ಬೆಂಗಳೂರು: ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಷರತ್ತು ವಿಧಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟ ಆರೋಪದಡಿ ಲೋಕೋಪಯೋಗಿ ಇಲಾಖೆಯ ‘ಬೆಂಗಳೂರು ನಂಬರ್ –1 ಕಟ್ಟಡಗಳ ವಿಭಾಗ‘ದ ಹಿಂದಿನ ಕಾರ್ಯಪಾಲಕ ಎಂಜಿನಿಯರ್ ಮತ್ತು ಐವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.
1ನೇ ಕಟ್ಟಡಗಳ ವಿಭಾಗದ ಹಿಂದಿನ ಕಾರ್ಯಪಾಲಕ ಎಂಜಿನಿಯರ್ (ಇಇ) ಜಿ.ಡಿ. ಕುಮಾರ್ (ಹಾಲಿ,ಇಇ, ಕೆ–ಶಿಪ್), ವಿಧಾನಸೌಧ ಉಪ ವಿಭಾಗದ ಹಿಂದಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎ.ಎಂ. ಮಾಲತೇಶ್ (ನಿವೃತ್ತ), ವಿಶ್ವೇಶ್ವರಯ್ಯ ಗೋಪುರ ಉಪ ವಿಭಾಗದ ಹಿಂದಿನ ಎಇಇ ವಿ.ಬಿ. ಕಲಕೇರಿ (ಹಾಲಿ ನಿವೃತ್ತ), ವಿಕಾಸಸೌಧ ಉಪ ವಿಭಾಗದ ಹಿಂದಿನ ಎಇಇ ಎಂ.ವಿ. ವೆಂಕಟೇಶ್ (ಹಾಲಿ ಇಇ, ಎತ್ತಿನಹೊಳೆ ಯೋಜನೆ, ಸಕಲೇಶಪುರ ವಿಭಾಗ), ಶಾಸಕರ ಭವನ ಉಪ ವಿಭಾಗದ ಹಿಂದಿನ ಎಇಇ ಅರುಣ್ ಟಿ.ಪಿ. (ಹಾಲಿ ಎಇಇ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಮತ್ತು ಬಹುಮಹಡಿಗಳ ಕಟ್ಟಡಗಳ ಉಪ ವಿಭಾಗದ ಹಿಂದಿನ ಎಇಇ ಜಿ. ಶಿವಪ್ರಕಾಶ (ಹಾಲಿ ಇಇ, ರಾಜ್ಯ ಪೊಲೀಸ್ ವಸತಿ ನಿಗಮ) ಅವರಿಗೆ ಪಿಡಬ್ಲ್ಯುಡಿ ಕಟ್ಟಡಗಳ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್ ಸತೀಶ್ ಬಾಬು ನೋಟಿಸ್ ಜಾರಿಗೊಳಿಸಿದ್ದಾರೆ.
2019ರಿಂದ 2022ರ ಅವಧಿಯಲ್ಲಿ 1ನೇ ಕಟ್ಟಡಗಳ ಉಪ ವಿಭಾಗದ ವ್ಯಾಪ್ತಿಯ ಐದು ಉಪ ವಿಭಾಗಗಳಲ್ಲಿ ಹಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ, ‘ಆಯಾ ಉಪ ವಿಭಾಗದ ಎಇಇ ಅವರಿಂದ ಸ್ಥಳ ಪರಿಶೀಲನಾ ಪ್ರಮಾಣಪತ್ರ ಪಡೆದು ಅಪ್‌ಲೋಡ್ ಮಾಡಬೇಕು’ ಎಂಬ ಹೆಚ್ಚುವರಿ ಷರತ್ತು ವಿಧಿಸಲಾಗಿತ್ತು. ಇದರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಉಲ್ಲಂಘನೆಯಾಗಿದ್ದು, ಸ್ಪರ್ಧೆಯನ್ನು ಕುಗ್ಗಿಸಿ ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಲಾಗಿತ್ತು ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ ಅವರು ಪಿಡಬ್ಲ್ಯುಡಿ ದಕ್ಷಿಣ ವಲಯ ಮುಖ್ಯ ಎಂಜಿನಿಯರ್ ಅವರಿಗೆ ದೂರು ನೀಡಿದ್ದರು.
‘ದೂರಿನ ಕುರಿತು ಪರಿಶೀಲಿಸಿ, ಕ್ರಮ ಜರುಗಿಸುವಂತೆ ಇಲಾಖೆಯ ಕೇಂದ್ರ ಕಚೇರಿಯು ಮುಖ್ಯ ಎಂಜಿನಿಯರ್ ಅವರಿಗೆ ನಿರ್ದೇಶನ ನೀಡಿತ್ತು. 1ನೇ ಕಟ್ಟಡಗಳ ವಿಭಾಗ ಮತ್ತು ಸಂಬಂಧಿಸಿದ ಉಪ ವಿಭಾಗಗಳಲ್ಲಿ ಇತ್ತೀಚೆಗೆ ಪರಿಶೀಲನೆ ನಡೆಸಿದ್ದು, ಹಲವು ಕಾಮಗಾರಿಗಳಲ್ಲಿ ಹೆಚ್ಚುವರಿ ಷರತ್ತು ವಿಧಿಸಿರುವುದು ಪತ್ತೆಯಾಗಿದೆ. ಈ ರೀತಿ ಅಸಂಬದ್ಧ ಷರತ್ತು ವಿಧಿಸಿರುವ ಕುರಿತು ಸಮಜಾಯಿಷಿಯೊಂದಿಗೆ ವಿವರಣೆ ನೀಡುವಂತೆ ಆರು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ಪಿಡಬ್ಲ್ಯುಡಿ ಮೂಲಗಳು ತಿಳಿಸಿವೆ.
‘ಪ್ರತಿ ಕಾಮಗಾರಿಯಲ್ಲೂ ಒಬ್ಬ ಗುತ್ತಿಗೆದಾರನಿಗೆ ಮಾತ್ರ ಸ್ಥಳ ಪರಿಶೀಲನಾ ಪ್ರಮಾಣಪತ್ರ ನೀಡಲಾಗಿತ್ತು. ಆ ಗುತ್ತಿಗೆದಾರರ ಬಿಡ್ ಮಾತ್ರ ಅಂಗೀಕರಿಸಲಾಗಿದೆ. ಸ್ಥಳ ಪರಿಶೀಲನಾ ಪ್ರಮಾಣಪತ್ರ ಅಪ್‌ಲೋಡ್ ಮಾಡಿಲ್ಲ ಎಂಬ ಕಾರಣ ನೀಡಿ ಉಳಿದ ಗುತ್ತಿಗೆದಾರರ ಬಿಡ್ ತಿರಸ್ಕರಿಸಿರುವುದು ಕಂಡುಬಂದಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.