ADVERTISEMENT

ಕೊರೊನಾ ಸೇನಾನಿಗಳು 2021- ದಣಿವರಿಯದ ಕಾಯಕದಲ್ಲಿ ತೊಡಗಿದ ಬೆಂಗಳೂರಿನ ಸೇನಾನಿಗಳು

ಪ್ರಜಾವಾಣಿ ವಿಶೇಷ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಕೊರೊನಾ ಸೇನಾನಿಗಳು 2021- ಪಿಎಸ್‌ಐ ಶಾಂತಪ್ಪ ಜಡೆಮ್ಮನವರ್ ಮತ್ತು ರಾಜು ಕಲ್ಪಳ್ಳಿ
ಕೊರೊನಾ ಸೇನಾನಿಗಳು 2021- ಪಿಎಸ್‌ಐ ಶಾಂತಪ್ಪ ಜಡೆಮ್ಮನವರ್ ಮತ್ತು ರಾಜು ಕಲ್ಪಳ್ಳಿ   

ಕೋವಿಡ್ ತಂದಿತ್ತ ಸಂಕಷ್ಟದ ಹೊರೆಯನ್ನು ತುಸು ಇಳಿಸಿಕೊಂಡು ಹೊಸ ಭರವಸೆಗಳೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳುವ ಹೊತ್ತು ಇದು. ಈ ಸುಸಮಯವು ಸಕಾರಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯಾಗಲಿ ಎಂಬ ಸಂಕಲ್ಪದಲ್ಲಿ ‘ಪ್ರಜಾವಾಣಿ’ ಹೊಸ ಹೆಜ್ಜೆ ಇಟ್ಟಿದೆ. ಕೋವಿಡ್‌ ಕಷ್ಟ ಕಾಲದಲ್ಲಿ ತಮ್ಮ ಅನವರತ ಶ್ರಮ–ಕೊಡುಗೆಗಳ ಮೂಲಕ ಜನರಿಗೆ ನೆರವಾದ ಸಾಧಕರನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ಹಾದಿಯಲ್ಲಿ ಇನ್ನಷ್ಟು ಮಂದಿಗೆ ಪ್ರೇರಣೆ ನೀಡಲಿ ಎಂಬುದು ನಮ್ಮ ಹಂಬಲ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಈ ಕೊರೊನಾ ಸೇನಾನಿಗಳು ಪ್ರಚಾರಕ್ಕಾಗಿ ತೊಡಗಿಸಿಕೊಂಡವರಲ್ಲ; ಕರ್ತವ್ಯ–ಕಾಳಜಿಯ ಕರೆಗೆ ಎದೆಗೊಟ್ಟವರು. ಇವರಂತೆಯೇ ಪ್ರಚಾರ ಬಯಸದೇ ಕೆಲಸ ಮಾಡುತ್ತಿರುವ ಅನೇಕರೂ ಇದ್ದಾರೆ; ಇಂತಹವರ ಸಂತತಿ ನೂರ್ಮಡಿಯಾಗಲಿ; ಇವರ ಸನ್ನಡತೆ, ಅರ್ಪಣಾ ಮನೋಭಾವ ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರಿಗೂ ಮಾದರಿಯಾಗಿ, ಹೊಸ ಕನಸು ತುಂಬಲಿ ಎಂಬ ಆಶಯದೊಂದಿಗೆ...

1. ಪಿಎಸ್‌ಐ ಒಳಗೊಬ್ಬ ಶಿಕ್ಷಕ

ಕೊರೊನಾ ಸೋಂಕು ತಡೆಗೆ ಘೋಷಣೆಯಾದ ಲಾಕ್‌ಡೌನ್‌ನಿಂದ ಶಾಲೆಗಳೆಲ್ಲವೂ ಬಂದ್ ಆದವು. ಉಳ್ಳವರ ಮಕ್ಕಳ ಪಾಲಿಗಷ್ಟೇ ದಕ್ಕಿದ ಆನ್‌ಲೈನ್‌ ಶಿಕ್ಷಣ, ಊರಿನಿಂದ ಊರಿಗೆ ದುಡಿಯಲು ಬಂದ ವಲಸೆ ಕಾರ್ಮಿಕರ ಮಕ್ಕಳಿಗೆ ಮಾತ್ರ ಸಿಗಲಿಲ್ಲ. ಇಂಥ ಸ್ಥಿತಿಯಲ್ಲೇ ಕಾರ್ಮಿಕರ ಮಕ್ಕಳಿಗೆ ನಿತ್ಯವೂ ಪಾಠ ಮಾಡಿ, ಅಕ್ಷರ ಜ್ಞಾನ ಹೇಳಿಕೊಡುತ್ತಿರುವವರು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆ ಪಿಎಸ್‌ಐ ಶಾಂತಪ್ಪ ಜಡೆಮ್ಮನವರ್.

ADVERTISEMENT

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಹೊಸಗೆಣಿಕೆಹಾಳು ಗ್ರಾಮದ ಶಾಂತಪ್ಪ, ಕೂಲಿ ಕಾರ್ಮಿಕ ದಂಪತಿ ಪುತ್ರ. ಬಾಲ್ಯದಲ್ಲೇ ತಂದೆ–ತಾಯಿಯೊಂದಿಗೆ ಊರೂರು ಅಲೆಯುತ್ತಿದ್ದ ಶಾಂತಪ್ಪ, ಶೆಡ್‌ನಲ್ಲಿ ಕಳೆದ ದಿನಗಳನ್ನು ಹಾಗೂ ಶಿಕ್ಷಣ ಪಡೆಯಲು ಪಟ್ಟ ಕಷ್ಟವನ್ನು ಇಂದಿಗೂ ಮರೆತಿಲ್ಲ. ಶಾಲೆ ಬಂದ್ ಆದರೂ ಕಾರ್ಮಿಕರ ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತರಾಗಬಾರದೆಂದು ತಮ್ಮ ಬಿಡುವಿನ ವೇಳೆಯನ್ನೇ ಉಚಿತ ಪಾಠಕ್ಕಾಗಿ ಮೀಸಲಿಟ್ಟಿದ್ದಾರೆ.

ಒತ್ತಡದ ಕೆಲಸದ ನಡುವೆಯೂ ಶಾಂತಪ್ಪ, ನಾಗರಬಾವಿ ಬಳಿ ಇರುವ ಶೆಡ್‌ಗಳಿಗೆ ನಿತ್ಯವೂ ತೆರಳಿ ಅಲ್ಲಿರುವ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಶೆಡ್‌ಗಳಿಗೆ ಭೇಟಿ ನೀಡಿದ್ದ ಶಾಂತಪ್ಪ, ಅಲ್ಲಿಯ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದ ಸ್ಥಿತಿ ಕಂಡು ಮರುಕಪಟ್ಟಿದ್ದರು. ಮರುದಿನದಿಂದಲೇ ಮಕ್ಕಳಿಗೆ ಪಾಠ ಆರಂಭಿಸಿದರು. ವಿದ್ಯುತ್‌ ದೀಪವಿಲ್ಲದ ಶೆಡ್‌ಗಳಿಗೆ ಸೋಲಾರ್ ದೀಪ ಹಾಕಿಸಿ, ಮಕ್ಕಳ ರಾತ್ರಿ ಓದಿಗೂ ವ್ಯವಸ್ಥೆ ಮಾಡಿದರು. ಬೆರಳಣಿಕೆಯಷ್ಟು ಮಕ್ಕಳಿಂದ ಆರಂಭವಾದ ಪಾಠ, ಇಂದು 35ಕ್ಕೂ ಹೆಚ್ಚು ಮಕ್ಕಳನ್ನು ಸೆಳೆದಿದೆ. ಶಾಂತಪ್ಪ ಶೆಡ್‌ಗೆ ಬರುತ್ತಾರೆ ಎಂದೊಡನೆ, ಮಕ್ಕಳು ಪುಸ್ತಕ ಹಿಡಿದು ಪಾಠಕ್ಕೆ ಖುಷಿಯಿಂದಲೇ ಹಾಜರಾಗುತ್ತಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಶಾಂತಪ್ಪ, ‘ಶೆಡ್‌ನಲ್ಲಿ ಕಳೆದ ದಿನಗಳನ್ನು ನಾನು ಮರೆತಿಲ್ಲ. ಪೊಲೀಸ್ ಕೆಲಸ ಮಾಡುತ್ತಲೇ ಬಿಡುವಿನ ವೇಳೆಯನ್ನು ಮಕ್ಕಳಿಗಾಗಿ ಮೀಸಲಿಟ್ಟಿದ್ದೇನೆ. ಮಕ್ಕಳು ಶಿಕ್ಷಣ ಪಡೆದು ಸಾಧನೆ ಮಾಡಿದರೆ, ಅವರ ಇಡೀ ಕುಟುಂಬವೇ ಸುಧಾರಿಸುತ್ತದೆ. ಸಮಾಜಕ್ಕೆ ಉತ್ತಮ ನಾಗರಿಕರೂ ಲಭ್ಯರಾಗುತ್ತಾರೆ. ಆಗ ನನ್ನ ಪಾಠ ಸಾರ್ಥಕ’ ಎಂದರು.

2. ಕೋವಿಡ್‌ ಪೀಡಿತರಿಗೆ ರಾಜು ’ಸಂಸ್ಕಾರ‘

ಕೋವಿಡ್‌ಗೆ ತುತ್ತಾಗಿದ್ದ ಹಿರಿಯರೊಬ್ಬರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ನಗರದಲ್ಲಿ ಕೋವಿಡ್‌ನಿಂದ ಸಂಭವಿಸಿದ ಮೊದಲ ಸಾವು ಅದು. ಕೋವಿಡ್‌ ಬಗ್ಗೆ ಮತ್ತು ಸೋಂಕಿತರ ಬಗ್ಗೆ ತೀವ್ರ ಆತಂಕವಿದ್ದ ಸಂದರ್ಭದಲ್ಲಿ, ಈ ಶವದ ಸಂಸ್ಕಾರ ಮಾಡಲು ಯಾರೂ ಮುಂದೆ ಬಾರದಿದ್ದಾಗ, ಧೈರ್ಯದಿಂದ ಆ ಕಾರ್ಯ ನೆರವೇರಿಸಿದವರು ರಾಜು ಕಲ್ಪಳ್ಳಿ. ಬೆಂಗಳೂರಿನ ಕಲ್ಪಳ್ಳಿ ವಿದ್ಯುತ್‌ ಚಿತಾಗಾರದ ಬಳಿ ವಾಸವಾಗಿರುವ ರಾಜು, ಹೆಬ್ಬಾಳದ ವಿದ್ಯುತ್‌ ಚಿತಾಗಾರದಲ್ಲಿ ಕೆಲಸ ಮಾಡುತ್ತಾರೆ.

