ಬೆಂಗಳೂರು ನಗರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ಬರುವುದು ಬಲು ದುಸ್ತರವಾಗಿದೆ. ಇದೇನು ಒಂದೆರಡು ವರ್ಷಗಳಲ್ಲಿ ಸೃಷ್ಟಿಯಾದ ಗೋಳಲ್ಲ. ದಶಕಗಳಿಂದಲೂ ಬೆಂಗಳೂರಿಗರು ಈ ಯಾತನೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. ನಾಗರಿಕರ ಬವಣೆಯನ್ನು ನೀಗಿಸಲು ಸರ್ಕಾರವೂ ಗಮನ ನೀಡಿ ಆಯಾ ಕಾಲಕ್ಕೆ ಹಲವೆಡೆ ರಸ್ತೆಗಳ ವಿಸ್ತರಣೆಯನ್ನು ಸಹ ಮಾಡಿದೆ. ಹಲವು ಪ್ರಮುಖ ಜಂಕ್ಷನ್‌ಗಳಲ್ಲಿ ಮೇಲುಸೇತುವೆ,ಕೆಳಸೇತುವೆಗಳನ್ನೂ ನಿರ್ಮಿಸಿದೆ. ಇನ್ನೂ ಒಂದಷ್ಟು ಇಂತಹ ಕಾಮಗಾರಿಗಳು ನಡೆಯುತ್ತಿವೆ. ಆದರೆ,ಅವುಗಳು ನಡೆದಿರುವುದು ಮಾತ್ರ ಆಮೆವೇಗದಲ್ಲಿ! ಕುಂಟುವುದು ಮಾತ್ರವಲ್ಲ,ತೆವಳಲು ಸಹ ಆ ಕಾಮಗಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಕಿರಿದಾಗಿರುವ ರಸ್ತೆಗಳಲ್ಲಿ ಸಾಗಲು ವಾಹನ ಚಾಲಕರು ಪರದಾಡುವುದು ಸಹ ತಪ್ಪುತ್ತಿಲ್ಲ.
ನಗರದ ಹಲವು ಭಾಗಗಳಲ್ಲಿ ಈಗ ಬೃಹತ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪರಿಣಾಮವಾಗಿ ಹಲವಾರು ರಸ್ತೆಗಳು ದೂಳುಮಯವಾಗಿವೆ. ವಾಹನ ಸವಾರರು ಅದರಲ್ಲೂ ದ್ವಿಚಕ್ರ,ಆಟೊಗಳಲ್ಲಿ ಸಂಚರಿಸುವವರಿಗೆ ಪ್ರತಿನಿತ್ಯ ದೂಳಿನ ಮಜ್ಜನವಾಗುತ್ತಿದೆ. ನಾನಾ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಆದರೆ,ಪ್ರಮುಖ ಮೇಲುಸೇತುವೆ ನಿರ್ಮಾಣ ಕಾಮಗಾರಿಗಳ ವಿಳಂಬಕ್ಕೆ ಈಗ ಕೊರೊನಾದ ನೆಪ ಹೇಳುತ್ತಿರುವುದು ಮಾತ್ರ ವಿಪರ್ಯಾಸ. ಕೊರೊನಾ ಸೋಂಕು ರಾಜ್ಯದಲ್ಲಿ ಮೊದಲು ಕಾಣಿಸಿಕೊಂಡದ್ದು ಕಳೆದ ಮಾರ್ಚ್ ತಿಂಗಳಿನಲ್ಲಿ. ಆದರೆ,ಈಗ ಕೈಗೊಂಡಿರುವ ಅನೇಕ ಕಾಮಗಾರಿಗಳು2020ಜನವರಿಗಿಂತ ಮೊದಲೇ ಪೂರ್ಣಗೊಳ್ಳಬೇಕಿದ್ದವು. ಆರು ತಿಂಗಳು ಕಾಮಗಾರಿ ನಡೆಯಲಿಲ್ಲ ಎಂದಮಾತ್ರಕ್ಕೆ ಎಲ್ಲ ವೈಫಲ್ಯಕ್ಕೂ ಕೊರೊನಾದತ್ತ ಬೊಟ್ಟು ಮಾಡುವುದು ಸರಿಯೇ?ಉದಾಹರಣೆಗೆ,ಶಿವಾನಂದ ವೃತ್ತದಲ್ಲಿ2017ರ ಜೂನ್‌ನಲ್ಲಿ ಕೈಗೆತ್ತಿಕೊಂಡ ಉಕ್ಕಿನ ಸೇತುವೆ ನಿರ್ಮಾಣ ಕಾರ್ಯ ಒಂಬತ್ತು ತಿಂಗಳಲ್ಲಿ ಪೂರ್ಣವಾಗಬೇಕಿತ್ತು. ಮೂರು ವರ್ಷವಾದರೂ ಮುಗಿಯದ ಈ ಕಾಮಗಾರಿಯನ್ನು ಇನ್ನೂ ಮುಗಿಸಲು ಸಾಧ್ಯವಾಗದಿರುವುದಕ್ಕೆ ಕೊರೊನಾ ಸೋಂಕನ್ನು ಲಿಂಕ್ ಮಾಡಿದರೆ ನಗೆಪಾಟಿಲಿಗೆ ಈಡಾಗುತ್ತೇವೆ ಎಂಬುದನ್ನೂ ಅಧಿಕಾರಿಗಳು ಯೋಚಿಸುವುದಿಲ್ಲ ಎಂದರೆ ಏನು ಹೇಳುವುದು?
ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಾಗ ಅದನ್ನು ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿರುತ್ತದೆ. ಆದರೆ,ಗಡುವಿನೊಳಗೆ ಯಾವ ಯೋಜನೆಯೂ ಪೂರ್ಣವಾಗುವುದಿಲ್ಲ. ಪದೇ ಪದೇ ಗಡುವು ವಿಸ್ತರಣೆ ಸರ್ವೇ ಸಾಮಾನ್ಯ ಸಂಗತಿ. ಆದರೆ,ಅನುಭವದಿಂದ ಪಾಠ ಕಲಿಯುವ ಬದಲಿಗೆ ಎಲ್ಲ ಪ್ರಮುಖ,ಅದರಲ್ಲೂ ಬೃಹತ್ ಕಾಮಗಾರಿಗಳ,ಗುತ್ತಿಗೆಯನ್ನು ತಮಗೆ ಬೇಕಾದವರಿಗೇ ದೊರಕಿಸಿಕೊಡಲು ನೀತಿ ನಿರೂಪಕರು ಪಟ್ಟು ಹಿಡಿಯುತ್ತಾರೆ. ಮೇಲುಸೇತುವೆ,ಕೆಳಸೇತುವೆಗಳ ನಿರ್ಮಾಣ,ಸುಸಜ್ಜಿತ ರಸ್ತೆಗಳ ನಿರ್ಮಾಣ (ವೈಟ್ ಟಾಪಿಂಗ್) ಇತ್ಯಾದಿ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬುದು ಒಪ್ಪುವಂತಹ ವಿಚಾರ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂಬ ಹೆಸರಲ್ಲಿ, ಅನನುಭವಿ,ಮೂಲ ಸೌಕರ್ಯ ಹೊಂದಿಲ್ಲದ, ಹಣಕಾಸು ಕ್ರೋಡೀಕರಿಸುವ ಸಾಮರ್ಥ್ಯವಿಲ್ಲದ ದೂರದೂರಿನ ಗುತ್ತಿಗೆದಾರರನ್ನು ಕರೆತಂದು ಕಾಮಗಾರಿಗಳನ್ನು ಕೊಡಿಸುವ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಈ ರೀತಿ ಗುತ್ತಿಗೆ ಪಡೆದವರಲ್ಲಿ ಅನೇಕರು ಅವುಗಳ ಅನುಷ್ಠಾನಕ್ಕೆ ಇಲ್ಲಿಂದಲೇ ಹಣ ಪಡೆದು ವಿನಿಯೋಗಿಸಬೇಕಾದ ಅನಿವಾರ್ಯತೆಯಲ್ಲಿ ಇದ್ದಾರೆ.
