ADVERTISEMENT

ರಾತ್ರಿ ದೂರು ಸಲ್ಲಿಕೆಗೆ ಕ್ಯೂಆರ್‌ ಕೋಡ್‌

ಆಗ್ನೇಯ ವಿಭಾಗ: ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಮತ್ತೊಂದು ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:00 IST
Last Updated 22 ಫೆಬ್ರುವರಿ 2023, 22:00 IST
‘ಲೋಕಸ್ಪಂದನ’ ಕ್ಯೂಆರ್ ಕೋಡ್‌ ಸ್ಕ್ಯಾನ್‌
‘ಲೋಕಸ್ಪಂದನ’ ಕ್ಯೂಆರ್ ಕೋಡ್‌ ಸ್ಕ್ಯಾನ್‌   

ಬೆಂಗಳೂರು: ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಗ್ರಂಥಾಲಯ ನಿರ್ಮಾಣ ಹಾಗೂ ಠಾಣೆಗಳ ಎದುರು ಕ್ಯೂಆರ್ ಕೋಡ್‌ಗಳನ್ನು ಇಟ್ಟು ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಮುಂದಾಗಿದ್ದ ಆಗ್ನೇಯ ವಿಭಾಗದ ಪೊಲೀಸರು, ಈಗ ಮತ್ತೊಂದು ನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಈಗ ಇದೇ ಕ್ಯೂಆರ್‌ ಕೋಡ್‌ಗೆ ಹೆಚ್ಚುವರಿ ತಾಂತ್ರಿಕತೆ ಅಳವಡಿಸಿದ್ದಾರೆ. ಇದರಿಂದ ರಾತ್ರಿ 11ರಿಂದ ಬೆಳಿಗ್ಗೆ 5ರ ಸಮಯದಲ್ಲೂ ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಬಹುದಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈ ವಿಭಾಗದಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆ ಜಾರಿಗೆ ಬಂದಿತ್ತು. ಅದು ಯಶಸ್ವಿಯಾದ ಬೆನ್ನಲ್ಲೇ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಲು ಕ್ಯೂಆರ್‌ಕೋಡ್‌ ಸ್ಕ್ಯಾನಿಂಗ್‌ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾತ್ರಿ ವೇಳೆ ತೊಂದರೆಗೆ ಸಿಲುಕಿದ ಸಾರ್ವಜನಿಕರು, ನಾನೂ ಸೇರಿದಂತೆ ಆಗ್ನೇಯ ವಿಭಾಗದ ಇನ್‌ಸ್ಪೆಕ್ಟರ್‌, ಪಿಎಸ್‌ಐಗಳ ಮೊಬೈಲ್‌ನಲ್ಲಿನ ಡಿ.ಪಿಗಳಲ್ಲಿ ಹಾಕಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ದೂರು ಸಲ್ಲಿಸಬಹುದು. ಇತ್ತೀಚೆಗೆ ರಾತ್ರಿ ಸಮಯದಲ್ಲಿ ಕೆಲವು ತೊಂದರೆಗಳು ನಡೆದವು. ಅಂಥವರಿಗೆ ನೆರವಾಗಲು, ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಈ ಯೋಜನೆ ರೂಪಿಸಲಾಗಿದೆ.

‘ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಕರೆ ಸ್ವೀಕರಿಸದಿದ್ದರೆ ಟ್ವೀಟರ್‌, ಫೇಸ್‌ಬುಕ್‌ಗಳಲ್ಲಿ ಹಾಕುವ ಬದಲಿಗೆ ಡಿ.ಪಿಗಳಲ್ಲಿನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ದೂರು ಸಲ್ಲಿಸಬಹುದಾಗಿದೆ. ಆ ಅಹವಾಲು, ದೂರು ನನಗೆ ಸಿಗಲಿದೆ. ತಕ್ಷಣವೇ ಸ್ಪಂದಿಸಲು ಸಾಧ್ಯವಾಗಲಿದೆ’ ಎಂದು ಡಿಸಿಪಿ ಸಿ.ಕೆ.ಬಾಬಾ ಹೇಳಿದರು.

‘ಸ್ಕ್ಯಾನ್‌ ಮಾಡಿದ ಬಳಿಕ ಐದರಿಂದ ಆರು ವಾಕ್ಯ ಬರೆಯುವಷ್ಟು ಸ್ಥಳ ಸಿಗಲಿದೆ. ಅಲ್ಲಿ ಸಮಸ್ಯೆ ಹೇಳಿಕೊಳ್ಳಬಹುದು’ ಎಂದು ಹೇಳುತ್ತಾರೆ ಡಿಸಿಪಿ.

‘ಸರ್ಕಾರವೇ ಸಿಮ್‌ ನೀಡಿದ್ದು ಜನರಿಗೆ ಸಕಾಲದಲ್ಲಿ ನೆರವಾಗಲು ಪೊಲೀಸ್‌ ಅಧಿಕಾರಿಗಳು ವಾಟ್ಸ್‌ಆ್ಯಪ್‌ನಲ್ಲಿ ಈ ಕೋಡ್‌ ಹಾಕಿಕೊಳ್ಳಬಹುದು ’ ಎಂದೂ ಅವರು ಹೇಳಿದರು.