ಯಾವುದೇ ಶವಗಳಾದರೂ ಪರವಾಗಿಲ್ಲ, ಕೋವಿಡ್ ಶವ ಸಂಸ್ಕಾರಕ್ಕೆ ಮಾತ್ರ ಹೋಗಬೇಡಿ ಎಂದು ಮಡದಿ, ಮಕ್ಕಳು ಆತಂಕದಿಂದ ಹೇಳಿದಾಗ, ‘ನಮ್ಮ ಸೇವೆ ಹೆಚ್ಚು ಅಗತ್ಯವಿರುವುದು ಇಂತಹ ಸಂದರ್ಭದಲ್ಲಿಯೇ. ವ್ಯಕ್ತಿಯೊಬ್ಬನಿಗೆ ಮಾಡುವ ಕೊನೆಯ ಸಂಸ್ಕಾರವದು. ಇಂಥದ್ದರಲ್ಲಿ ನಾವೇ ಈ ಕೆಲಸದಿಂದ ಹಿಂದೆ ಸರಿದರೆ ಹೇಗೆ’ ಎಂದ ರಾಜು ಅವರು ಕೋವಿಡ್‌ನಿಂದ ಮೃತಪಟ್ಟ 500ಕ್ಕೂ ಹೆಚ್ಚು ಮಂದಿಯ ಶವಸಂಸ್ಕಾರ ಮಾಡಿದ್ದಾರೆ.

ಸಂಬಂಧಿಕರು, ಸ್ನೇಹಿತರು ಕೂಡ ಕೋವಿಡ್‌ ಶವಗಳ ಬಳಿ ಬಾರದಿದ್ದಾಗ, ಇವರೇ ಅಂತಹ ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕರ್ಪೂರ, ಊದಿನಕಡ್ಡಿ ಬೆಳಗಿ ಅಂತಿಮ ನಮನ ಸಲ್ಲಿಸಿದ್ದಾರೆ. ಎಷ್ಟೋ ಶವಗಳ ಅಂತ್ಯಸಂಸ್ಕಾರದ ಶುಲ್ಕವನ್ನೂ ಪಾವತಿಸಿದ್ದಾರೆ. 11 ತಿಂಗಳಿಂದ ವೇತನವೇ ಸಿಗದಿದ್ದರೂ, ಅವರ ಸೇವಾ ಮನೋಭಾವ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ.

3. ಕೊಳೆಗೇರಿ ನಿವಾಸಿಗಳಿಗೆ ಅನ್ನದಾಸೋಹ

ನಾಗಭೂಷಣ

ನಾಗಭೂಷಣ ಅವರು ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್‌. ತಮ್ಮ ತಿಂಗಳ ಆದಾಯದ ಒಂದು ಭಾಗವನ್ನು ಸೇವಾ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ.

ಹಾದಿ– ಬೀದಿಯಲ್ಲಿನ ನಿರ್ಗತಿಕರಿಗೆ ಆಹಾರ, ರಾತ್ರಿ ವೇಳೆ ಹೊದೆಯಲೂ ಇಲ್ಲದೇ ಚಳಿಯಲ್ಲಿ ಎಲ್ಲೆಂದರಲ್ಲಿ ಮಲಗಿಕೊಂಡಿರುವ ಅನಾಥರನ್ನು ಗುರುತಿಸಿ, ಕಂಬಳಿಗಳನ್ನು ವಿತರಿಸುವುದರ ಜತೆಗೆ ಕೊಳೆಗೇರಿ, ಗುಡ್ಡಗಾಡುಗಳ ಬಡ ಮಕ್ಕಳಿಗೆ ಆಹಾರ, ಶಿಕ್ಷಣ, ಲೇಖನ ಸಾಮಗ್ರಿ, ಸೈಕಲ್‌ ವಿತರಿಸುವ ಕಾರ್ಯದಲ್ಲೂ ತೊಡಗಿದ್ದಾರೆ.

‘ಯುವ ಶಕ್ತಿ ಸೇವಾ ಫೌಂಡೇಷನ್‌’ ಮೂಲಕ ಐಟಿ ಮತ್ತು ಇತರ ಕ್ಷೇತ್ರಗಳ ಸೇವಾ ಮನೋಭಾವದ ಕಾರ್ಯಕರ್ತರು ಒಟ್ಟುಗೂಡಿ ಈ ಕೆಲಸ ಮಾಡುತ್ತಿದ್ದಾರೆ. ನಾಗಭೂಷಣ ಇದರ ಟೀಮ್‌ ಲೀಡರ್‌. ಕೋವಿಡ್‌–19 ಲಾಕ್‌ಡೌನ್‌ ವೇಳೆಯಲ್ಲಿ ಫೌಂಡೇಷನ್‌ ವತಿಯಿಂದ 2,000 ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ.

ಅಲ್ಲದೆ, ಪ್ರತಿದಿನ ತಮ್ಮ ಮನೆಯಲ್ಲೇ ಅಡುಗೆ ತಯಾರಿಸಿ ಸುಮಾರು 250 ಕುಟುಂಬಗಳಿಗೆ (ಕೊಳಗೇರಿ ವಾಸಿಗಳು ಮತ್ತು ಕಟ್ಟಡ ಕಾರ್ಮಿಕರಿಗೆ) ಆಹಾರ ವಿತರಿಸುತ್ತಿದ್ದರು.

ಅಲ್ಲದೆ, ದ್ವಿಚಕ್ರ ವಾಹನಗಳಲ್ಲಿ ಆಹಾರ ತೆಗೆದುಕೊಂಡು ಬೀದಿಗಳಲ್ಲಿ ಅನ್ನ–ನೀರು ಇಲ್ಲದೇ ಸಂಕಷ್ಟದಲ್ಲಿದ್ದವರು ಹಾಗೂ ಉತ್ತರ ಭಾರತದ ಕಾರ್ಮಿಕರಿಗೆ ವಿತರಿಸುವ ಕೆಲಸ ಮಾಡಿದ್ದರು.

4. ವಲಸಿಗರ ಸಂಕಷ್ಟ ನೀಗಿಸಿದ ವಿದ್ಯಾರ್ಥಿ

ಸುಮುಖ್‌ ಬೆಟಗೇರಿ

ಸುಮುಖ್‌ ಬೆಟಗೇರಿ ಅವರು ಕಾನೂನು ವಿದ್ಯಾರ್ಥಿ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಡಿ ಸ್ವಯಂಪ್ರೇರಣೆಯಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆರಂಭದಲ್ಲಿ ಇವರಿಗೆ ಆಹಾರ ವಿತರಣೆಯ ಉಸ್ತುವಾರಿ ನೀಡಲಾಗಿತ್ತು. ಪ್ರತಿದಿನ 2 ಲಕ್ಷ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿತ್ತು. ಬೇರೆ ಮೂಲಗಳಿಂದ ದೇಣಿಗೆ ರೂಪದಲ್ಲಿ ಬರುತ್ತಿದ್ದ ಆಹಾರ ಪದಾರ್ಥಗಳ ನಿರ್ವಹಣೆ ಮಾಡುತ್ತಿದ್ದರು.

ಕಾರ್ಮಿಕರು ನಗರವನ್ನು ಬಿಟ್ಟು ಹೊರಟು ನಿಂತಾಗ ಅವರ ಮಾಹಿತಿ ಪಡೆದು, ಪೊಲೀಸರ ಜತೆ ಸಮನ್ವಯ ಸಾಧಿಸಿ ಬಸ್ಸು, ರೈಲುಗಳ ಮೂಲಕ ಕಳುಹಿಸುವ ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸಿದರು. ಚಿಕ್ಕಬಾಣಾವರ ರೈಲ್ವೇ ನಿಲ್ದಾಣದ ಮೂಲಕ 75 ಸಾವಿರ ಕಾರ್ಮಿಕರನ್ನು ಅವರ ಊರಿಗೆ ತಲುಪಿಸಲು ನೆರವಾದರು. ವಿಮಾನ ನಿಲ್ದಾಣದಲ್ಲಿ ಬೇರೆ ದೇಶಗಳಿಂದ ಬಂದವರ ಮಾಹಿತಿ ಪಡೆದು ಅವರನ್ನು ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿಸುವ ಕಾರ್ಯವನ್ನು ನಿರ್ವಹಿಸಿದ್ದರು.

ಲಾಕ್‌ಡೌನ್‌ ವೇಳೆ ಬೆಂಗಳೂರು ಮತ್ತು ಇತರ ನಗರಗಳಲ್ಲಿ ಸಿಲುಕಿದ್ದ ವಿದೇಶೀಯರ ಮಾಹಿತಿ ಪಡೆದು ಅವರ ದೇಶಗಳ ರಾಯಭಾರಿ ಕಚೇರಿಗೆ ಸಂಪರ್ಕ ಬೆಳೆಸಿ, ಅವರವರ ದೇಶಗಳಿಗೆ ಕಳುಹಿಸುವಲ್ಲಿ ನೆರವಾದರು. ಮುಖ್ಯವಾಗಿ, ಫ್ರಾನ್ಸ್‌ ಮತ್ತು ಜರ್ಮನ್ ಪ್ರಜೆಗಳನ್ನು ಅವರ ದೇಶಕ್ಕೆ ಕಳುಹಿಸುವಲ್ಲಿ ಮಹತ್ವ ಪಾತ್ರ ವಹಿಸಿದ್ದರು. ಜರ್ಮನಿಯ ಮಹಿಳೆಯೊಬ್ಬರು ಸುರಕ್ಷಿತವಾಗಿ ತಮ್ಮ ದೇಶ ತಲುಪಿದ ತಕ್ಷಣ ಸುಮುಖ್ ಮತ್ತು ಅವರ ತಂಡಕ್ಕೆ ಕರೆ ಮಾಡಿ, ಕಣ್ಣೀರಿಟ್ಟು ಭಾವುಕರಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ.

5. ಸುಡುಗಾಡಿನ ‘ಕೊರೊನಾ ಸೇನಾನಿ’ ಈ ‘ಕುಟ್ಟಿ’

ಆಂಥೋನಿ ಸ್ವಾಮಿ–ಕುಟ್ಟಿ

10ರ ಹರೆಯದಿಂದಲೇ ಬೆಂಗಳೂರಿನ ಕಲ್ಪಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ಶವ ಸುಡುವ ಕೆಲಸ ಮಾಡುತ್ತಿರುವ ಕುಟ್ಟಿ ಅವರಿಗೆ ಈಗ 34ರ ವಯಸ್ಸು. ಹತ್ತಿರದ ಸಂಬಂಧಿಗಳೂ ಮುಟ್ಟಲು ಭಯಪಡುತ್ತಿದ್ದ ಕೋವಿಡ್‌ನಿಂದ ಮೃತಪಟ್ಟ 65ಕ್ಕೂ ಹೆಚ್ಚು ದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳ ಶಿಕ್ಷಣ, ತಾಯಿ ಮನೆಯ ದುರಸ್ತಿಗೆಂದು ಕೂಡಿಟ್ಟಿದ್ದ ₹ 60 ಸಾವಿರವನ್ನು ‘ಪಿಎಂ ಕೇರ್ಸ್‌’ ನಿಧಿಗೆ ನೀಡಿ ಮಾದರಿ ಆಗಿದ್ದಾರೆ!

