ADVERTISEMENT

ಕೃಷಿಕರಿಗೆ ಅನುಕೂಲವಾಗುವ ಕಿಸಾನ್‌ ಕರಡು ರಚನೆ: ಪಿ.ಸಾಯಿನಾಥ್‌

ಪರ್ಯಾಯ ಕೃಷಿ ಧೋರಣೆಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಿ.ಸಾಯಿನಾಥ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 21:22 IST
Last Updated 24 ಆಗಸ್ಟ್ 2023, 21:22 IST
ಪರ್ಯಾಯ ಕೃಷಿ ಧೋರಣೆಗಳ ಕುರಿತು ನಡೆದ ವಿಚಾರಸಂಕಿರಣವನ್ನು ಪತ್ರಕರ್ತ ಪಿ. ಸಾಯಿನಾಥ್ ಉದ್ಘಾಟಿಸಿದರು. ಎಐಕೆಎಸ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರನ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಉಪಾಧ್ಯಕ್ಷ ಎನ್.ವೆಂಕಟಚಲಯ್ಯ ಇದ್ದಾರೆ - ಪ್ರಜಾವಾಣಿ ಚಿತ್ರ
ಪರ್ಯಾಯ ಕೃಷಿ ಧೋರಣೆಗಳ ಕುರಿತು ನಡೆದ ವಿಚಾರಸಂಕಿರಣವನ್ನು ಪತ್ರಕರ್ತ ಪಿ. ಸಾಯಿನಾಥ್ ಉದ್ಘಾಟಿಸಿದರು. ಎಐಕೆಎಸ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರನ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಉಪಾಧ್ಯಕ್ಷ ಎನ್.ವೆಂಕಟಚಲಯ್ಯ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲವಾಗುವಂತೆ ಸರ್ಕಾರಗಳು ಕೃಷಿ ನೀತಿ ರೂಪಿಸುತ್ತಿವೆ. ಹೀಗಾಗಿ, ಪರ್ಯಾಯವಾಗಿ ರೈತರಿಗೆ ಅನುಕೂಲವಾಗುವಂತೆ ಮಾಡಲು ಕಿಸಾನ್‌ ಮಜ್ದೂರು ಮೂಲಕ ಕಿಸಾನ್‌ ಕರಡು ತಯಾರಿಸಲಾಗುತ್ತಿದೆ’ ಎಂದು ಪತ್ರಕರ್ತ ಪಿ.ಸಾಯಿನಾಥ್ ತಿಳಿಸಿದರು.

ನಗರದಲ್ಲಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿದ ಪರ್ಯಾಯ ಕೃಷಿ ಧೋರಣೆಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಕೃಷಿ ಕಾಯ್ದೆಗಳನ್ನು ಕೃಷಿಕರು, ಜನಪ್ರತಿನಿಧಿಗಳು ರೂಪಿಸುತ್ತಿಲ್ಲ. ಬದಲಾಗಿ ಕಾರ್ಪೊರೇಟ್‌ ಕಂಪನಿಗಳು ರೂಪಿಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರೈತರು ಹೋರಾಟ ಮಾಡಿ ಹಿಮ್ಮೆಟ್ಟಿಸಿದರು. ಅವು ಹಿಂಬಾಗಿಲಿನಿಂದ ಬರುತ್ತಿವೆ. ಈ ಕಾಯ್ದೆಗಳು ಜಾರಿಯಾದರೆ ಎಲ್ಲ ವರ್ಗಗಳ ಮೇಲೆಯೂ ದುಷ್ಪರಿಣಾಮ ಉಂಟಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಗೋಹತ್ಯೆ ನಿಷೇಧ ಕಾಯ್ದೆಗಳಿಂದ ಗ್ರಾಮೀಣ ಪ್ರದೇಶ ಹಿಂದುಳಿದ ವರ್ಗಗಳ ಆರ್ಥಿಕತೆ ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಡಾ.ಸ್ವಾಮಿನಾಥನ್ ಆಯೋಗದ ವರದಿ ರೈತರಿಗೆ ಪರಿಪೂರ್ಣ ಅಥವಾ ಅಂತಿಮ ಅಲ್ಲ. ಆದರೆ, ಈ ವರದಿ ಜಾರಿಯಿಂದ ಕೃಷಿ ಉತ್ಪಾದನಾ ವಲಯಕ್ಕೆ ಅನುಕೂಲವಾಗುತ್ತದೆ. 2004ರಲ್ಲಿ ಸ್ವಾಮಿನಾಥನ್‌ ವರದಿ ನೀಡಿದ್ದರೂ ಯುಪಿಎ ಸರ್ಕಾರ ಅದನ್ನು ಜಾರಿ ಮಾಡದೇ ಅನ್ಯಾಯ ಮಾಡಿತ್ತು. ಸ್ವಾಮಿನಾಥನ್‌ ವರದಿ ಜಾರಿ ಮಾಡಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿ 2014ರಲ್ಲಿ ನರೇಂದ್ರ ಮೋದಿ ಅಧಿಕಾರ ಹಿಡಿದರು. ವರದಿ ಜಾರಿ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರವನ್ನು ಅಧಿಕಾರ ದೊರೆತ ಒಂದೇ ತಿಂಗಳಲ್ಲಿ ಸಲ್ಲಿಸಿ ಮೋಸ ಮಾಡಿದರು’ ಎಂದು ಟೀಕಿಸಿದರು.

‘ರೈತರ ಪರ ಕರಡು ರಚನಾ ಸಮಿತಿಯನ್ನು ಮಾಡಿದ್ದೇವೆ. ಅದರಲ್ಲಿ ಭೂಮಿ ಇರುವ ಕೃಷಿಕರು, ಜಮೀನು ಇಲ್ಲದ ಕೃಷಿಕರು, ಕೂಲಿಕಾರರು, ಆದಿವಾಸಿಗಳು ಸಹಿತ ಕೃಷಿ ಸಮುದಾಯದೊಳಗೆ ಬರುವ ಎಲ್ಲರನ್ನೂ ಸೇರಿಸಿಕೊಳ್ಳಲಾಗಿದೆ. ಪ್ರತಿ ರಾಜ್ಯಗಳಲ್ಲಿಯೂ ಈ ಕರಡು ರಚನೆಗೆ ಸಲಹೆಗಳು ಬರಬೇಕು. ಯಾಕೆಂದರೆ ದೇಶದಲ್ಲಿ ಒಂದೇ ರೀತಿಯ ಕೃಷಿ, ಒಂದೇ ರೀತಿಯ ಹವಾಮಾನ ಇಲ್ಲ. ಭಿನ್ನವಾದ ಹವಾಮಾನಕ್ಕೆ ಪೂರಕವಾದ ಕೃಷಿಗಳ ಮಾಹಿತಿ ಇರಬೇಕು’ ಎಂದರು.

ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರನ್ ಮಾತನಾಡಿ, ‘ಕೇಂದ್ರದಲ್ಲಿ ಮೋದಿ ನೇತೃತ್ವದ ಆಡಳಿತಾವಧಿಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಒಂದು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡರೆ, 2.78 ಲಕ್ಷ ಕಾರ್ಮಿಕರು ಸಾವಿಗೆ ಶರಣಾಗಿದ್ದಾರೆ. ರೈತರನ್ನು ಗುಲಾಮರನ್ನಾಗಿಸುವ ಕಾರ್ಪೊರೇಟ್‌ ಕೃಷಿಗೆ ಸರ್ಕಾರಗಳು ಒತ್ತು ನೀಡುತ್ತಿವೆ’ ಎಂದು ಟೀಕಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.