆ

ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು.
ಎಚ್‌.ಎನ್‌.ನಾಗಮೋಹನ್‌ದಾಸ್‌, ನಿವೃತ್ತ ನ್ಯಾಯಮೂರ್ತಿ
ಪುಸ್ತಕ ಸಂತೆಯ ಸಮಾರೋಪ ಸಮಾರಂಭದಲ್ಲಿ ಜಾನ‍ಪದ ಗೀತ ಗಾಯನವನ್ನು ಆಸ್ವಾದಿಸಿದ ಪ್ರೇಕ್ಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.