ಅದೇ,ದೊಡ್ಡ ದೊಡ್ಡ ಕಂಪನಿಗಳ ಬಳಿ ಅಗತ್ಯವಾದ ಮೂಲ ಸೌಕರ್ಯ,ಅನುಭವ ಹೊಂದಿದ್ದು,ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಸಾಮರ್ಥ್ಯವಿದ್ದರೂ ಅವುಗಳಿಗೆ ಗುತ್ತಿಗೆ ಸಿಗುವುದೇ ಇಲ್ಲ. ಏಕೆಂದರೆ,ಗುಣಮಟ್ಟದಲ್ಲಿ ರಾಜಿಗೆ ಸಿದ್ಧವಿರದ ಇಂತಹ ಕಂಪನಿಗಳು‘ಕೊಡುಗೈ ದಾನಿ’ಆಗಿರುವುದಿಲ್ಲ. ಅವು ಒಂದು ಚೌಕಟ್ಟು ಹಾಕಿಕೊಂಡಿರುತ್ತವೆ. ಯಾವುದೇ ಕಾರಣಕ್ಕೂ ಅದನ್ನು ಮೀರುವುದಿಲ್ಲ. ಇಂತಹವರಿಗೆ ಗುತ್ತಿಗೆ ಕೊಟ್ಟರೆ ಹೇಗೆ ಎಂಬ ಕಾರಣಕ್ಕೆ ತಮಗೆ ಬೇಕಾದವರಿಂದ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿಸಿ,ಅವರಿಗೇ ಗುತ್ತಿಗೆ ಸಿಗುವಂತೆ ಮಾಡುವ ರಂಗೋಲಿ ಕೆಳಗೆ ತೂರುವ ವ್ಯವಸ್ಥೆ ನಿರ್ಮಾಣವಾಗಿ ಬಹಳ ವರ್ಷಗಳಾಗಿ ಬಿಟ್ಟಿದೆ. ಇದನ್ನು ತಪ್ಪಿಸಲು ಯಾರಿಗೂ ಇಷ್ಟವಿಲ್ಲ. ಹಾಗಾಗಿ,ಜನರು ಯಾತನೆ ಪಡುವ ಅವಧಿಯೂ ಲಂಬಿಸುತ್ತಿದೆ.
ಈಗ ನಿರ್ಮಾಣ ವಲಯದಲ್ಲಿ ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಆದರೂ ಕಾಮಗಾರಿಯಲ್ಲಿನ ವಿಳಂಬವನ್ನು ಮಾತ್ರ ತಪ್ಪಿಸಲು ಆಗಿಲ್ಲ.ಮೇಲುಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ಅಗತ್ಯವಾದ ಸಿಮೆಂಟ್ ಬ್ಲಾಕ್‌ಗಳನ್ನು ಹೆಚ್ಚು ತಯಾರಿಸುವ ಸಾಮರ್ಥ್ಯವನ್ನು ಗುತ್ತಿಗೆದಾರ ಹೊಂದಿರಬೇಕು. ದಿನಕ್ಕೆ ಒಂದೋ,ಎರಡೋ ಬ್ಲಾಕ್‌ಗಳನ್ನು ತಯಾರಿಸಿದರೆ ಮೇಲುಸೇತುವೆ ಪೂರ್ಣವಾಗಲೂ ತಡವಾಗದೆ ಇರುತ್ತದೆಯೇ? ಅಂದರೆ, ಗುತ್ತಿಗೆ ನೀಡುವಾಗ ಈ ಅಂಶಗಳೆಲ್ಲ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲವೇ?ಎಲ್ಲವೂ ಗೊತ್ತಿರುತ್ತದೆ. ಜಾಣ ಕುರುಡು,ಜಾಣ ಕಿವುಡು ನೀತಿಯಲ್ಲಿ ಅನುಮೋದನೆಯಾಗುತ್ತದೆ. ಗುತ್ತಿಗೆ ಸಿಕ್ಕಿದ ಮೇಲೆ, ಅವರು ತಮಗೆ ಆದಾಗ,ಆಗೊಮ್ಮೆ ಈಗೊಮ್ಮೆ ಆ ಜಾಗದಲ್ಲಿ ಕೆಲಸ ನಡೆಯುತ್ತಿದೆ ಎಂಬುದನ್ನು ತೋರಿಸಲು ನಾಲ್ಕೈದು ಜನ ಕೆಲಸದವರು ಕಾಣುವಂತೆ ಮಾಡುತ್ತಾರೆ. ಇಲ್ಲದಿದ್ದರೆ ವರ್ಷದಲ್ಲಿ ಮುಗಿಯಬೇಕಾದ ಕಾಮಗಾರಿ ಪೂರ್ಣಗೊಳ್ಳಲು3–4ವರ್ಷ ಬೇಕಾಗುತ್ತದೆಯೇ?ಈ ಯೋಜನೆಗಳನ್ನು ಗಡುವಿನ ಒಳಗೆ ಪೂರ್ಣಗೊಳಿಸಲು24ಗಂಟೆ ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು. ಗುತ್ತಿಗೆದಾರರ ಮೇಲೆ ಒತ್ತಡ ಹಾಕುವ ಶಕ್ತಿ ಅನುಷ್ಠಾನ ಅಧಿಕಾರಿಗೆ ಇರಬೇಕು. ಈ ಶಕ್ತಿ ಅಧಿಕಾರಿಗಳಿಗೆ ಇಲ್ಲದಿರುವುದರಿಂದ ಸಾರ್ವಜನಿಕರು ಯಾತನೆ ಪಡಬೇಕಾಗಿದೆ.