‘ನನಗೆ, ಪತ್ನಿ, ಪಿಯುಸಿ ಕಲಿಯುತ್ತಿರುವ ಇಬ್ಬರು ಹೆಣ್ಣು, ಒಂಬತ್ತನೇ ತರಗತಿಯಲ್ಲಿರುವ ಒಬ್ಬ ಮಗ ಇದ್ದಾನೆ. ನಮ್ಮ ಪಾಲಿಗೆ ಈ ಚಿತಾಗಾರವೇ ಮನೆ. 24 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ಸಂಬಳವೇ ಇರಲಿಲ್ಲ. 2009ರಲ್ಲಿ ₹100 ಗೌರವಧನ, 2019ರ ಜನವರಿಯಿಂದ ₹10 ಸಾವಿರ ವೇತನ ಸಿಗುತ್ತಿದೆ. ಅದರಲ್ಲಿಯೇ ಕುಟುಂಬ ನಡೆಯಬೇಕು. ಮಕ್ಕಳ ಶಿಕ್ಷಣ ಎಲ್ಲವೂ’ ಎನ್ನುತ್ತಾರೆ ಕುಟ್ಟಿ.

‘ಕೋವಿಡ್‌ನಿಂದ ಕಲಬುರ್ಗಿಯಲ್ಲಿ ಮೊದಲ ಸಾವು ಸಂಭವಿಸಿದ ಬಳಿಕ, ಬೆಂಗಳೂರಿನಲ್ಲಿ ಹಲವು ಸಾವು ಸಂಭವಿಸಿತ್ತು. ಮೃತದೇಹವೊಂದನ್ನು ಇಲ್ಲಿಗೆ (ಕಲ್ಪಳ್ಳಿ ಸ್ಮಶಾನ) ಏ. 14ರಂದು ತರಲಾಗಿತ್ತು. ಇದೊಂದೇ ಅಲ್ಲ, ನಂತರದ ದಿನಗಳಲ್ಲಿ ಇಲ್ಲಿಗೆ ಬಿಬಿಎಂಪಿಯವರು ತಂದ ಮೃತದೇಹಗಳನ್ನು ಸುಡುವ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಕೋವಿಡ್‌ ಮೃತದೇಹಗಳನ್ನು ಬಿಬಿಎಂಪಿ ಅಧಿಕಾರಿಗಳು ಸ್ಮಶಾನ ಬಳಿ ತಂದಿಡುತ್ತಿದ್ದರು. ಅಲ್ಲಿಂದ ವಿದ್ಯುತ್‌ ಚಿತಾಗಾರದ ಮೇಲೆ ಒಯ್ದು ಸುಡಬೇಕಿತ್ತು. ಅದನ್ನು ವೃತ್ತಿ ಧರ್ಮವೆಂದೇ ಮಾಡಿದ್ದೇನೆ. ಕೊರೊನಾ ಸಂಕಷ್ಟ ನೋಡಿ ಮನಸ್ಸು ಮರುಗಿತು. ಜೀವನ ಇದ್ದರಲ್ಲವೇ ಶಿಕ್ಷಣ, ಬದುಕು. ಹೀಗಾಗಿ, ಮಕ್ಕಳ ಶಿಕ್ಷಣ ಮತ್ತು ತಾಯಿಯ ಮನೆ ದುರಸ್ತಿಗೆಂದು ತೆಗೆದಿಟ್ಟಿದ್ದ ₹60 ಸಾವಿರವನ್ನು ‘ಪ್ರಧಾನ ಮಂತ್ರಿ ಕೇರ್ಸ್‌’ ನಿಧಿಗೆ ದೇಣಿಗೆ ನೀಡಿದ್ದೇನೆ’ ಎಂದೂ ಕುಟ್ಟಿ ಹೇಳಿಕೊಂಡರು.

6. 530 ಮೃತದೇಹ ಸಾಗಿಸಿದ ಮೊಹಮ್ಮದ್‌

ಮೊಹಮ್ಮದ್‌ ಅಯೂಬ್‌ ಪಾಷಾ

ಚಾಮರಾಜಪೇಟೆಯ ಮೊಹಮ್ಮದ್‌ ಅಯೂಬ್‌ ಪಾಷಾ ಅವರು, ಸಯ್ಯದ್‌ ಫೈರೋಜ್‌, ಅಬ್ದುಲ್‌ ರಬ್‌, ಬಾಲಯ್ಯ, ಮೋಹನ್‌ಬಾಬು ಎಂಬುವರನ್ನು ಸೇರಿಸಿಕೊಂಡು ತಂಡ ಕಟ್ಟಿಕೊಂಡು ಮಾಡಿದ ಸೇವಾ ಕಾರ್ಯ ಮೆಚ್ಚುವಂಥದ್ದು.

ಮೊದಲು (ಏ. 17ರಂದು) ಟಿಪ್ಪುನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹವನ್ನು, ಸಂಬಂಧಿಕರ ಅನುಪಸ್ಥಿತಿಯಲ್ಲಿಯೇ ಶವಾಗಾರಕ್ಕೆ ಒಯ್ಡು, ಚಟ್ಟಕ್ಕೆ ಏರಿಸಿ ಅಂತ್ಯಕ್ರಿಯೆ ನಡೆಸಿದ ಅಯೂಬ್‌ ತಂಡ, ನಂತರದ ದಿನಗಳಲ್ಲಿ ಇಂಥ ಕೆಲಸವನ್ನು ಮುಂದುವರಿಸುತ್ತಲೇ ಜನಪ್ರೀತಿ ಗಳಿಸಿದೆ.

‘ಕೋವಿಡ್‌ ಎಂದರೆ ಸಾಕು ಜನ ಭಯಭೀತರಾಗುತ್ತಿದ್ದ ಆರಂಭದ ದಿನಗಳಲ್ಲಿ ಮೃತದೇಹಗಳನ್ನು ಮುಟ್ಟಲು ಯಾರೂ ಮುಂದೆ ಬರುತ್ತಿರಲಿಲ್ಲ. ಕುಟುಂಬದ ಸದಸ್ಯರು ಕೂಡಾ ಅಂತಿಮ ದರ್ಶನ ಪಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು. ಈ ಸಂದರ್ಭದಲ್ಲಿ ಅನೇಕ ಶವಗಳು ಅನಾಥವಾಗುವ ಸನ್ನಿವೇಶವೂ ಬಂದಿತ್ತು. ಆದರೆ, ಯಾರಾದರೂ ಮೃತದೇಹವನ್ನು ಸ್ಮಶಾನಕ್ಕೆ ಒಯ್ಯುವ ಕೆಲಸ ಮಾಡಲೇಬೇಕಿತ್ತಲ್ಲವೇ. ಆ ಸಂದರ್ಭದಲ್ಲಿ ನಾನೇ ಮುಂದೆ ನಿಂತೆ. ಜೊತೆಗಿದ್ದವರು ಸಾಥ್‌ ನೀಡಿದರು. ನಾವು ಆಸ್ಪತ್ರೆಗಳಿಂದಲೇ ಮೃತದೇಹಗಳನ್ನು ಸಾಗಿಸುವ ಕೆಲಸ ಮಾಡಿದೆವು. ಹೀಗಾಗಿ, ನನ್ನ ಮೊಬೈಲ್‌ ನಂಬರ್‌ ಆಸ್ಪತ್ರೆಯಿಂದ ಆಸ್ಪತ್ರೆಗೆ ತಲುಪಿತು. ಕೋವಿಡ್‌ನಿಂದ ಮೃತಪಟ್ಟ ದೇಹಗಳನ್ನು ಒಯ್ಯಲು ಯಾರೂ ಮುಂದಾಗದೇ ಇದ್ದಾಗ, ನಾವು ಅಲ್ಲಿಗೆ ತೆರಳಿ ಸಾಗಿಸುತ್ತಿದ್ದೆವು’ ಎಂದು ಅಯೂಬ್‌ ಹೇಳಿದರು.

‘ಮುಸ್ಲಿಮ್‌, ಹಿಂದೂ, ಕ್ರಿಶ್ಚಿಯನ್‌, ಜೈನರು ಹೀಗೆ ಎಲ್ಲ ಧರ್ಮಕ್ಕೆ ಸೇರಿದವರ ಮೃತದೇಹಗಳನ್ನು ಚಿತಾಗಾರಕ್ಕೆ ಸಾಗಿಸಿ, ಆಯಾ ಧರ್ಮದ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಸಿದ್ದೇವೆ. ಹೂಳುವ ಪದ್ಧತಿ ಇದ್ದರೆ ಹೂಳಲಾಗಿದೆ. ಕಟ್ಟಿಗೆಯಲ್ಲಿ ಸುಡುವ ಪದ್ಧತಿ ಇದ್ದರೆ ಸುಡಲಾಗಿದೆ. ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಬಹುದೆಂದಿದ್ದರೆ ಅದನ್ನೂ ಮಾಡಲಾಗಿದೆ.. ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಅಂತ್ಯಕ್ರಿಯೆಯನ್ನೂ ನಾವೇ ಮಾಡಿದ್ದೇವೆ. ಅಂತ್ಯಕ್ರಿಯೆ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಜುಲೈ ತಿಂಗಳಲ್ಲಿ ಘೋಷಿಸುವವರೆಗೆ ನಾವೇ ಎಲ್ಲ ವೆಚ್ಚ ಮಾಡುತ್ತಿದ್ದೆವು’ ಎಂದರು.

