ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯುಪಿಐ ಆಧಾರಿತ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ಟಿಕೆಟ್ ದರ ಪಾವತಿಸುವ ತಂತ್ರಜ್ಞಾನವಿರುವ ಸ್ಮಾರ್ಟ್ ಇಟಿಎಂ ಆರಂಭವಾಗಿದೆ. ಎಟಿಎಂ ಕಾರ್ಡ್ ಸ್ವೈಪ್ ಮಾಡಿ ಪಾವತಿಸುವ ವ್ಯವಸ್ಥೆ ಇನ್ನೊಂದು ತಿಂಗಳಲ್ಲಿ ಅನುಷ್ಠಾನಗೊಳ್ಳಲಿದೆ.
ಬಸ್‌ಗಳಲ್ಲಿ ಬಣ್ಣಬಣ್ಣದ ಟಿಕೆಟ್‌ಗಳನ್ನು ಇಟ್ಟುಕೊಂಡು ಪ್ರಯಾಣದ ದೂರಕ್ಕೆ ಅನುಗುಣವಾಗಿ ಟಿಕೆಟ್ ಹರಿದು ಕೊಡುವ ಪದ್ಧತಿ ಇತ್ತು. 20 ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷೀನ್‌ಗಳನ್ನು (ಇಟಿಎಂ) ಪರಿಚಯಿಸುವ ಮೂಲಕ ಹಳೆ ಪದ್ಧತಿಯನ್ನು ಕೊನೆಗೊಳಿಸಿತ್ತು. ಈಗ ಹಳೆ ಮಷೀನ್‌ಗಳ ಬದಲಾಗಿ ಆಧುನಿಕ ತಂತ್ರಜ್ಞಾನ ಇರುವ ಮಷೀನ್‌ಗಳು ನಿರ್ವಾಹಕರ ಕೈಗೆ ಬಂದಿವೆ.
ಆ್ಯಂಡ್ರಾಯ್ಡ್ ತಂತ್ರಾಂಶ ಆಧಾರಿತ ಟಚ್ ಸ್ಕ್ರೀನ್, ವೈರ್‌ಲೆಸ್ ಸಂವಹನ ಮತ್ತು ವೇಗದ ಪ್ರಕ್ರಿಯೆ ವ್ಯವಸ್ಥೆಗಳನ್ನು ಈ ಸ್ಮಾರ್ಟ್ ಇಟಿಎಂ ಹೊಂದಿದೆ. ಸುಲಭವಾಗಿ ಟಿಕೆಟ್ ನೀಡುವುದಕ್ಕೆ ಅನುಕೂಲವಾಗುವಂತೆ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಡೈನಮಿಕ್ ಕ್ಯೂಆರ್ ಕೋಡ್ ಆಧಾರಿತ ಪಾವತಿ ವ್ಯವಸ್ಥೆಯ ಪ್ರಾಯೋಗಿಕ ಬಳಕೆಯನ್ನು ನವೆಂಬರ್‌ನಲ್ಲಿ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಮಾಡಲಾಗಿದೆ. ಪ್ರಾಯೋಗಿಕ ಬಳಕೆ ಯಶಸ್ವಿಯಾಗಿರುವುದರಿಂದ ಈಗ ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲಾಗಿದೆ. ಈ ತಿಂಗಳ ಅಂತ್ಯದ ಒಳಗೆ ಎಲ್ಲ ಬಸ್‌ಗಳಲ್ಲಿ ಯುಪಿಐ ಆಧಾರಿತ ಟಿಕೆಟ್ ನೀಡಲಾಗುತ್ತದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಹೇಗೆ ನಿರ್ವಹಿಸುತ್ತದೆ?: ಮೊದಲು ಬಸ್ ಎಲ್ಲಿದೆ ಎಂದು ಬೋರ್ಡಿಂಗ್ ಪಾಯಿಂಟ್ ತೋರಿಸುತ್ತದೆ. ಆನಂತರ ಪ್ರಯಾಣಿಕರು ಇಳಿಯುವ ನಿಲ್ದಾಣವನ್ನು ಆಯ್ಕೆ ಮಾಡಲಾಗುತ್ತದೆ. ಎಷ್ಟು ಪ್ರಯಾಣಿಕರು ಎಂಬುದನ್ನು ನಮೂದು ಮಾಡಲಾಗುತ್ತದೆ. ಆನಂತರ ಪ್ರಿಂಟ್ ಆಪ್ಶನ್ ಬರುತ್ತದೆ. ಅಲ್ಲಿ ಕ್ಯಾಶ್ ಮತ್ತು ಯುಪಿಐ ಎಂಬ ಎರಡು ಆಯ್ಕೆಗಳು ಬರುತ್ತವೆ. ನಗದು ಪಾವತಿ ಮಾಡುವುದಿದ್ದರೆ ‘ಕ್ಯಾಶ್’ ಆಯ್ಕೆ ಮಾಡಿದರೆ ಟಿಕೆಟ್ ಪ್ರಿಂಟ್ ಬರುತ್ತದೆ.
