ಬೆಂಗಳೂರು: ಕೋವಿಡ್–19 ದೃಢಪಟ್ಟಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ವೊಂದರ ಬಿಬಿಎಂಪಿ ಸದಸ್ಯ, ಅಧಿಕಾರಿಗಳು ಸತತ ಎರಡು ಗಂಟೆಗಳ ಮನವೊಲಿಕೆ ಮಾಡಿದ ನಂತರ ಆಸ್ಪತ್ರೆಗೆ ದಾಖಲಾದರು. ಅವರ ಕುಟುಂಬ ಸದಸ್ಯರು ಸೇರಿ 37 ಜನರನ್ನು ಶನಿವಾರ ಕ್ವಾರಂಟೈನ್ ಮಾಡಲಾಗಿದೆ.
ಕಾರ್ಪೊರೇಟರ್‌ಗೆ ಕೋವಿಡ್– 19 ಸೋಂಕು ತಗುಲಿರುವುದು ಶುಕ್ರವಾರ ರಾತ್ರಿಯೇ ದೃಢಪಟ್ಟಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿ ಶನಿವಾರ ಬೆಳಿಗ್ಗೆ ಅವರ ಮನೆಗೆ ತೆರಳಿದ್ದರು. ಬೆಳಿಗ್ಗೆ 10ಕ್ಕೆ ಮನೆಯ ಮುಂದೆ ಆಂಬುಲೆನ್ಸ್ ತಲುಪಿದ್ದರೂ ಮಧ್ಯಾಹ್ನ 12 ಗಂಟೆ ತನಕ ಅವರು ಮನೆಯಿಂದ ಹೊರಗೆ ಬರಲಿಲ್ಲ.
‘ಮನೆಯಲ್ಲಿ ತಾಯಿ ಇಲ್ಲ. ಅವರು ಬಂದು ಕುರಾನ್ ಪಠಣ ಮಾಡುವ ತನಕ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.
‘ವೈದ್ಯಕೀಯ ಸಿಬ್ಬಂದಿಗೆ ಸಹಕರಿಸದಿದ್ದರೆ ಮೊಕದ್ದಮೆ ದಾಖಲಿಸಿ ಬಂಧಿಸಲಾಗುತ್ತದೆ. ನ್ಯಾಯಾಲಯದಲ್ಲಿ ಜಾಮೀನೂ ಸಿಗುವುದಿಲ್ಲ’ ಎಂದು ಅಧಿಕಾರಿಗಳು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಸದಸ್ಯರ ತಂದೆ ಮತ್ತು ಶಾಸಕ ಜಮೀರ್ ಅಹ್ಮದ್ ಕೂಡ ಅವರ ಮನವೊಲಿಸಿದರು.ಬಳಿಕ ಮನೆಯಿಂದ ಹೊರಬಂದು ಆಂಬುಲೆನ್ಸ್ ಹತ್ತಿ ಜನರತ್ತ ಕೈ ಬೀಸಿ ಆಸ್ಪತ್ರೆಗೆ ತೆರಳಿದರು.
‘ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ 18 ಮಂದಿ ಮತ್ತು ಪರೋಕ್ಷ ಸಂಪರ್ಕ ಹೊಂದಿದ್ದ 19 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಎಲ್ಲರನ್ನೂ ಪ್ರತ್ಯೇಕವಾಸಕ್ಕೆ (ಕ್ವಾರಂಟೈನ್) ಒಳಪಡಿಸಲಾಗಿದೆ. ಭಾನುವಾರ ಕೂಡ ಈ ಪ್ರಕ್ರಿಯೆ ಮುಂದುವರಿಯಲಿದ್ದು, ಇನ್ನಷ್ಟು ಜನರನ್ನು ಕ್ವಾರಂಟೈನ್ ಮಾಡಲಾಗುವುದು’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
‘ಕಂಟೈನ್‌ಮೆಂಟ್ ಪ್ರದೇಶದಲ್ಲಿ ಮೇ 14ರಂದು ನಡೆದ ಕಿಯಾಸ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ನಂತರ ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ. ಹೀಗಾಗಿ, ಬಿಬಿಎಂಪಿ ಯಾವುದೇ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುವ ಬಗ್ಗೆ ಆಲೋಚನೆ ಇಲ್ಲ. ಅವರ ಜೊತೆ ಸಂಪರ್ಕ ಹೊಂದಿದ್ದವರು ತಾವಾಗಿ ಬಂದು ಮಾಹಿತಿ ನೀಡಬೇಕು. ಅಂತಹವರ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದರು.
ಸಮುದಾಯಕ್ಕೆ ಸೋಂಕು ಹರಡಿರುವ ಆತಂಕ
ಪಾಲಿಕೆ ಸದಸ್ಯರೊಬ್ಬರಿಗೇ ಕೋವಿಡ್–19 ದೃಢಪಟ್ಟಿರುವ ಕಾರಣ ಪಾದರಾಯನಪುರದಲ್ಲಿ ಆತಂಕ ಸೃಷ್ಟಿಯಾಗಿದೆ. ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಈ ಕಾರ್ಪೊರೇಟರ್, ರಂಜಾನ್ ಹಬ್ಬದಲ್ಲಿ ಸ್ಥಳೀಯರಿಗೆ ತಾವೇ ಊಟ ಬಡಿಸಿದ್ದರು. ಬಡವರಿಗೆ ಆಹಾರದ ಕಿಟ್‌ಗಳನ್ನೂ ನೀಡಿದ್ದರು. ಅವರಿಂದ ಮತ್ತಷ್ಟು ಮಂದಿಗೆ ಸೋಂಕು ಹರಡಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ.
‘ಪಾದರಾಯನಪುರದಲ್ಲಿ ಸೋಂಕಿತರ ಜೊತೆ ಸಂಪರ್ಕ ಇಲ್ಲದವರನ್ನು ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ’ ಎಂದು ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.