‘ಕೋವಿಡ್‌ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಒಯ್ದು ಅಂತ್ಯಕ್ರಿಯೆ ನಡೆಸುವ ಬಗ್ಗೆ ರಾಮನಗರ, ಕನಕಪುರ, ಹಾಸನ, ದೊಡ್ಡಬಳ್ಳಾಪುರ, ಮಂಗಳೂರು, ಮೈಸೂರು ಮತ್ತಿತರ ಕಡೆಗಳಿಂದ ಬಂದವರಿಗೆ ತರಬೇತಿ ನೀಡಿದ್ದೇವೆ. ಸಂಬಂಧಿಕರಿದ್ದರೂ ಹತ್ತಿರವೇ ಬಾರದ, ಸ್ವತಃ ಪತ್ನಿಯೇ ಮೃತದೇಹ ಕೊಂಡೊಯ್ಯುವಂತೆ ಹೇಳಿದ, ಕೋವಿಡ್‌ನಿಂದ ಮೃತಪಟ್ಟ ಒಂದು ವರ್ಷದ ಮಗು... ಹೀಗೆ ನಾವು ಅಂತ್ಯಕ್ರಿಯೆ ನಡೆಸಿದ ಪ್ರತಿಯೊಂದು ಮೃತದೇಹಗಳ ಹಿಂದೆಯೂ ಒಂದೊಂದು ಕಥೆ ಇದೆ. ಅದನ್ನು ನೆನಪಿಸಿಕೊಂಡಾಗ ಮೈ ಜುಂ ಎನಿಸುತ್ತದೆ’ ಎಂದು ಭಾವುಕರಾಗುತ್ತಾರೆ ಅಯೂಬ್‌.

7. ದಣಿವರಿಯದ ಚಿನ್ನಮ್ಮ

ಚಿನ್ನಮ್ಮ

ಪೌರಕಾರ್ಮಿಕೆ ಚಿನ್ನಮ್ಮ (56 ವರ್ಷ) ಸೇವಾತತ್ಪರತೆಯ ಸಾಕಾರಮೂರ್ತಿ. ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಆರಂಭಿಸಿದ್ದ ಅವಧಿಯದು. ನಗರದಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಿದಾಗ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪಾಲಿಕೆ ಪಾಲಿಗೆ ಸವಾಲಿನ ಕೆಲಸವಾಗಿತ್ತು. 50 ವರ್ಷ ಮೀರಿದ ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯದಿಂದ ಬಿಬಿಎಂಪಿ ವಿನಾಯಿತಿಯನ್ನೂ ನೀಡಿತ್ತು. ವಿನಾಯಿತಿ ಪಡೆಯುವ ಅವಕಾಶ ಇದ್ದರೂ ಚಿನ್ನಮ್ಮ ನಿತ್ಯವೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.

ಕೋವಿಡ್ ಕಾಣಿಸಿಕೊಂಡ ಪ್ರದೇಶದ ಸ್ವಚ್ಛತಾ ಕಾರ್ಯದಲ್ಲೂ ಅವರು ಮುಂದು. ‘ನಾವೇ ಬರಬೇಡಿ ಎಂದರೂ ಕೇಳುತ್ತಿರಲಿಲ್ಲ. ನೀವು ನನಗೆ ಸಂಬಳ ಕೊಡುತ್ತೀರೋ ಬಿಡುತ್ತೀರೋ. ನನಗದು ಮುಖ್ಯವಲ್ಲ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾಯಕ ನಡೆಸಲು ಅವಕಾಶ ಸಿಕ್ಕಿದ್ದೇ ಪುಣ್ಯ. ನಿತ್ಯ ಕೆಲಸ ಮಾಡಿದರೆ ಮಾತ್ರ ನನ್ನ ಆರೋಗ್ಯ ಗಟ್ಟಿಮುಟ್ಟಾಗಿರುತ್ತದೆ. ದಯವಿಟ್ಟು ಮನೆಯಲ್ಲಿರುವಂತೆ ಹೇಳಬೇಡಿ’ ಎಂದು ಹೇಳಿ ಚಿನ್ನಮ್ಮ ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಇಂತಹ ಸೇವಾತತ್ಪರತೆ ಇರುವವರು ಈಗಿನ ಕಾಲದಲ್ಲಿ ಕಾಣಸಿಗುವುದು ಕಡಿಮೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಚಿನ್ನಮ್ಮ ಯಾವತ್ತೂ ಕೆಲಸಕ್ಕೆ ತಪ್ಪಿಸಿಕೊಂಡ ಉದಾಹರಣೆಯೇ ಇಲ್ಲ. ಅವರು ಕೆಲಸದಲ್ಲಿ ಮುಳುಗಿದರೆ ಹೊತ್ತುಗೊತ್ತು ನೋಡುವುದಿಲ್ಲ. ಕೆಲಸವೇ ಅವರ ಪ್ರಪಂಚ.

8.ನೆನೆದವರ ಮನದಲ್ಲಿ ಪ್ರಶಾಂತ್‌

ಪ್ರಶಾಂತ್

ಈಗಿನ್ನೂ 23 ವರ್ಷದ ಯುವಕ ಪ್ರಶಾಂತ್‌. ‘ಕಾಯಕವೇ ಕೈಲಾಸ’ ಎಂದು ಬಲವಾಗಿ ನಂಬಿದ ವ್ಯಕ್ತಿ.

ಬೀದಿ ಬದಿಯಲ್ಲಿ ರಾಶಿ ಬಿದ್ದಿರುವ ಕಸ ತೆಗೆಯಿಸುವುದಿರಲಿ, ಕೋವಿಡ್‌ ಕಾಣಿಸಿಕೊಂಡ ಕಡೆ ಲಾಕ್‌ಡೌನ್‌ ಮಾಡಲು ಬ್ಯಾರಿಕೇಡ್‌ ಅಳವಡಿಸುವುದಿರಲಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸುವುದಿರಲಿ, ಎಲ್ಲ ಕೆಲಸಗಳಲ್ಲೂ ಪ್ರಶಾಂತ್‌ ಎತ್ತಿದ ಕೈ.

ಜೋಗುಪಾಳ್ಯ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುವ ಇವರು ಪಾಲಿಕೆ ಅಧಿಕಾರಿಗಳಷ್ಟೇ ಅಲ್ಲ, ಜನರ ಪಾಲಿಗೂ ನೆಚ್ಚಿನ ಪೌರಕಾರ್ಮಿಕ.

‘ಕೋವಿಡ್‌ ಸೋಂಕಿತರು ಪತ್ತೆಯಾದ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ನಾವು ಹರಸಾಹಸಪಡಬೇಕಿತ್ತು. ಆದರೆ, ಪ್ರಶಾಂತ್‌ ಅವರು ಇದ್ದರೆ ಈ ಕಾರ್ಯ ನಮಗೆ ಹೂವಿನಷ್ಟು ಹಗುರ. ಏನೇ ಕೆಲಸ ಹೇಳಿದರೂ ಸ್ವಲ್ಪವೂ ಹಿಂಜರಿಕೆ ತೋರದೆ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸುವುದು ಅವರ ವಿಶೇಷತೆ. ಸ್ವಚ್ಛತೆಗೆ ಸಂಬಂಧಿಸಿದ ಏನಾದರೂ ಕೆಲಸ ಇದೆ ಎಂದು ಗೊತ್ತಾದರೂ ಪ್ರಶಾಂತ್‌ ಅಲ್ಲಿ ಹಾಜರ್‌.

ಮೇಲಧಿಕಾರಿಗಳ ಆಣತಿಗೂ ಕಾಯದೇ ಕಾಯಕದಲ್ಲಿ ತೊಡಗಿಸಿಕೊಳ್ಳುವ ಅವರು ಇತರರಿಗೂ ಮಾದರಿ. ಇಂತಹ ಬೆರಳೆಣಿಕೆಯಷ್ಟು ಪೌರಕಾರ್ಮಿಕರಿದ್ದರೆ ಸ್ವಚ್ಛತೆ ಕಾಪಾಡುವುದು ಪಾಲಿಕೆಗೆ ಕಠಿಣ ಎನಿಸುವುದೇ ಇಲ್ಲ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

9. ಬಿಡುವನ್ನೇ ಬಯಸದ ಮೊಹ್ಸಿನ್‌ ತಾಜ್‌

ಮೊಹ್ಸಿನ್ ತಾಜ್‌

ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಜಾರಿಯಾದಾಗಿನಿಂದಲೂ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಮೊಹ್ಸಿನ್ ತಾಜ್‌ (44 ವರ್ಷ) ಕೋವಿಡ್‌ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಜನ ಜಾಗೃತಿ ಮೂಡಿಸುವಲ್ಲಿ, ಸೋಂಕಿತರ ವಿಳಾಸ ಪತ್ತೆಹಚ್ಚುವಲ್ಲಿ, ಮನೆಯಲ್ಲಿ ಪ್ರತ್ಯೇಕವಾಸದ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಇತರರು ಮಾದರಿಯಾಗುವಂತೆ ನಡೆದುಕೊಂಡಿದ್ದಾರೆ.

ಅವರಿಗೆ ಗೊತ್ತುಪಡಿಸಲಾದ ಗಂಗೊಂಡನಹಳ್ಳಿ ಪ್ರದೇಶದಲ್ಲಿ ಯಾರ ಅಣತಿಗೂ ಕಾಯದೇ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದರು.

ಏನೇ ಕೆಲಸ ಹಚ್ಚಿದರೂ ಅಚ್ಚುಕಟ್ಟಾಗಿ ಪೂರ್ಣಗೊಳಿಸುತ್ತಿದ್ದರು. ಅವರು ಆಶಾಕಾರ್ಯಕರ್ತೆಯ ಕರ್ತವ್ಯಕ್ಕೂ ಮಿಗಿಲಾಗಿ ‘ಈ ಸೋಂಕು ನಿಯಂತ್ರಣ ನಗರದ ನಾಗರಿಕರೆಲ್ಲರ ಜವಾಬ್ದಾರಿ’ ಎಂಬಂತೆ ಹೊಣೆಯರಿತು ಬಿಬಿಎಂಪಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.

ಮೊಹ್ಸಿನ್‌ ತಾಜ್‌ ಬಿಡುವಿನ ವೇಳೆಯನ್ನೂ ಬಳಸಿಕೊಂಡು ಕೋವಿಡ್‌ ಬರದಂತೆ ತಡೆಯುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಿಗೆ ತಿಳಿಹೇಳುತ್ತಿದ್ದರು. ಸಂತ್ರಸ್ತರ ಕುಟುಂಬದವರಿಗೆ ಸಾಂತ್ವನ ಹೇಳುವ ಮೂಲಕ ಸ್ಥೈರ್ಯ ತುಂಬುತ್ತಿದ್ದರು. ರಜೆಯನ್ನೇ ಪಡೆಯದೆ ವಾರಗಟ್ಟಲೆ ಕೆಲಸ ಮಾಡುವ ಪ್ರಮೇಯ ಎದುರಾದಾಗಲೂ ಕೆಲಸದ ಮೇಲಿನ ಶ್ರದ್ಧೆಯನ್ನು ಸ್ವಲ್ಪವೂ ಕಳೆದುಕೊಂಡವರಲ್ಲ ಎಂದು ಸ್ಮರಿಸುತ್ತಾರೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು.