ಯುಪಿಐ ಕ್ಲಿಕ್ ಮಾಡಿದರೆ ಡೈನಮಿಕ್ ಕ್ಯೂಆರ್ ಕೋಡ್ ಬರುತ್ತದೆ. ಅದನ್ನು ಪ್ರಯಾಣಿಕರು ಸ್ಕ್ಯಾನ್ ಮಾಡಿದಾಗ ಅವರ ಯುಪಿಐ ಆ್ಯಪ್‌ನಲ್ಲಿ ಪ್ರಯಾಣ ದರ ಬರುತ್ತದೆ. ಅವರು ಪಿನ್ ನಮೂದಿಸಿ, ಪಾವತಿಗೆ ಸಮ್ಮತಿ ಒತ್ತಿದಾಗ ಹಣ ಪಾವತಿ ಯಶಸ್ವಿಯಾದ ಸಂಕೇತ ಬರುತ್ತದೆ. ಆನಂತರ ಪ್ರಿಂಟ್ ಬರುತ್ತದೆ. ನೆಟ್‌ವರ್ಕ್ ಸಮಸ್ಯೆ ಅಥವಾ ಬೇರೆ ಕಾರಣದಿಂದ ಹಣ ಪಾವತಿಯಾಗದೇ ಇದ್ದರೆ ಪ್ರಿಂಟ್ ಬರುವುದಿಲ್ಲ. ಟಿಕೆಟ್‌ನಲ್ಲಿ ವಹಿವಾಟಿನ ವಿವರವೂ ನಮೂದಾಗಿರುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗ ನೆಮ್ಮದಿ: ‘ಹೊಸ ಇಟಿಎಂ ಹಗುರವಾಗಿದೆ. ಅಲ್ಲದೇ ಚಿಲ್ಲರೆ ಸಮಸ್ಯೆ ತಪ್ಪಿರುವುದರಿಂದ ಪ್ರಯಾಣಿಕರಿಗೂ, ನಮಗೂ ಅನುಕೂಲವಾಗಿದೆ. ಸಂಗ್ರಹವಾದ ನಗದು ಇರುವಾಗ ಒತ್ತಡದಿಂದ ಸರಿಯಾಗಿ ನಿದ್ದೆಯೂ ಬರುವುದಿಲ್ಲ. ಯುಪಿಐ ವವಸ್ಥೆ ಬಂದಿರುವುದರಿಂದ ನೆಮ್ಮದಿಯಾಗಿ ನಿದ್ದೆ ಮಾಡಬಹುದು’ ಎಂದು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಚಂದ್ರಶೇಖರ್ ಪ್ರತಿಕ್ರಿಯಿಸಿದರು.
ಎಲ್ಲರಿಗೂ ತರಬೇತಿ: ಅನ್ಬುಕುಮಾರ್
ಈಗ ಹೆಚ್ಚಿನವರು ಫೋನ್‌ಪೇ, ಗೂಗಲ್‌ಪೇ ಸಹಿತ ಯುಪಿಐ ಆಧಾರಿತ ತಂತ್ರಜ್ಞಾನವನ್ನೇ ಬಳಸುತ್ತಾರೆ. ಅದಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಕೂಡ ಆಧುನಿಕತೆಗೆ ಹೊಂದಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಪರಿಚಯಿಸಲಿರುವ ಒಂದು ದೇಶ ಒಂದು ಕಾರ್ಡ್‌ಗೂ ಹೊಸ ಸ್ಮಾರ್ಟ್ ಇಟಿಎಂ ಹೊಂದಿಕೊಳ್ಳಲಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹೊಸ ಸ್ಮಾರ್ಟ್ ಇಟಿಎಂಗಳನ್ನು ಒಂದು ತಿಂಗಳ ಹಿಂದೆಯೇ ಎಲ್ಲ ಬಸ್ ನಿರ್ವಾಹಕರಿಗೆ ನೀಡಲಾಗಿದೆ. ಹೊಸ ಮಷೀನ್‌ನಲ್ಲಿ ನಗದು ಪಡೆದು ಟಿಕೆಟ್ ನೀಡುವುದನ್ನು ಈಗ ಎಲ್ಲರೂ ಕಲಿತಿದ್ದಾರೆ. ಆನಂತರ ಯುಪಿಐ ಮೂಲಕ ಹಣ ಪಾವತಿಸಿಕೊಂಡು ಟಿಕೆಟ್ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು. ‘ಎಟಿಎಂ ಕಾರ್ಡ್ ಸ್ವೈಪ್ ಮಾಡುವ ತಂತ್ರಜ್ಞಾನವನ್ನು ಕೂಡ ಇದರಲ್ಲಿಯೇ ಅಳವಡಿಸಲಾಗುತ್ತಿದ್ದು, ಈ ಬಗ್ಗೆ ಬ್ಯಾಂಕ್‌ಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಬ್ಯಾಂಕ್ ಒಪ್ಪಿಗೆ ಸಿಕ್ಕಿದ ಕೂಡಲೇ ಈ ಬಗ್ಗೆಯೂ ಚಾಲಕ/ನಿರ್ವಾಹಕರಿಗೆ ತರಬೇತಿ ನೀಡಲಾಗುವುದು. ಇನ್ನೊಂದು ತಿಂಗಳಲ್ಲಿ ಈ ವ್ಯವಸ್ಥೆಯೂ ಜಾರಿಗೆ ಬರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.