ಬೆಂಗಳೂರು: ವಾಹನಗಳ ಹೊಗೆ ತಪಾಸಣೆಗೆ ಸಂಬಂಧಿಸಿದಂತೆ ಹಳೆ ಸಾಫ್ಟ್‌ವೇರ್ ಅನ್ನು ಬದಲಾಯಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ‘ಹೊಗೆ ಪರೀಕ್ಷೆ’ ಪ್ರಮಾಣಪತ್ರದೊಂದಿಗೆ ಕ್ಯೂಆರ್ ಕೋಡ್ ಕೂಡ ಇರಲಿದ್ದು, ದೇಶದ ಯಾವುದೇ ಮೂಲೆಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿದರೆ ‘ಎಮಿಷನ್’ ಪರೀಕ್ಷೆ ಸಹಿತ ಎಲ್ಲ ವಿವರಗಳು ಸಿಗಲಿವೆ.
ಟೆಕ್ ಕಮರ್ಶಿಯಲ್ ಟೆಂಡರ್ ಪಡೆದಿರುವ ‘ಮೇರು ಇನ್ಫೋ ಸೊಲ್ಯುಷನ್’ ಹೊಸ ತಂತ್ರಜ್ಞಾನವನ್ನು ಒಳಗೊಂಡಿರುವ ಸಾಫ್ಟ್‌ವೇರ್ ಅನ್ನು ಅಳವಡಿಸಲಿದೆ. ರಾಜ್ಯದಲ್ಲಿ ಇರುವ ಎಲ್ಲ 2,700 ಹೊಗೆ ತಪಾಸಣಾ ಕೇಂದ್ರಗಳ ಮೇಲ್ವಿಚಾರಕರಿಗೆ ಹೊಸ ಸಾಫ್ಟ್‌ವೇರ್ ಬಗ್ಗೆ ಸಾರಿಗೆ ಇಲಾಖೆಯು ತರಬೇತಿ ನೀಡಲಿದೆ.
ಎನ್‌ಐಸಿಗೆ ಪತ್ರ: ‘ವಾಹನ್–4 ಜೊತೆಗೆ ವಾಯು ಮಾಲಿನ್ಯ ತಪಾಸಣೆಯ ವಿವರವನ್ನು ಸಂಯೋಜನೆ ಮಾಡಲು ಹಿಂದಿನ ಸಾಫ್ಟ್‌ವೇರ್‌ನಲ್ಲಿ ಸಾಧ್ಯವಿರಲಿಲ್ಲ. ಹೊಸ ಸಾಫ್ಟ್‌ವೇರ್‌ನಲ್ಲಿ ಈ ಅವಕಾಶ ಇದೆ. ಅದಕ್ಕಾಗಿ ಹೊಸ ಸಾಫ್ಟ್‌ವೇರ್ ಅನ್ನು ವಾಹನ್–4 ಜೊತೆಗೆ ಸಂಯೋಜನೆ ಮಾಡಲು ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ (ಎನ್‌ಐಸಿ) ಪತ್ರ ಬರೆಯಲಾಗಿದೆ’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ವಾಹನ್–4ಗೆ ಸಂಯೋಜನೆಗೊಂಡರೆ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಎಲ್ಲ ವಿವರಗಳು ಸಿಕ್ಕಿ ಬಿಡುತ್ತವೆ. ವಾಯು ಮಾಲಿನ್ಯ ತಪಾಸಣೆ ಯಾವಾಗ ಮಾಡಲಾಗಿದೆ? ಮುಂದೆ ಯಾವಾಗ ಮಾಡಬೇಕು? ಎಂಜಿನ್ ಸ್ಥಿತಿ ಏನು? ವಾಹನಕ್ಕೆ ಎಷ್ಟು ವರ್ಷಗಳಾದವು? ಮಾಲೀಕರು ಯಾರು? ಅವರ ದೂರವಾಣಿ ಸಂಖ್ಯೆ ಸಹಿತ ಎಲ್ಲ ವಿವರಗಳು ಲಭ್ಯವಾಗುತ್ತವೆ. ಹೊಗೆ ತಪಾಸಣೆ ನಡೆಸಿದಾಗ ಅದರ ವಿವರಗಳೂ ಸಾಫ್ಟ್‌ವೇರ್‌ನಲ್ಲಿ ದಾಖಲಾಗುತ್ತವೆ.
ಜಿಯೊ ಫೆನ್ಸಿಂಗ್: ಇಲ್ಲಿಯವರೆಗೆ ಮಾಹಿತಿಗಳನ್ನು ಆಯಾ ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳ ಸಿಬ್ಬಂದಿ ದಾಖಲು ಮಾಡುತ್ತಿದ್ದರು. ಇದರಿಂದ ತಪ್ಪು ಮಾಹಿತಿ ನುಸುಳುವ ಸಾಧ್ಯತೆಗಳೂ ಇದ್ದವು. ವಾಹನಗಳನ್ನು ತಪಾಸಣೆ ಮಾಡದೆಯೇ ‘ಹೊಗೆ’ ತಪಾಸಣೆ ನಡೆಸಲಾಗಿದೆ ಎಂದು ನಮೂದಿಸುವ, ವಾಹನ ಸದೃಢವಾಗಿದೆ ಎಂದು ಪ್ರಮಾಣಪತ್ರ ನೀಡುವ ಪ್ರಮಾದಗಳು ನಡೆಯುವ ಅಪಾಯಗಳೂ ಇದ್ದವು. ಹೊಸ ಸಾಫ್ಟ್‌ವೇರ್‌ನಲ್ಲಿ ಇದಕ್ಕೆಲ್ಲ ಅವಕಾಶ ಇರುವುದಿಲ್ಲ.
ವಾಹನಗಳನ್ನು ಜಿಯೊ ಫೆನ್ಸಿಂಗ್ ಮಾಡುವುದರಿಂದ ಹೊಗೆ ತಪಾಸಣಾ ಕೇಂದ್ರಗಳಿಗೆ ವಾಹನಗಳು ಬರಲೇಬೇಕು. ಅಲ್ಲಿ ನಿಗದಿತ ತಪಾಸಣೆಗಳನ್ನು ಮಾಡಲೇಬೇಕಾಗುತ್ತದೆ. ಇಲ್ಲದೇ ಇದ್ದರೆ ಸಾಫ್ಟ್‌ವೇರ್‌ನಲ್ಲಿ ಮಾಹಿತಿ ದಾಖಲಿಸಲು ಅವಕಾಶ ದೊರೆಯುವುದಿಲ್ಲ ಎಂದು ಜ್ಞಾನೇಂದ್ರ ಕುಮಾರ್ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.