10. ಜನರ ಅಚ್ಚುಮೆಚ್ಚಿನ ಸುಜಾತಾ

ಸುಜಾತಾ

ಸುಜಾತಾ (42) ಕಾವೇರಿಪುರ ವಾರ್ಡ್‌ನಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡ ಪರಿ ಇತರ ಆಶಾ ಕಾರ್ಯಕರ್ತೆಯರಿಗೆ ಮೇಲ್ಪಂಕ್ತಿ. ಕೋವಿಡ್‌ ಕುರಿತು ಏನೇ ಸಮಸ್ಯೆ ಎದುರಾದರೂ ಜನ ನೇರವಾಗಿ ಇವರಿಗೇ ಕರೆ ಮಾಡಿ ಸಲಹೆ ಕೇಳುವಷ್ಟರ ಮಟ್ಟಿಗೆ ಇವರು ಜನಮನ್ನಣೆ ಗಳಿಸಿದ್ದರು. ಹಗಲು ರಾತ್ರಿ ಎಂದು ನೋಡದೇ ಕರೆ ಬಂದಾಗಲೆಲ್ಲಾ ಜನರ ನೆರವಿಗೆ ಧಾವಿಸುತ್ತಿದ್ದರು. ಕೋವಿಡ್ ಕರ್ತವ್ಯ ನಿರ್ವಹಣೆಗೆ ಇತರ ಆಶಾ ಕಾರ್ಯಕರ್ತೆಯರು ಹಿಂಜರಿಕೆ ಹೊಂದಿದ್ದರು. ಅಂತಹವರಿಗೆ ಸುಜಾತಾ ಸ್ಥೈರ್ಯ ತುಂಬಿದ್ದರು. ಒಂದು ತಿಂಗಳ ಮಗುವಿನಿಂದ ಹಿಡಿದ 80 ದಾಟಿದ ವೃದ್ಧರವರೆಗೆ ಕೋವಿಡ್‌ ಕಾಣಿಸಿಕೊಂಡಾಗ ಅವರಲ್ಲಿ ಮನೋಬಲ ಹೆಚ್ಚಿಸಲು ಸಕಲ ಪ್ರಯತ್ನ ಮಾಡಿದ್ದರು. ತಾವು ಬಿಬಿಎಂಪಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವ ಸಿಬ್ಬಂದಿ ಎಂಬುದನ್ನು ಮರೆತು ಸಮರ್ಪಣಾ ಭಾವದಿಂದ ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಕಾಯೇನ ವಾಚಾ ತೊಡಗಿಸಿಕೊಂಡಿದ್ದರು.

ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ಸುಜಾತಾ ಅವರು ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಅಂತೆಯೇ ರೋಗ ವಾಸಿಯಾದವರೂ ಕಷ್ಟಕಾಲದಲ್ಲಿ ಇವರು ನೆರವಾದ ರೀತಿಗೆ ಮಾರುಹೋದ ಹೋಗಿದ್ದಾರೆ. ಆಗಾಗ್ಗೆ ಕರೆ ಮಾಡಿ ಇವರ ಆರೋಗ್ಯ ವಿಚಾರಿಸುವಷ್ಟರಮಟ್ಟಿಗೆ ಜನರ ಪ್ರೀತಿಪಾತ್ರರಾದವರು ಸುಜಾತಾ.

11. ಸವಾಲುಗಳನ್ನು ಮಣಿಸುವ ಮೆಹರುನ್ನೀಸಾ

ಮೆಹರುನ್ನೀಸಾ

ಜುಲೈ–ಆಗಸ್ಟ್‌ ತಿಂಗಳಲ್ಲಿ ನಗರದಲ್ಲಿ ಕೋವಿಡ್‌ ಏಕಾಏಕಿ ತಾರಕಕ್ಕೆ ಏರಿತ್ತು. ನಿತ್ಯವು ಐದಾರು ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲು ಶುರುವಾದವು. ಆಗ ಸೋಂಕಿತರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಸಿಬ್ಬಂದಿ ಕೊರತೆ ತೀವ್ರವಾಗಿತ್ತು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಬಿಎಂಪಿ ಸಂಪರ್ಕ ಕಾರ್ಯಕರ್ತೆಯರಿಗೂ ತರಬೇತಿ ನೀಡಿ ಗಂಟಲ ದ್ರವದ ಮಾದರಿ ಸಂಗ್ರಹಿಸುವ ಕಾರ್ಯಕ್ಕೆ ಅವರನ್ನೂ ಬಳಸಿಕೊಳ್ಳಲು ಮುಂದಾಯಿತು. ಈ ಬಗ್ಗೆ ಹೆಚ್ಚೇನೂ ಪರಿಣತಿ ಹೊಂದಿಲ್ಲದ ಕೆಲವು ಸಂಪರ್ಕ ಕಾರ್ಯಕರ್ತೆಯರು ಈ ಹೊಸ ಜವಾಬ್ದಾರಿ ಹೊರಲು ಹಿಂದೇಟು ಹಾಕಿದರು. ಆದರೆ, ಕೆಲವರು ಸ್ವತಃ ಮುಂದೆ ಬಂದು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲೆವು ಎಂದು ತೋರಿಸಿಕೊಡುವ ಮೂಲಕ ಬಿಬಿಎಂಪಿ ತಲೆನೋವನ್ನು ಕಡಿಮೆ ಮಾಡಿದರು. ಅಂತಹ ಸಂಪರ್ಕ ಕಾರ್ಯಕರ್ತೆಯರಲ್ಲಿ ಸಿ.ವಿ.ರಾಮನ್‌ನಗರದ ಮೆಹರುನ್ನೀಸಾ (45 ವರ್ಷ) ಹಾಗೂ ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನ ತೇಜಾವತಿ ಟಿ. ಅವರೂ ಮುಂಚೂಣಿಯಲ್ಲಿದ್ದಾರೆ.

ದಿನದಲ್ಲಿ 100ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಸಂಗ್ರಹಿಸಿದ ಹೆಗ್ಗಳಿಕೆ ಮೆಹರುನ್ನೀಸಾ ಅವರದು. ಕೊಳೆಗೇರಿಗಳು, ಕಾರ್ಖಾನೆಗಳಲ್ಲಿ ಉತ್ಸಾಹದಿಂದ ಕೋವಿಡ್‌ ಪರೀಕ್ಷೆ ನಡೆಸುವ ಮೂಲಕ ಇವರು ಇತರರಿಗೆ ಮಾದರಿಯಾಗಿದ್ದರು. ಕೋವಿಡ್‌ ಪರೀಕ್ಷೆಗೆ ಸಹಕರಿಸದೇ ಬೈಯುವವರನ್ನು ಸಮಾಧಾನಪಡಿಸಿ, ಅದರ ಅಗತ್ಯವನ್ನು ಅವರಿಗೆ ಮನವರಿಕೆ ಮಾಡುತ್ತಾ ಕೋವಿಡ್‌ ನಿಯಂತ್ರಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಕೋವಿಡ್‌ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದರಲ್ಲೂ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

‘ನಿಗದಿಪಡಿಸಿದಕ್ಕಿಂತ ತುಸು ಹೆಚ್ಚೇ ಪರೀಕ್ಷೆಗಳನ್ನು ಮೆಹರುನ್ನೀಸಾ ನಡೆಸುತ್ತಿದ್ದರು. ಕೋವಿಡ್‌ನಂತಹ ಕಷ್ಟಕಾಲದಲ್ಲಿ ಇವರಂತಹವರ ಸಂಪರ್ಕ ಕಾರ್ಯಕರ್ತರು ತೋರಿದ ಅಮಿತೋತ್ಸಾಹ ಸ್ಮರಣೀಯ’ ಎಂದು ಕೊಂಡಾಡುತ್ತಾರೆ ಬಿಬಿಎಂಪಿ ಅಧಿಕಾರಿಗಳು. ಜನರ ನಡುವೆ ನಿಶಾ ಎಂದೇ ಗುರುತಿಸಿಕೊಂಡಿರುವ ಮೆಹರುನ್ನೀಸಾ 20 ವರ್ಷಗಳಿಂದ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

12. ಉತ್ಸಾಹದ ಬುಗ್ಗೆ ತೇಜಾವತಿ

ತೇಜಾವತಿ ಟಿ

ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನ ತೇಜಾವತಿ ಟಿ ಅವರು 25 ವರ್ಷಗಳಿಂದಲೂ ಬಿಬಿಎಂಪಿಯ ಸಂಪರ್ಕ ಕಾರ್ಯಕರ್ತೆಯಾಗಿದ್ದುಕೊಂಡು ಪಾಲಿಕೆಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ಅನುಭವಿ ಸಂಪರ್ಕ ಕಾರ್ಯಕರ್ತೆಯರಲ್ಲಿ ಒಬ್ಬರಾದ ತೇಜಾವತಿ ಅವರು ಕೋವಿಡ್‌ನ ಸಂಕಷ್ಟ ಕಾಲದಲ್ಲಿ ಜೀವವನ್ನು ಪಣಕ್ಕೊಡ್ಡಿ ಕರ್ತವ್ಯ ಪ್ರಜ್ಞೆಯ ಮೂಲಕ ಇತರರಿಗೆ ಮೇಲ್ಪಂಕ್ತಿ ಹಾಕಿದ್ದಾರೆ.

ಕೋವಿಡ್ ಪರೀಕ್ಷೆಗಾಗಿ ಗಂಟಲ ದ್ರವ ಸಂಗ್ರಹ ಕಾರ್ಯದಲ್ಲಿ ಇವರು ಮುಂಚೂಣಿಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಇತರರನ್ನೂ ಹುರಿದುಂಬಿಸಿದ್ದರು.

ಸಕಲ ಸವಲತ್ತುಗಳಿದ್ದರೂ ಒಂದಿಲ್ಲೊಂದು ನೆಪ ಹೇಳಿ ಕೋವಿಡ್‌ ಕರ್ತವ್ಯ ನಿಭಾಯಿಸಲು ಹಿಂದೇಟು ಹಾಕುತ್ತಿದ್ದ ವೇಳೆ ತೇಜಾವತಿ ಅವರಂತಹ ಮಹಿಳೆಯರು ಸವಲತ್ತುಗಳಿಗೆ ಕಾಯದೆ ತೋರಿದ ಸಮಯಪ್ರಜ್ಞೆ ಹಾಗೂ ಸ್ಥೈರ್ಯದಿಂದಾಗಿ ಬಿಬಿಎಂಪಿ ಈ ಸೋಂಕನ್ನು ನಿಯಂತ್ರಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಗಂಟಲ ದ್ರವ ಪರೀಕ್ಷೆಗೆ ನಿತ್ಯ ನಿಗದಿಪಡಿಸುತ್ತಿದ್ದ ಗುರಿಯನ್ನೂ ಮೀರಿದ ಸಾಧನೆಯನ್ನು ಯಾವತ್ತೂ ಮಾಡುತ್ತಾ ಬಂದಿದ್ದಾರೆ.

