ADVERTISEMENT

ಕೋಮುದ್ವೇಷ ಬಿತ್ತುವ ಕೆಲಸ ಸಲ್ಲದು: ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 20:58 IST
Last Updated 17 ನವೆಂಬರ್ 2022, 20:58 IST
ಕರ್ನಾಟಕ ಮಾಧ್ಯಮ ಅಕಾಡೆಮಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್‌.ಹರ್ಷ, ಪತ್ರಕರ್ತ ರಾಜಾ ಶೈಲೇಶಚಂದ್ರ ಗುಪ್ತ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನಟ ಅನಂತ್ ನಾಗ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ, ಪತ್ರಕರ್ತೆ ಆರ್.ಪೂರ್ಣಿಮಾ ಇದ್ದರು. –ಪ್ರಜಾವಾಣಿ ಚಿತ್ರ
ಕರ್ನಾಟಕ ಮಾಧ್ಯಮ ಅಕಾಡೆಮಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್‌.ಹರ್ಷ, ಪತ್ರಕರ್ತ ರಾಜಾ ಶೈಲೇಶಚಂದ್ರ ಗುಪ್ತ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನಟ ಅನಂತ್ ನಾಗ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ, ಪತ್ರಕರ್ತೆ ಆರ್.ಪೂರ್ಣಿಮಾ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು:ಮಾಧ್ಯಮಗಳು ಕೋಮುದ್ವೇಷ, ಜಾತಿಯ ವಿಷಬೀಜ ಬಿತ್ತುವ ಬರಹಗಳನ್ನು ಪ್ರಕಟಿಸಬಾರದು. ರಾಜಕಾರಣಿಗಳಿಗೆ ಮಾಧ್ಯಮ ಕನ್ನಡಿಯಾಗಬೇಕುಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬಹುತ್ವದ ಭಾರತ, ದೇಶ ನಮ್ಮದು ಎನ್ನುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಸರಳಜೀವನ ಕ್ರಮ ಬದುಕಿನ ಭಾಗವಾಗಬೇಕು.ರಾಷ್ಟ್ರ ನಿರ್ಮಾಣಕ್ಕಾಗಿ ಮಾಧ್ಯಮಗಳುಸಮಾಜದ ಒಳಿತಿನ ಮನೋಭಾವ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ರಾಷ್ಟ್ರವನ್ನು ಸದೃಢವಾಗಿ ಕಟ್ಟುವ ಕನಸು ಇದುವರೆಗೂ ನನಸಾಗಿಲ್ಲ. ರಸ್ತೆ, ಕಟ್ಟಡಗಳೇ ಅಭಿವೃದ್ಧಿಯಲ್ಲ. ರಾಜಕೀಯ ಸ್ವಾತಂತ್ರ್ಯವಷ್ಟೇ ಗಾಂಧೀಜಿ ಅವರ ಕನಸಾಗಿರಲಿಲ್ಲ. ಸ್ವಾವಲಂಬಿ ಭಾರತ ಅವರ ಕನಸು. ಸ್ವಾತಂತ್ರ್ಯಾ ನಂತರ ಅಂತಹ ಇಚ್ಛಾಶಕ್ತಿ ಕಾಣಲಿಲ್ಲ. ಸ್ವಾವಲಂಬನೆಗೆ ಒತ್ತು ನೀಡಲಿಲ್ಲ. ಬ್ರಿಟಿಷರ ಹಾದಿಯಲ್ಲಿ ಸಾಗಿದ್ದೇ ದೊಡ್ಡ ಸಾಧನೆ ಎಂದರು.

ನಟ ಅನಂತ್‌ನಾಗ್, ಪತ್ರಿಕಾ ಬರಹಗಳ ಪ್ರೇರಣೆಯಿಂದಲೇ ರಾಜಕಾರಣಕ್ಕೆ ಬಂದಿದ್ದೆ. ಪ್ರತಿಭಾವಂತ ಪತ್ರಕರ್ತರ ಒಡನಾಟವಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿತ್ತು. ಇಂದು ಅಂತಹ ಸ್ಥಿತಿ ಕಾಣುತ್ತಿಲ್ಲ ಎಂದರು.

ಪತ್ರಕರ್ತೆ ಆರ್.ಪೂರ್ಣಿಮಾಮಾತನಾಡಿ, ದೇಶದ ಸಾಮಾಜಿಕ ವ್ಯವಸ್ಥೆಯ ಅನಿಷ್ಟಗಳನ್ನು ಹೋಗಲಾಡಿಸುವಲ್ಲಿ ಮಾಧ್ಯಮಗಳ ಪಾತ್ರವಿದೆ. ಇಂದಿಗೂ ಸಮಾಜದಲ್ಲಿ ಹಲವು ಕೆಟ್ಟ ಸಂಪ್ರದಾಯಗಳು ನೆಲೆಯೂರಿವೆ. ಅವುಗಳ ವಿರುದ್ಧ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ಮೂಢನಂಬಿಕೆ, ಲಿಂಗ ಅಸಮಾನತೆ ತೊಲಗಬೇಕಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯದ ಅಗತ್ಯವಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ, ಪತ್ರಕರ್ತ ರಾಜಾ ಶೈಲೇಶಚಂದ್ರ ಗುಪ್ತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್‌.ಹರ್ಷ ಉಪಸ್ಥಿತರಿದ್ದರು.

‘ನಾನು ಪಕ್ಕಾ ಮೋದಿ ಭಕ್ತ’
‘ನಾನು ಪಕ್ಕಾ ಪ್ರಧಾನಿ ನರೇಂದ್ರ ಮೋದಿಯ ಭಕ್ತ’ ಎಂದು ನಟ ಅನಂತ್‌ನಾಗ್ ಹೇಳಿದರು.

ರಾಷ್ಟ್ರನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ವಿಷಯ ನೋಡಿದ ತಕ್ಷಣ ಈ ಕಾರ್ಯಕ್ರಮವನ್ನು ಮೋದಿಯವರೇ ಆರಂಭಿಸಿರಬಹುದು. ಸರ್ಕಾರವೇ ಮಾಧ್ಯಮಗಳಿಗೆ ಹೇಳಿಕೊಡುವ ಪರಿಸ್ಥಿತಿ ಬಂತಾ ಅಂದುಕೊಂಡೆ. ಗೂಗಲ್‌ನಲ್ಲಿ ಪರಿಶೀಲಿಸೋಣ ಎಂದುಕೊಂಡರೆ ಈಚೆಗೆ ನಡೆದ ಹಿಂದೂ ಎನ್ನುವ ಪದದ ಚರ್ಚೆಯಲ್ಲಿ ಗೂಗಲ್‌ ಹುಡುಕಿದರೆ ಅಶ್ಲೀಲ ಪದ ಬರುತ್ತದೆ ಎನ್ನುವುದ ನೆನಪಿಗೆ ಬಂದು ಸುಮ್ಮನಾದೆ. ಕೊನೆಗೆ ಧೈರ್ಯ ಮಾಡಿ ಹುಡುಕಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.