ಬೆಂಗಳೂರಿನಲ್ಲಿ ಕೈಗೊಂಡಿರುವ ಎಲ್ಲ ಬೃಹತ್ ಕಾಮಗಾರಿಗಳನ್ನೂ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳಿಗೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ತನ್ನ ಹಣ ಕೊಡುವುದಿಲ್ಲ. ಹಾಗಾಗಿ, ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಆ ಯೋಜನೆ ಬಿಟ್ಟು ಅನ್ಯ ಕಾಮಗಾರಿಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಬೃಹತ್ ಕಾಮಗಾರಿಗಳನ್ನು ಕಡ್ಡಾಯವಾಗಿ ದೊಡ್ಡ ನಿರ್ಮಾಣ ಕಂಪನಿಗಳಿಗೆ ಗುತ್ತಿಗೆಯನ್ನು ಕೊಡಬೇಕು. ಸಕಾಲದಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಬೇಕು. ಪಾಲಿಕೆಯ ಹಣದಲ್ಲಿ ವಾರ್ಡ್‌ಗಳ ನಿರ್ವಹಣೆ,ಸಣ್ಣಪುಟ್ಟ ಕಾಮಗಾರಿಗಳು,ಮರು ಡಾಂಬರೀಕರಣ,ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಮೊದಲಾದವನ್ನು ನಿರ್ವಹಿಸಿದರೆ ಸಾಕು. ಈ ಕೆಲಸಗಳನ್ನು ಪಾಲಿಕೆ ಗುತ್ತಿಗೆದಾರರಿಗೆ ವಹಿಸಬಹುದು.
ಯೋಜನೆ ಅನುಷ್ಠಾನದ ಹೊಣೆ ಹೊತ್ತ ಎಂಜಿನಿಯರುಗಳು ದಕ್ಷತೆ,ಬದ್ಧತೆ ಹೊಂದಿರಬೇಕು,ಕುಶಾಗ್ರಮತಿಗಳಾಗಿರಬೇಕು. ಈಗ ಇಂತಹ ಎಂಜಿನಿಯರುಗಳ ಕೊರತೆ ಪಾಲಿಕೆಗೆ ಇದೆ ಎಂದು ಕೆಲ ನಿವೃತ್ತ ಎಂಜಿನಿಯರ್‌ಗಳು ಅಭಿಪ್ರಾಯ ಪಡುತ್ತಾರೆ. ಕಾಮಗಾರಿಗಳ ನಿರ್ವಹಣೆಯನ್ನು ಗಮನಿಸಿದಾಗ ಈ ಅಭಿಪ್ರಾಯವನ್ನು ಅಲ್ಲಗಳೆಯಲು ಆಗದು.
ಒಂದೇ ರಸ್ತೆಗೆ ಎರಡೆರಡು ಸಲ ಕಾಮಗಾರಿ ಮಂಜೂರಿ ಮಾಡಿಸುವಂತಹ ಭ್ರಷ್ಟಾಚಾರದ ಆಟಗಳು ನಡೆಯದಂತೆ ನೋಡಿಕೊಳ್ಳಲು,ಗುತ್ತಿಗೆದಾರರ ರಸ್ತೆ ನಿರ್ವಹಣಾ ಅವಧಿಯ ಹೊಣೆಯನ್ನು ದಾಖಲಿಸಲು,ಕಾಮಗಾರಿಯಲ್ಲಿ ಆಗುವ ವಿಳಂಬ ತಪ್ಪಿಸಲು‘ರಸ್ತೆ ಇತಿಹಾಸ’ದ ವ್ಯವಸ್ಥೆಯನ್ನು ಬಿಬಿಎಂಪಿಯಲ್ಲಿ ಈ ಹಿಂದೆ ರೂಪಿಸಲಾಗಿತ್ತು. ಅಂತರರಾಷ್ಟ್ರೀಯ ಪ್ರಶಸ್ತಿಯ ತುರಾಯಿಯೂ ಅದಕ್ಕೆ ಸಿಕ್ಕಿತ್ತು. ಆದರೆ, ‘ರಸ್ತೆ ಇತಿಹಾಸ’ ನಿರ್ವಹಣೆ ಯೋಜನೆ ಅನುಷ್ಠಾನಗೊಂಡ ವೇಗದಲ್ಲೇ ಭ್ರಷ್ಟರ ಕೂಟ ಅದನ್ನು ನೇಪಥ್ಯಕ್ಕೆ ಸರಿಯುವಂತೆ ಮಾಡಿತು.
