ಬೆಂಗಳೂರು: ಪ್ರಾಣಿ ಕಡಿತಕ್ಕೊಳಗಾದವರಿಗೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಆ್ಯಂಟಿ ರೇಬಿಸ್ ಲಸಿಕೆ’ ಮತ್ತು ‘ರೇಬಿಸ್ ಇಮ್ಯುನೋಗ್ಲಾಬ್ಯುಲಿನ್’ ಚುಚ್ಚು ಮದ್ದನ್ನು ಉಚಿತವಾಗಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸೂಚಿಸಿದ್ದಾರೆ.
ರೇಬಿಸ್ ಮಾರಣಾಂತಿಕ ಕಾಯಿಲೆಯಾಗಿದ್ದರೂ ಸಮಯೋಚಿತ ಚಿಕಿತ್ಸೆಯಿಂದ ಪ್ರಾಣ ಉಳಿಸಬಹುದು. 2030ರ ವೇಳೆಗೆ ನಾಯಿ ಕಡಿತದಿಂದ ಬರುವ ರೇಬಿಸ್ ರೋಗವನ್ನು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಈಗಾಗಲೇ ರೇಬಿಸ್ ರೋಗವನ್ನು ‘ಗುರುತಿಸಬಹುದಾದ ರೋಗ’ ಎಂದು ಘೋಷಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ದಾಸ್ತಾನು ಇರುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಎಂದು ಪರಿಗಣಿಸದೆ, ಪ್ರಾಣಿ ಕಡಿತಕ್ಕೆ ಒಳಗಾದ ಎಲ್ಲರಿಗೂ ಈ ಲಸಿಕೆ ಹಾಗೂ ಚುಚ್ಚುಮದ್ದನ್ನು ಒದಗಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.