‘ಇದಕ್ಕೆ ‘ಲೋಕ ಸ್ಪಂದನೆ... ನಿಮ್ಮ ನುಡಿ ನಮ್ಮ ನಡೆ’ ಎಂದು ಹೆಸರಿಡಲಾಗಿದೆ. ಈ ವ್ಯವಸ್ಥೆಯು ಯಶಸ್ವಿಯಾಗಿದ್ದು ಸಿಲಿಕಾನ್‌ ಸಿಟಿಯ ಬೇರೆ ವಿಭಾಗದಲ್ಲೂ ಜಾರಿಯಾಗುವ ಸಾಧ್ಯತೆಯಿದೆ’ ಎಂದೂ ಹೇಳಿದರು.

ಈ ಹಿಂದೆ ಡಿ.ಸಿ.ಪಿ, ಎ.ಸಿ.ಪಿ ಕಚೇರಿ ಸೇರಿದಂತೆ 14 ಪೊಲೀಸ್‌ ಠಾಣೆಗಳಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ಬೋರ್ಡ್‌ ಅಳವಡಿಸಲಾಗಿತ್ತು. ಠಾಣೆಗೆ ಬರುವ ದೂರುದಾರರು, ಸಿಬ್ಬಂದಿ ಕಾರ್ಯ ವೈಖರಿ, ದೂರು ಸ್ವೀಕಾರವಾಯಿತೆ? ಸಿಬ್ಬಂದಿ ವರ್ತನೆ ಹೇಗಿತ್ತು? ಎಂಬುದನ್ನು ಸ್ಕ್ಯಾನ್‌ ಮಾಡಿ ತಿಳಿಸುವ ವ್ಯವಸ್ಥೆ ಇದಾಗಿತ್ತು.

ಆಡುಗೋಡಿ 438, ಬಂಡೇಪಾಳ್ಯ 203, ಬೇಗೂರು 939, ಬೊಮ್ಮನಹಳ್ಳಿ 482, ಎಲೆಕ್ಟ್ರಾನಿಕ್‌ ಸಿಟಿ 421, ಎಚ್‌.ಎಸ್‌.ಆರ್ ಲೇಔಟ್‌ 197, ಹುಳಿಮಾವು 254, ಕೋರಮಂಗಲ 445, ಮಡಿವಾಳ 323, ಮೈಕೋಲೇಔಟ್ 879, ಪರಪ್ಪನ ಅಗ್ರಹಾರ 422, ಸೌತ್‌ಈಸ್ಟ್‌ ಸೆನ್‌ ‍ಪೊಲೀಸ್‌ ಠಾಣೆ 787, ಸದ್ದುಗುಂಟೆಪಾಳ್ಯ 470, ತಿಲಕ್‌ನಗರ 552 ಮಂದಿ ಕ್ಯೂಆರ್‌ಕೋಡ್ ಮೂಲಕ ಇದುವರೆಗೂ ಸಮಸ್ಯೆ ಹಾಗೂ ದೂರು ಹೇಳಿಕೊಂಡಿದ್ದಾರೆ. ಈ ಸ್ಪಂದನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 5,832 ಮಂದಿ 5 ಸ್ಟಾರ್‌ ರೇಟಿಂಗ್ಸ್‌ ನೀಡಿದ್ದರೆ, 766 ಮಂದಿ 4 ಸ್ಟಾರ್‌ ರೇಟಿಂಗ್ಸ್‌ ನೀಡಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

ಮುದ್ರಿತ ನಮೂನೆ

ಸ್ಮಾರ್ಟ್‌ಫೋನ್‌ ಹೊಂದಿಲ್ಲದವರಿಗೆ 14 ಠಾಣೆಗಳಲ್ಲೂ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮುದ್ರಿತ ನಮೂನೆ ಇಡಲಾಗಿದೆ. ಅದರ ಮೂಲಕವೂ ದೂರು, ಠಾಣೆಗೆ ಭೇಟಿ ನೀಡಿದಾಗ ಸಿಬ್ಬಂದಿಯ ಸ್ಪಂದಿಸಿದ ರೀತಿ ಕುರಿತು ಬರೆಯಬಹುದು. ಠಾಣೆ ಎದುರು ಇಟ್ಟಿರುವ ಡಬ್ಬಿಯಲ್ಲಿ ಭರ್ತಿ ಮಾಡಿದ ನಮೂನೆ ಹಾಕಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

***

ನವೆಂಬರ್‌ನಿಂದ ಇದುವರೆಗೆ ಆಗ್ನೇಯ ವಿಭಾಗದ ಠಾಣೆಗಳಿಗೆ 8,662 ಭೇಟಿ ನೀಡಿದ್ದರು. ಅದರಲ್ಲಿ 6,812 ಮಂದಿ ಕ್ಯೂಆರ್‌ಕೋಡ್‌ ಮೂಲಕವೇ ತಮ್ಮ ಅನುಭವ ಹೇಳಿಕೊಂಡಿದ್ದಾರೆ.

– ಸಿ.ಕೆ.ಬಾಬಾ, ಡಿಸಿಪಿ, ಆಗ್ನೇಯ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.