13. ರಜೆ ಪಡೆಯದೆ ರೋಗಿಗಳ ಆರೈಕೆ ಮಾಡಿದ ಪ್ರಶಾಂತ್‌

ಪ್ರಶಾಂತ್ ಗುತ್ತೇದಾರ್

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿದ್ದಂತೆ ಅತ್ಯಂತ ಹಳೆಯ ಆಸ್ಪತ್ರೆಯಾದ ವಿಕ್ಟೋರಿಯಾವನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು. ಈ ಆಸ್ಪತ್ರೆಯಲ್ಲಿ ಶುಶ್ರೂಷಕ ಅಧಿಕಾರಿಯಾಗಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ಗುತ್ತೇದಾರ್ ಅವರು, ಕಳೆದ 10 ತಿಂಗಳಿಂದ ಕೋವಿಡ್ ಪೀಡಿತರ ಸೇವೆಯಲ್ಲಿ ನಿರತರಾಗಿದ್ದಾರೆ. ಈ ಅವಧಿಯಲ್ಲಿ ಕುಟುಂಬದ ಸದಸ್ಯರಿಂದ ಅಂತರ ಕಾಯ್ದುಕೊಂಡಿರುವ ಅವರು, ಪತ್ನಿಯನ್ನೂ ಊರಿನಲ್ಲಿಯೇ ಬಿಟ್ಟುಬಂದಿದ್ದಾರೆ. ರೋಗಿಗಳ ಸೇವೆಯಲ್ಲಿಯೇ ತೃಪ್ತಿ ಕಂಡುಕೊಂಡಿದ್ದಾರೆ.

ಕಲಬುರ್ಗಿಯಲ್ಲಿ ಅವರ ಕುಟುಂಬ ನೆಲೆಸಿದ್ದು, ಐದು ವರ್ಷಗಳು ಪ್ರಾಧ್ಯಾಪಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ವೈದ್ಯರಾಗಬೇಕೆಂಬ ಅವರ ಕನಸು ಸಾಕಾರವಾಗದ ಕಾರಣ ಶುಶ್ರೂಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಕಳೆದ ಮಾರ್ಚ್‌ನಿಂದಲೇ ಕೋವಿಡ್‌ ಸೇವೆಯಲ್ಲಿ ನಿರತರಾಗಿರುವ ಅವರು, ಸಾವಿರಾರು ರೋಗಿಗಳಿಗೆ ಆರೈಕೆ ಮಾಡಿದ್ದಾರೆ. ತೀವ್ರ ನಿಗಾ ಘಟಕ ಹಾಗೂ ಸಾಮಾನ್ಯ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್‌ ಸೇವೆ ಪ್ರಾರಂಭವಾದ ಬಳಿಕ ಒಂದು ದಿನವೂ ರಜೆ ಪಡೆಯದೆಯೇ ಇವರು ಸೇವೆ ಸಲ್ಲಿಸಿದ್ದಾರೆ. ‘ನಮ್ಮ ವೃತ್ತಿಯೇ ರೋಗಿಗಳಿಗೆ ಉತ್ತಮ ಆರೈಕೆ ಮಾಡುವುದು. ಎಂತಹ ‍ಪರಿಸ್ಥಿತಿಯಲ್ಲಿಯೂ ರೋಗಕ್ಕೆ ಹೆದರಿ ಹಿಂದೆ ಸರಿಯಬಾರದು’ ಎನ್ನುತ್ತಾರೆ ಪ್ರಶಾಂತ್.

14. ಭೀತಿಯ ಅವಧಿಯಲ್ಲಿ ಧೈರ್ಯ ತುಂಬಿದ ಶಾಂತಾ

ಶಾಂತಾ ಎಂ

ರಾಜ್ಯದಲ್ಲಿ ಕೋವಿಡ್‌ ಭೀತಿ ಶುರುವಾಗುತ್ತಿದ್ದಂತೆ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯನ್ನು ಕೋವಿಡ್ ಸೇವೆಗೆ ಸಜ್ಜುಗೊಳಿಸಲಾಗಿತ್ತು. ಈ ವೇಳೆ ಆತಂಕ, ಭೀತಿಗೆ ಒಳಗಾದ ಶುಶ್ರೂಷಕರಿಗೆ ಧೈರ್ಯ ತುಂಬಿ, ಸೇವೆಗೆ ಅಣಿಗೊಳಿಸಿದವರು ಅಲ್ಲಿನ ಶುಶ್ರೂಷಾಧಿಕಾರಿ ಶಾಂತಾ ಎಂ.

ರಾಜ್ಯದಲ್ಲಿ ಮಾ.8ಕ್ಕೆ ಮೊದಲ ಪ್ರಕರಣ ವರದಿಯಾದರೂ ಫೆಬ್ರುವರಿಯಿಂದಲೇ ಅಲ್ಲಿ ಸೋಂಕು ಶಂಕಿತರಿಗೆ ತಪಾಸಣೆ, ಚಿಕಿತ್ಸೆ ಒದಗಿಸಲಾಗುತ್ತಿತ್ತು. ಸಾರ್ಸ್, ಎಬೋಲಾ, ಎಚ್‌1ಎನ್‌1 ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಸೋಂಕಿತರಿಗೆ ಆರೈಕೆ ಮಾಡಿದ ಅನುಭವವನ್ನು ಶಾಂತಾ ಹೊಂದಿದ್ದರು. ಇದರಿಂದಾಗಿ ರಾಜ್ಯದ ಪ್ರಥಮ ಕೋವಿಡ್ ಪೀಡಿತ ವ್ಯಕ್ತಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆರೈಕೆ ಮಾಡಿದ ಶುಶ್ರೂಷಕರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.

1992ರಲ್ಲಿ ಶುಶ್ರೂಷಕ ವೃತ್ತಿ ಪ್ರಾರಂಭಿಸಿದ ಇವರು ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 11 ತಿಂಗಳಿಂದ ಇವರು ಕೋವಿಡ್‌ ಸೇವೆಯಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್ ಸೇವೆಗೆ ನಿಯೋಜಿಸಲ್ಪಟ್ಟಿದ್ದ ಕೆಲ ಸಹೋದ್ಯೋಗಿಗಳು ಕೋವಿಡ್‌ ಪೀಡಿತರಾದ ಕಾರಣ ಅಧಿಕ ಅವಧಿ ಸೇವೆ ಸಲ್ಲಿಸಿದ ಇವರು, ಕ್ವಾರಂಟೈನ್‌ಗೆ ಒಳಪಡದೆಯೇ ಎರಡು ತಿಂಗಳು ಸತತ ಕಾರ್ಯನಿರ್ವಹಿಸಿದ್ದರು.

15. ಕೋವಿಡ್ ಪೀಡಿತರಿಗೆ ಹೆರಿಗೆ ಮಾಡಿಸಿದ ಡಾ.ಆಶಾಕಿರಣ್

ಡಾ. ಆಶಾಕಿರಣ್ ಟಿ. ರಾಥೋಡ್

ಕೋವಿಡ್ ಪೀಡಿತ ಗರ್ಭಿಣಿಯರು ಬಾಣಂತಿಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಅವರಿಗೆ ಕೊರೊನಾ ಸೋಂಕು ತಗುಲಿದಲ್ಲಿ ವಿಶೇಷ ಆರೈಕೆ ಅಗತ್ಯ. ಕಳೆದ 10 ತಿಂಗಳಲ್ಲಿ ಸುಮಾರು 450 ಕೋವಿಡ್‌ ಪೀಡಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿ, ತಾಯಿ ಮತ್ತು ಮಗುವನ್ನು ರಕ್ಷಿಸುವಲ್ಲಿ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಅಲ್ಲಿನ 25 ಮಂದಿ ವೈದ್ಯರ ತಂಡದಲ್ಲಿ ಡಾ. ಆಶಾಕಿರಣ್ ಟಿ. ರಾಥೋಡ್ ಕೂಡ ಕೋವಿಡ್ ಪೀಡಿತರಿಗೆ ಹೆರಿಗೆ ಹಾಗೂ ಆರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

2008ರಿಂದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಸಾವಿರಾರು ತಾಯಂದಿರಿಗೆ ಸಾಮಾನ್ಯ ಹಾಗೂ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿದ ಅನುಭವ ಹೊಂದಿರುವ ಇವರು, ಕೋವಿಡ್ ಕಾಣಿಸಿಕೊಂಡ ಬಳಿಕ ಸೋಂಕಿತರಿಗೆ ಕೂಡ ಆರೈಕೆ ಮಾಡಿದ್ದಾರೆ.

‘ಕೋವಿಡ್‌ ಪೀಡಿತ ಗರ್ಭಿಣಿಯರು ಹೆರಿಗೆ ವೇಳೆ ಹಾಗೂ ನಂತರ ಕೆಲ ದಿನಗಳು ಕುಟುಂಬದ ಸದಸ್ಯರಿಂದ ಪ್ರತ್ಯೇಕವಾಗಿ ಇರಬೇಕಾದ ಕಾರಣ ಅವರು ಮಾನಸಿಕವಾಗಿ ಕುಗ್ಗುವ ಸಾಧ್ಯತೆಗಳಿದ್ದವು. ಹಾಗಾಗಿ ಅವರ ಆತ್ಮಸ್ಥೈರ್ಯ ಹೆಚ್ಚಿಸಲು ಕೌನ್ಸೆಲಿಂಗ್ ನಡೆಸುವ ಜತೆಗೆ ಅವರೊಂದಿಗೆ ಹೆಚ್ಚಿನ ಅವಧಿ ಮಾತನಾಡಲಾಗುತ್ತಿತ್ತು. ಪಿಪಿಇ ಕಿಟ್ ಧರಿಸಿ ಸೇವೆ ಸಲ್ಲಿಸುವುದು ಸವಾಲಾಗಿತ್ತು’ ಎನ್ನುತ್ತಾರೆ ಡಾ.ಆಶಾಕಿರಣ್.

16. ಐಸಿಯುನಲ್ಲಿ ಸೇವೆ ಸಲ್ಲಿಸಿದ ಮಂಜುನಾಥ್

ಮಂಜುನಾಥ್ ಎಸ್‌.

ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಯುಳ್ಳವರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಹೆಚ್ಚಿನ ಅಪಾಯ ಮಾಡುವ ಸಾಧ್ಯತೆ ಇರುತ್ತದೆ. ಗಂಭೀರವಾಗಿ ಅಸ್ವಸ್ಥರಾದವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಒದಗಿಸಲಿದ್ದು, ವಿಶೇಷ ಕಾಳಜಿ ಅಗತ್ಯ. ಕಳೆದ 10 ತಿಂಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌ ಸೇವೆಯಲ್ಲಿ ನಿರತರಾಗಿರುವ ಮಂಜುನಾಥ್ ಎಸ್‌., ಸಾವು ಬದುಕಿನ ನಡುವೆ ಐಸಿಯುನಲ್ಲಿ ಹೋರಾಟ ನಡೆಸುತ್ತಿದ್ದ ಹಲವು ರೋಗಿಗಳಿಗೆ ಆರೈಕೆ ಮಾಡಿ, ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶುಶ್ರೂಷಕರಾಗಿರುವ ಇವರು ಮೂರುವರೆ ವರ್ಷಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಸೇವೆ ಪ್ರಾರಂಭವಾದ ಬಳಿಕ ಬಹುತೇಕ ದಿನ ಇವರು ಐಸಿಯುನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೋಂಕಿತರಿಗೆ ಚುಚ್ಚುಮದ್ದು, ಔಷಧ ನೀಡುವ ಜತೆಗೆ ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಯನ್ನು ಎದುರಿಸುತ್ತಿರುವವರಿಗೆ ಅಗತ್ಯ ಔಷಧವನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದರು. ಇದರಿಂದಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ ಬಳಿಕವೂ ರೋಗಿಗಳು ಅವರ ಸೇವೆಯನ್ನು ಸ್ಮರಿಸುತ್ತಿದ್ದಾರೆ.

ಮೈಸೂರಿನ ಮಂಜುನಾಥ್ ಅವರು, ಕೋವಿಡ್‌ ಸೇವೆಗೆ ನಿಯೋಜಿತರಾಗುತ್ತಿದ್ದಂತೆ ಪತ್ನಿ ಮತ್ತು ಮಕ್ಕಳನ್ನು ಊರಿಗೆ ಕಳುಹಿಸಿದ್ದಾರೆ. ಈಗ ಇಲ್ಲಿ ಒಬ್ಬರೇ ವಾಸವಿದ್ದಾರೆ.

‘ಕೋವಿಡ್‌ ಸೇವೆಗೆ ನಿಯೋಜನೆಗೊಂಡಾಗ ಆತಂಕ, ಭೀತಿಯಿತ್ತು. ಅದರಲ್ಲೂ ಪಿಪಿಇ ಕಿಟ್‌ ಧರಿಸಿ 6 ಗಂಟೆಗಳು ಸೇವೆ ಸಲ್ಲಿಸುವುದು ಸವಾಲಾಗಿತ್ತು. ಅತಿಯಾಗಿ ಮೈ ಬೆವರುತ್ತಿದ್ದ ಕಾರಣ ಆಯಾಸ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸುತ್ತಿದ್ದವು. ಪ್ರತಿ ವಾರ ನಡೆಸುವ ಕೋವಿಡ್ ಪರೀಕ್ಷೆಯ ಫಲಿತಾಂಶ ಏನಾಗುತ್ತದೆಯೇ ಎಂದು ಆತಂಕದಲ್ಲಿಯೇ ದಿನಗಳನ್ನು ಕಳೆಯಬೇಕಿತ್ತು’ ಎನ್ನುತ್ತಾರೆ ಮಂಜುನಾಥ್.

17. ಕೋವಿಡ್ ಜಯಿಸಿ ಸೇವೆ ನೀಡಿದ ಸುರೇಶ್

ಡಾ. ಸುರೇಶ್ ಕೆ.ಜಿ

ಕೊರೊನಾ ಸೋಂಕು ಕಾಣಿಸಿಕೊಂಡ ಪ್ರಾರಂಭಿಕ ದಿನಗಳಲ್ಲಿ ಖಾಸಗಿ ಆಸ್ಪತ್ರೆಯವರು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರೆ, ಕೆಲವು ಕ್ಲಿನಿಕ್‌ಗಳು ಬಾಗಿಲು ಮುಚ್ಚಿದವು. ಇಂತಹ ಸಂದರ್ಭದಲ್ಲಿ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯರು ಕೋವಿಡ್‌ ಹಾಗೂ ಕೋವಿಡೇತರ ಎರಡೂ ಸೇವೆಯನ್ನು ನೀಡಿದ್ದಾರೆ. ಅಲ್ಲಿನ ವೈದ್ಯರಲ್ಲಿ ಒಬ್ಬರಾದ ಡಾ. ಸುರೇಶ್ ಕೆ.ಜಿ ಅವರು ಕಾರ್ಯದೊತ್ತಡದ ನಡುವೆಯೂ ರೋಗಿಗಳನ್ನು ಕಾಳಜಿಯಿಂದ ಮಾತನಾಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ ಮಾರ್ಚ್‌ ತಿಂಗಳಿಂದ ಅವರು ಕೋವಿಡ್‌ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಧುಮೇಹ ಸೇರಿದಂತೆ ವಿವಿಧ ಕಾಯಿಲೆ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾದವರಿಗೆ ಕೂಡ ಚಿಕಿತ್ಸೆ ನೀಡಿದ್ದಾರೆ. ನಿರಂತರ ಕೋವಿಡ್ ಪೀಡಿತ ರೋಗಿಗಳ ಸಂಪರ್ಕದಲ್ಲಿದ್ದ ಅವರು ಕೂಡ ಈ ಮಧ್ಯೆ ಸೋಂಕಿತರಾಗಿದ್ದರು. ಆರೈಕೆ ವಿಧಾನದ ಬಗ್ಗೆ ತಿಳಿದಿದ್ದ ಕಾರಣ ಕೆಲ ದಿನಗಳಲ್ಲಿಯೇ ಚೇತರಿಸಿಕೊಂಡು, ಮತ್ತೆ ಸೇವೆಗೆ ಹಾಜರಾಗಿದ್ದಾರೆ. ಕಳೆದ 25 ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿರುವ ಅವರು, 10 ವರ್ಷಗಳಿಂದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋವಿಡ್ ಚಿಕಿತ್ಸೆ ಪ್ರಾರಂಭಿಸಿದ ಪ್ರಾರಂಭಿಕ ತಿಂಗಳಲ್ಲಿ ಕುಟುಂಬದ ಸದಸ್ಯರಿಂದ ಅಂತರ ಕಾಯ್ದುಕೊಂಡಿದ್ದ ಅವರು, ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಅಲ್ಲಿ ವೈದ್ಯರು ಇರದ ಪರಿಣಾಮ ಕೆಲ ದಿನಗಳು ಅಧಿಕ ಅವಧಿ ಕಾರ್ಯನಿರ್ವಹಿಸುವ ಮೂಲಕ ಸೇವಾ ಮನೋಭಾವ ಮೆರೆದಿದ್ದಾರೆ.

18. ಜನಜಾಗೃತಿ ಮೂಡಿಸಿದ ಮುರಳೀಧರ

ಡಾ.ಮುರಳೀಧರ

ಕೊರೊನಾ ವೈರಸ್‌ ರಾಜ್ಯಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರಾಜ್ಯವ್ಯಾಪಿ ಲಾಕ್‌ಡೌನ್‌ ಘೋಷಿಸಲಾಯಿತು. ಆಗ ಜನಸಾಮಾನ್ಯರ ಮಾತು ಹಾಗಿರಲಿ ವೈದ್ಯ ಸಮುದಾಯದಲ್ಲೂ ಈ ವೈರಸ್‌ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. ಆರಂಭದ ದಿನಗಳಲ್ಲಿ ಕೊರೊನಾ ಕುರಿತು ಜನಸಾಮಾನ್ಯರು ಮತ್ತು ವೈದ್ಯಕೀಯ ಸಮುದಾಯದಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯ ಮಾಡಿದ ಕೆಲವೇ ಜನರ ಪೈಕಿ ಜುಪಿಟರ್‌ ಆಸ್ಪತ್ರೆಯ ಡಾ.ಮುರಳೀಧರ ಅವರೂ ಒಬ್ಬರು. ಕೋವಿಡ್‌ ನಿರ್ವಹಣೆಗಾಗಿ ಸರ್ಕಾರ ತಜ್ಞರ ತಂಡವನ್ನು ರಚಿಸುವ ಮೊದಲೇ ಮುರಳೀಧರ ಅವರು ವೈದ್ಯಕೀಯ ಕ್ಷೇತ್ರದ ಪರಿಣಿತರ ತಂಡವೊಂದನ್ನು ರಚಿಸಿದರು.

ಲಾಕ್‌ಡೌನ್‌ ಸಂದರ್ಭ ನಾಲ್ಕು ತಿಂಗಳ ಕಾಲ ಈ ತಂಡ ಕಾರ್ಯನಿರ್ವಹಿಸಿತ್ತು. ಈ ಕುರಿತ ಮಾಹಿತಿ ಇಲ್ಲದ ಕಾರಣ ಅರಿವು ಮೂಡಿಸುವ ಉದ್ದೇಶದಿಂದ ವೈದ್ಯರು ಮತ್ತು ಜನಸಾಮಾನ್ಯರಿಗಾಗಿ ನಿರಂತರ ವೆಬಿನಾರ್‌ಗಳನ್ನು ಮಾಡಿದರು. ಜತೆಗೆ ಕೋವಿಡ್‌ ಚಿಕಿತ್ಸೆ ನೀಡುವಾಗ ಎದುರಾಗುತ್ತಿದ್ದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅದನ್ನು ಸರಿಪಡಿಸುವ ಕಾರ್ಯಕ್ಕೂ ಒತ್ತು ನೀಡಿದ್ದರು.

ಕೋವಿಡ್‌ ಲಕ್ಷಣ ಬಹಿರಂಗವಾಗಿ ಕಾಣಿಸಿಕೊಳ್ಳದವರಿಗೆ ಹೋಂ ಕ್ವಾರಂಟೈನ್‌ ಮಾಡಬಹುದು ಎಂಬ ಪರಿಕಲ್ಪನೆಯನ್ನು ನೀಡಿದರು. ಅದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರೂಪದಲ್ಲಿ ಹರಿ ಬಿಟ್ಟಾಗ ತುಂಬಾ ವೈರಲ್‌ ಆಗಿತ್ತು. ಬಳಿಕ ಅದು ಚಾಲ್ತಿಗೆ ಬಂದಿತು.

