ADVERTISEMENT

ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಮುಳುಗಿದ ಸರ್ಕಾರ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 15:16 IST
Last Updated 30 ಡಿಸೆಂಬರ್ 2023, 15:16 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ– ಮುಸ್ಲಿಮರನ್ನು ವಿಭಜಿಸಲು ಹೊರಟಿದ್ದಾರೆ. ಇದಕ್ಕಾಗಿಯೇ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ₹1,000 ಕೋಟಿ ಅನುದಾನ ಘೋಷಿಸಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ₹2,000 ಪರಿಹಾರ ಪಾವತಿಸುವ ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲ. ಆದರೆ, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಘೋಷಿಸಿ ಲಜ್ಜೆಗೇಡಿಗಳಂತೆ ವರ್ತಿಸುತ್ತಿದ್ದಾರೆ’ ಎಂದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರ ತುಷ್ಟೀಕರಣ ನಿರಂತರವಾಗಿ ನಡೆಯುತ್ತಿದೆ. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರಂತೆ ರಾಜ್ಯ ಸರ್ಕಾರ ನಡೆಸಿಕೊಳ್ಳುತ್ತಿದೆ ಎಂದು ದೂರಿದರು.

ADVERTISEMENT

‘ಸಿದ್ದರಾಮಯ್ಯ ತುಘಲಕ್‌ ದರ್ಬಾರ್‌ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗಾಗಿ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ಆಸಕ್ತಿ ಬಿಟ್ಟು, ಟಿಪ್ಪು ಸುಲ್ತಾನ್‌ ಸಂಸ್ಕೃತಿ ಹೇರಲು ಹೊರಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಅಲ್ಪಸಂಖ್ಯಾತರ ಹೆಸರಿನಲ್ಲೂ ಕೊಳ್ಳೆ’

‘ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನದ ಮೀಸಲಿಡುವುದು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅಲ್ಲ. ಕಮಿಷನ್ ಹೊಡೆಯಲು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ‘ದಂಧೆಗೆ ಅನುಕೂಲ ಆಗುತ್ತದೆ ಎನ್ನುವ ಕಾರಣಕ್ಕೆ ಈ ಅನುದಾನದ ನಾಟಕವಷ್ಟೇ. ಅವರಿಗೆ ಪರ್ಸಂಟೇಜ್ ಎಷ್ಟು ಬರುತ್ತೆ ಎಂಬುದು ಜಗಜ್ಜಾಹೀರಾಗಿದೆ. ಅವರನ್ನು ಓಲೈಸಿಕೊಳ್ಳಲು ಹಾಗೂ ಅವರ ಹಿಂದೆ ನಿಂತುಕೊಳ್ಳುವವರ ಸಂತೃಪ್ತಿಗಾಗಿ ಈ ಹಣ ಮೀಸಲಿಟ್ಟಿದ್ದಾರೆಯೇ ಹೊರತು ಸಮುದಾಯದ ಅಭಿವೃದ್ಧಿಗಾಗಿ ಅಲ್ಲ’ ಎಂದು ಟೀಕಿಸಿದರು.

‘ಕೆಲವರನ್ನ ಖುಷಿಪಡಿಸಲು ತಾತ್ಕಾಲಿಕವಾಗಿ ಈ ರೀತಿಯ ಘೋಷಣೆ ಮಾಡುತ್ತಾರೆ. ಅದು ಯಾವುದೂ ಜಾರಿಗೆ ಬರುವುದಿಲ್ಲ. ಹಿಜಾಬ್ ವಿಚಾರವಾಗಿ ಮೈಸೂರಿನಲ್ಲಿ ಹೇಳಿಕೆ ನೀಡಿ ಪುನಃ ವಾಪಸ್ ಪಡೆದರು. ಹುಬ್ಬಳ್ಳಿಯಲ್ಲಿ ಮುಸ್ಲಿಮರಿಗೆ ₹10000 ಕೋಟಿ ಅನುದಾನ ಘೋಷಿಸಿದರು. ಅವರ ಬಳಿ ಹಣ ಎಲ್ಲಿದೆ? ಅವರ ಹಿಂದೆ ಇರುವವರನ್ನು ಉದ್ಧಾರ ಮಾಡಲು ಹಣ ಕೊಡುತ್ತಿದ್ದಾರೆ ಅಷ್ಟೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.