ADVERTISEMENT

ಕೇರಳದಿಂದ ಹಣದ ಕಂತೆ ತರುತ್ತಿದ್ದ ಜಾಲ: ಹವಾಲಾ ದಂಧೆ ಭೇದಿಸಿದ ಪೊಲೀಸರು

* ಹವಾಲಾ ದಂಧೆ: ದುಬೈನಿಂದ ಬರುತ್ತಿದ್ದ ಹಣ * ದಿನಕ್ಕೆ ₹ 20 ಲಕ್ಷ ಜಮೆ ಗುರಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 19:33 IST
Last Updated 7 ಡಿಸೆಂಬರ್ 2021, 19:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯವನ್ನು ಕೇಂದ್ರವಾಗಿಸಿಕೊಂಡು ಹವಾಲಾ ದಂಧೆ ನಡೆಸುತ್ತಿದ್ದ ಜಾಲವನ್ನು ಇತ್ತೀಚೆಗಷ್ಟೇ ಭೇದಿಸಿರುವ ಪುಟ್ಟೇನಹಳ್ಳಿ ಪೊಲೀಸರು, ಜಾಲದ ಪ್ರಮುಖ ಆರೋಪಿ ರಿಯಾಜ್ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.

ಜೆ.ಪಿ. ನಗರದ 6ನೇ ಹಂತದ ಜರಗನಹಳ್ಳಿಯಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆರೋಪಿ ಮೊಹಮ್ಮದ್ ಸಾಹಿಲ್, ಸ್ಥಳೀಯರಿಗೆ ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದ. ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹವಾಲಾ ದಂಧೆ ಮಾಹಿತಿ ಹೊರಬಿದ್ದಿತ್ತು. ಆತನ ಬಳಿ ದಾಖಲೆ ಇಲ್ಲದ ₹ 1 ಲಕ್ಷ ಸಿಕ್ಕಿತ್ತು.

ಸಾಹಿಲ್ ನೀಡಿದ್ದ ಮಾಹಿತಿ ಆಧರಿಸಿ ಆರೋಪಿಗಳಾದ ಕೇರಳದ ಫೈಜಲ್, ಅಬ್ದುಲ್ ಮುನಾಫ್ ಹಾಗೂ ಫಾಸಿಲ್ ಎಂಬುವರನ್ನೂ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಇವರೆಲ್ಲರೂ ಸೇರಿಕೊಂಡು ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದರು. ಇವರಿಂದ ₹ 31.51 ಕೋಟಿ ಹಣವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. ಜಾಲದ ಪ್ರಮುಖ ಆರೋಪಿ ರಿಯಾಜ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ಹುಡುಕಾಟ ನಡೆಸುತ್ತಿದೆ.

ADVERTISEMENT

ಗೂಡ್ಸ್ ವಾಹನದಲ್ಲಿ ಹಣ ಸಾಗಣೆ: ‘ಬಂಧಿತ ಆರೋಪಿಗಳು, ದುಬೈನಲ್ಲಿರುವ ಕೆಲ ವ್ಯಕ್ತಿಗಳ ಜೊತೆ ನಂಟು ಹೊಂದಿರುವುದು ತನಿಖೆಯಿಂದ ಗೊತ್ತಾಗಿದೆ. ದುಬೈನಿಂದ ಬರುತ್ತಿದ್ದ ಹಣವನ್ನು ಆರೋಪಿಗಳು, ಹವಾಲಾ ದಂಧೆ ಮೂಲಕ ಅಕ್ರಮ ವರ್ಗಾವಣೆ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದುಬೈನ ವ್ಯಕ್ತಿಗಳೇ, ಕೇರಳಕ್ಕೆ ಹಣ ಕಳುಹಿಸುತ್ತಿದ್ದರು. ಅದೇ ಹಣದ ಕಂತೆಗಳನ್ನು ಗೂಡ್ಸ್‌ ವಾಹನಗಳಲ್ಲಿ ಬಚ್ಚಿಟ್ಟು ಬೆಂಗಳೂರಿಗೆ ತರುತ್ತಿದ್ದ ಆರೋಪಿಗಳು, ಇಲ್ಲಿಂದಲೇ ರಾಜ್ಯದ ಹಲವು ನಿವಾಸಿಗಳ ಖಾತೆಗಳಿಗೆ ಜಮೆ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ’ ಎಂದೂ ತಿಳಿಸಿವೆ.

ದಿನಕ್ಕೆ ₹ 20 ಲಕ್ಷ ಜಮೆ ಗುರಿ: ‘ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿಕೊಂಡಿದ್ದ ಆರೋಪಿಗಳು, ಯಾರಿಗೆ ಹಣ ಜಮೆ ಮಾಡಬೇಕು ಎಂಬ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಹಣ ಜಮೆ ನಂತರ, ರಶೀದಿಯನ್ನು ಗ್ರೂಪ್‌ಗೆ ಕಳುಹಿಸುತ್ತಿದ್ದರು. ಗ್ರೂಪ್‌ಗೆ ರಿಯಾಜ್ ಅಡ್ಮಿನ್ ಆಗಿದ್ದ’ ಎಂದೂ ಪೊಲೀಸ್ ಮೂಲಗಳು ವಿವರಿಸಿವೆ.

‘ರಿಯಾಜ್ ಸೂಚನೆಯಂತೆ ಮೊಹಮ್ಮದ್ ಸಾಹಿಲ್, ಫೈಜಲ್, ಅಬ್ದುಲ್ ಮುನಾಫ್ ಹಾಗೂ ಫಾಸಿಲ್‌ ಕೆಲಸ ಮಾಡುತ್ತಿದ್ದರು. ದಿನಕ್ಕೆ ₹ 20 ಲಕ್ಷ ಜಮೆ ಮಾಡುವ ಗುರಿಯನ್ನು ಅವರಿಗೆ ನೀಡಲಾಗಿತ್ತು. ಅದಕ್ಕಾಗಿ ತಿಂಗಳಿಗೆ ₹ 60 ಸಾವಿರ ಸಂಬಳ ಪಡೆಯುತ್ತಿದ್ದರು. ನಿಗದಿಗಿಂತ ಹೆಚ್ಚು ಹಣ ಜಮೆ ಮಾಡಿದರೂ ಪ್ರೋತ್ಸಾಹಧನ ಸಿಗುತ್ತಿತ್ತು. ಈ ಸಂಗತಿಯನ್ನು ಆರೋಪಿಗಳೇ ಬಾಯ್ಬಿಟ್ಟಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.