19. ಬಡಮಕ್ಕಳ ಶಿಕ್ಷಣಕ್ಕೆ ನೆರವಾದ ವಿಠ್ಠಲ್‌ ದಂಪತಿ

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಲೆಯೂ ಇಲ್ಲದೆ, ಶಿಕ್ಷಣವೂ ದೊರೆಯದೆ ಕಷ್ಟಕ್ಕೆ ಈಡಾದವರು ಬಡ ವಿದ್ಯಾರ್ಥಿಗಳು. ಖಾಸಗಿ ಶಾಲೆಯ ಸ್ಥಿತಿವಂತ ಮಕ್ಕಳು ಆನ್‌ಲೈನ್‌ ಮೂಲಕವಾದರೂ ತರಗತಿ ಕೇಳುತ್ತಿದ್ದರೆ, ಈ ಸೌಲಭ್ಯದಿಂದಲೂ ಅನೇಕ ವಿದ್ಯಾರ್ಥಿಗಳು ವಂಚಿತರಾಗಿದ್ದರು. ಇದನ್ನು ಮನಗಂಡು, ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್‌ಲೈನ್‌ ತರಗತಿ ನಡೆಸಿದವರು ಬೆಂಗಳೂರಿನ ಬದರಿನಾಥ ವಿಠ್ಠಲ್‌ ಮತ್ತು ಇಂದಿರಾ ವಿಠ್ಠಲ್‌ ದಂಪತಿ.

ಬದರಿನಾಥ ವಿಠ್ಠಲ್‌ ಮತ್ತು ಇಂದಿರಾ ವಿಠ್ಠಲ್‌ ದಂಪತಿ

ಕೊರೊನಾ ಸೇನಾನಿಗಳಷ್ಟೇ ಮಹತ್ವದ ಸೇವೆಯನ್ನು ಅವರು, ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಾಡಿದ್ದಾರೆ. ಪಾಠ ಮಾಡುವುದಷ್ಟೇ ಅಲ್ಲದೆ, ಆನ್‌ಲೈನ್‌ ತರಗತಿ ಕೇಳಲು ಅಗತ್ಯವಾಗಿ ಬೇಕಾದ ಸ್ಮಾರ್ಟ್‌ ಫೋನ್ ಹಾಗೂ ವೈ–ಫೈ ಸೌಲಭ್ಯವನ್ನೂ ಒದಗಿಸಿದ್ದಾರೆ. ಬದರಿನಾಥ ಅವರಿಗೆ 83 ವರ್ಷ, ಇಂದಿರಾ ಅವರ ವಯಸ್ಸು 78. ಸೇವೆಯಿಂದ ನಿವೃತ್ತಿಗೊಂಡು 20 ವರ್ಷಗಳೇ ಕಳೆದಿದ್ದರೂ, ಸದ್ಯ ಸೇವೆಯಲ್ಲಿರುವ ಶಿಕ್ಷಕರಿಗಿಂತಲೂ ಹೆಚ್ಚು ಉತ್ಸಾಹದಿಂದ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈಗ 5ರಿಂದ 12ನೇ ತರಗತಿಯಲ್ಲದೆ, ಪದವಿಯವರೆಗಿನ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ತರಗತಿ ನಡೆಸುತ್ತಿದ್ದಾರೆ. ಹಿರಿಯ ದಂಪತಿಯ ಈ ಉತ್ಸಾಹ ಕಂಡು, 25 ಶಿಕ್ಷಕರು, 100 ಸ್ವಯಂಸೇವಕರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಕೇವಲ 9 ವಿದ್ಯಾರ್ಥಿಗಳಿಗೆ ನಡೆಯುತ್ತಿದ್ದ ತರಗತಿ, ಈಗ 250 ವಿದ್ಯಾರ್ಥಿಗಳಿಗೆ ವಿಸ್ತರಿಸಿಕೊಂಡಿದೆ.

ಆನ್‌ಲೈನ್‌ ತರಗತಿ ಕೇಳಲು ಮಕ್ಕಳಿಗೆ ಫೋನ್‌ ಕೊಡಿಸಲು ಕೆಲವು ಪೋಷಕರಿಗೆ ಸಾಧ್ಯವಾಗದಿದ್ದಾಗ, ಬದರಿನಾಥ ದಂಪತಿ ಮತ್ತು ಇತರೆ ದಾನಿಗಳು ಸೇರಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ 50ಕ್ಕೂ ಹೆಚ್ಚು ಸ್ಮಾರ್ಟ್‌ ಫೋನ್ ಕೊಡಿಸಿದ್ದಾರೆ. ಆ ಮೂಲಕ ನಿವೃತ್ತಿ ಜೀವನವನ್ನು ಅರ್ಥಪೂರ್ಣವಾಗಿ ಕಳೆಯುತ್ತಿದ್ದಾರೆ.

20. 350 ಶವ ಸಾಗಿಸಿದ ಅಮೀರ್ ಜಾನ್

ಅಮೀರ್ ಜಾನ್

ಕೋವಿಡ್‌ನಿಂದ ಮೃತಪಟ್ಟವರ ಶವವನ್ನು ಆಸ್ಪತ್ರೆಯಿಂದ ಶವಾಗಾರಕ್ಕೆ ಸಾಗಿಸಲು ಹಿಂದು ಮುಂದು ನೋಡದೆ ಮುನ್ನುಗ್ಗಿದ ಆಂಬುಲೆನ್ಸ್ ಚಾಲಕ ಅಮೀರ್ ಜಾನ್ ಅವರು ಸುಮಾರು 350 ಮಂದಿಯ ಶವಸಂಸ್ಕಾರಕ್ಕೆ ನೆರವಾಗಿದ್ದಾರೆ.

ಖಾಸಗಿ ಬಸ್ ಚಾಲಕರಾಗಿದ್ದ ಅಮೀರ್ ಜಾನ್, ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಬರಿಗೈ ಆಗಿದ್ದರು. ಆ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕನಾಗುವ ಮನಸ್ಸು ಮಾಡಿದರು. ಜೀವನೋಪಾಯದ ಜತೆಗೆ ಕೋವಿಡ್ ವಿರುದ್ಧ ಹೋರಾಟ ಮಾಡಬೇಕು ಎಂಬ ಛಲ ಅವರಲ್ಲಿ ಇತ್ತು.

ಬೆಂಗಳೂರಿನಲ್ಲಿ ಕೋವಿಡ್‌ನಿಂದ ಮೃತಪಟ್ಟ ಮೊದಲ ವ್ಯಕ್ತಿಯನ್ನು ಐಸಿಯುನಿಂದ ತಾವೇ ಎತ್ತಿಕೊಂಡು ಶವಾಗಾರಕ್ಕೆ ಸಾಗಿಸಿದ ಅಮೀರ್ ಜಾನ್ ಅವರು ಈವರೆಗೆ 350 ಮಂದಿಯ ಶವ ಸ್ಥಳಾಂತರಿಸಿದ್ದಾರೆ.

‘ಮೃತಪಟ್ಟವ ಕುಟುಂಬದವರು ಕ್ವಾರಂಟೈನ್‌ನಲ್ಲಿ ಇದ್ದ ಕಾರಣ ನಾನೇ ಮುಂದೆ ನಿಂತು ಮೃತರ ಸಂಪ್ರದಾಯಗಳಂತೆ ಅಂತ್ಯಕ್ರಿಯೆ ನೆರವೇರಿಸಿದ್ದೇನೆ’ ಎಂದು ಹೇಳುತ್ತಾರೆ ಅಮೀರ್‌ ಜಾನ್.

‘ಆಂಬುಲೆನ್ಸ್ ಚಾಲಕ ಎಂಬ ಕಾರಣಕ್ಕೆ ಊರಿಗೆ ಸೇರಿಸಲು ಜನ ಅನುಮಾನ ಮಾಡುತ್ತಿದ್ದರು. ಚಿಂತಾಮಣಿಯಲ್ಲಿನ ಹಳ್ಳಿಯಲ್ಲಿ ಇದ್ದ ಹೆಂಡತಿ ಮತ್ತು ಮಕ್ಕಳನ್ನು ಮೂರು ತಿಂಗಳ ಕಾಲ ನೋಡಲು ಹೋಗಲೇ ಇಲ್ಲ. ವಿಡಿಯೊ ಕರೆ ಮೂಲಕ ಅವರನ್ನು ಮಾತನಾಡಿಸುತ್ತಿದ್ದೆ. ರಂಜಾನ್ ಹಬ್ಬವನ್ನೂ ಆಸ್ಪತ್ರೆಯಲ್ಲೇ ಮಾಡಿದ್ದೆ’ ಎಂದು ಅಮೀರ್ ವಿವರಿಸಿದರು.

21. ನಿವೃತ್ತ ಅಂಚಿನಲ್ಲೂ ದಣಿವರಿಯದ ಚಾಲಕ ನಂಜಪ್ಪ

ನಂಜಪ್ಪ

ನಿವೃತ್ತಿಯ ಅಂಚಿನಲ್ಲಿರುವ ನಂಜಪ್ಪ(61) ಕೆಎಸ್‌ಆರ್‌ಟಿಸಿ ಚಾಲಕರಾಗಿ ಬೆಂಗಳೂರು ಕೇಂದ್ರ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಮನೆಗೇ ಹೋಗದೆ ಡಿಪೋನಲ್ಲೇ ಕರ್ತವ್ಯ ನಿರ್ವಹಿಸುವ ಮೂಲಕ ಕೋವಿಡ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದರು.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಗೇಶಪುರ ಗ್ರಾಮದವರಾದ ಇವರು, ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರಿನ ಕೇಂದ್ರ ಘಟಕದಲ್ಲೇ ಉಳಿದುಕೊಂಡು ಕೋವಿಡ್ ತಡೆಗಟ್ಟುವ ಕೆಲಸಕ್ಕೆ ನೆರವಾದರು.

ಘಟಕದಲ್ಲೇ ಇದ್ದ ಎಲ್ಲಾ ಬಸ್‌ಗಳನ್ನು ಆಗಾಗ ಚಾಲನೆ ಮಾಡಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಜೊತೆಗೆ ಕೋವಿಡ್‌ ಕರ್ತವ್ಯಕ್ಕೆ ಹೋಗುವ ಬಸ್‌ಗಳು ಡಿಪೋಗೆ ವಾ‍ಪಸ್ ಬಂದರೆ ಅವುಗಳನ್ನು ಸ್ವಚ್ಛಗೊಳಿಸುವ ಕೆಲಸ ನಿರ್ವಹಿಸಿದರು. ಕೋವಿಡ್ ವಿರುದ್ಧ ಜಾಗೃತಿಯನ್ನೂ ಮೂಡಿಸಿದರು. ಇಳಿ ವಯಸ್ಸನ್ನೂ ಲೆಕ್ಕಿಸದೆ ಮುಂದೆ ನಿಂತ ಇವರ ಕಾರ್ಯ ಇತರರಿಗೆ ಮಾದರಿ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.