ಬೃಹತ್ ಕಾಮಗಾರಿಗಳನ್ನು ನಿರ್ವಹಿಸುವಾಗ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಬೇಕಾದ ಅಗತ್ಯ ಬಹಳ ಇದೆ. ಏಕೆಂದರೆ,ಕಾಮಗಾರಿಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬಕ್ಕೆ ಸಮನ್ವಯದ ಕೊರತೆಯೂ ಮುಖ್ಯ ಕಾರಣವಾಗಿದೆ. ನೀರಿನ ಪೈಪುಗಳು,ವಿದ್ಯುತ್ ಕೇಬಲ್,ಆಪ್ಟಿಕಲ್ ಫೈಬರ್ ಕೇಬಲ್ ಸ್ಥಳಾಂತರ,ವಾಹನಗಳ ಸಂಚಾರ ನಿರ್ಬಂಧಿಸುವುದು,ಭೂ ಸ್ವಾಧೀನ ವಿಳಂಬ ಮೊದಲಾದ ಕಾರಣಗಳು ಕಾಮಗಾರಿಗೆ ಅಡ್ಡಿಯಾಗುತ್ತಿವೆ. ರಾಜ್ಯ ಸರ್ಕಾರದ ಈಗಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಈ ಹಿಂದೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದಾಗ ಅಧಿಕಾರಿಗಳ ಒಂದು ಸಮನ್ವಯ ಸಮಿತಿಯನ್ನೇನೋ ಮಾಡಿದರು. ಅವರು ಚುನಾಯಿತ ಕೌನ್ಸಿಲ್‌ಗೆ ಅಧಿಕಾರ ವರ್ಗಾಯಿಸಿಕೊಟ್ಟು ಬರುತ್ತಿದ್ದಂತೆಯೇ ಆ ಸಮನ್ವಯ ಸಮಿತಿಯೂ ತನ್ನ ಕೆಲಸವನ್ನು ಮರೆತುಬಿಟ್ಟಿತು.
ಕಾಮಗಾರಿಗಳ ವಿಳಂಬ ತಪ್ಪಿಸಲುಬೆಂಗಳೂರಿಗೆ ಪ್ರತ್ಯೇಕವಾದ ವಿಶೇಷ ವಾಹಕವನ್ನು ತುರ್ತಾಗಿ ಸ್ಥಾಪಿಸಬೇಕು. ಅದರಲ್ಲಿ ಪಾಲಿಕೆ ಆಯುಕ್ತರು,ಜಲಮಂಡಳಿ,ಬೆಸ್ಕಾಂ,ಬೆಂಗಳೂರು ನಗರ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು,ಸಂಚಾರ ಪೊಲೀಸ್ ವಿಭಾಗದ ಮುಖ್ಯಸ್ಥರು,ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಈ ವಿಶೇಷ ವಾಹಕದ ಸದಸ್ಯರಾಗಿರಬೇಕು. ಇವರೆಲ್ಲರೂ ಪ್ರತಿ ವಾರಕ್ಕೊಮ್ಮೆಯೋ15ದಿನಗಳಿಗೊಮ್ಮೆಯೋ ಸಭೆ ನಡೆಸಿ,ಆಗಿರುವ ಕೆಲಸ,ಆಗಬೇಕಿರುವ ಕೆಲಸ,ಅಡೆತಡೆಗಳ ನಿವಾರಣೆಗೆ ತಮ್ಮ ಇಲಾಖೆಗಳಲ್ಲಿ ಏನೇನು ಕ್ರಮ ಜರುಗಿಸಬೇಕು ಎಂಬುದನ್ನು ತಿಳಿದುಕೊಂಡು ಅವನ್ನು ಕಾಲಮಿತಿಯೊಳಗೆ ನಿವಾರಿಸಿ,ಕಾಮಗಾರಿ ಸುಗಮವಾಗಿ ಸಾಗುವಂತೆ ನೋಡಿಕೊಳ್ಳಬೇಕು. ಸಂಪೂರ್ಣವಾಗಿ ಸರ್ಕಾರದ ಮೇಲುಸ್ತುವಾರಿಯಲ್ಲಿಯೇ ಈ ಕಾಮಗಾರಿಗಳು ನಡೆಯಬೇಕು. ಆಗಮಾತ್ರ ಸಾರ್ವಜನಿಕರ ಬವಣೆಯನ್ನು ತ್ವರಿತವಾಗಿ ನಿವಾರಿಸಲು ಸಾಧ್ಯ. ಜನಪರ ಸರ್ಕಾರದಿಂದ ಮಾತ್ರ ಇದನ್ನು ನಾಗರಿಕರು ನಿರೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.