ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ವೈಟ್‌ಫೀಲ್ಡ್‌ನ ಆಸ್ಟರ್ ಆಸ್ಪತ್ರೆಯು ‘ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿ’ (ಐಒಇಆರ್‌ಟಿ) ಅಳವಡಿಸಿಕೊಂಡಿದೆ.
ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಥೆರಪಿಗೆ ಬಳಸುವ ಯಂತ್ರವನ್ನು ಅನಾವರಣ ಮಾಡಲಾಯಿತು.
ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ ಉಪ ವ್ಯವಸ್ಥಾಪಕ ನಿರ್ದೇಶಕಿ ಅಲಿಶಾ ಮೂಪೆನ್, ‘ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿಗೆ ಅತ್ಯಾಧುನಿಕ ಯಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಶಸ್ತ್ರಚಿಕಿತ್ಸೆ ವೇಳೆ ವಿಕಿರಣ ಚಿಕಿತ್ಸೆಯನ್ನು ನಿಖರವಾಗಿ ಒದಗಿಸಲು ಸಾಧ್ಯವಾಗಲಿದೆ. ದೇಹದ ಮೇಲೆ ವಿಕಿರಣದ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡುತ್ತದೆ. ರೋಗಿಯು ಶೀಘ್ರ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ‘ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರತಿ ನಿತ್ಯ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ನೂತನ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಂಡಲ್ಲಿ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಾಧ್ಯವಾಗಲಿದೆ. ಕ್ಯಾನ್ಸರ್ ಪ್ರಕರಣಗಳ ನಿರ್ವಹಣೆಗೆ ಅತ್ಯಾಧುನಿಕ ವೈದ್ಯಕೀಯ ಸಾಧನಗಳು ಅಗತ್ಯ’ ಎಂದರು.
ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಎಂ.ಎಸ್. ಬೆಳ್ಳಿಯಪ್ಪ, ‘ಈ ವಿಕಿರಣ ಚಿಕಿತ್ಸೆಯಿಂದ ಅಡ್ಡ ಪರಿಣಾಮಗಳು ಕಡಿಮೆ. ಕ್ಯಾನ್ಸರ್ ಗಡ್ಡೆಯನ್ನು ತೆಗೆದ ತಕ್ಷಣ ವಿಕಿರಣ ತಲುಪಿ, ಕ್ಯಾನ್ಸರ್ ಕೋಶಗಳ ಮರು ಬೆಳವಣಿಗೆಯನ್ನು ತಡೆಯುತ್ತದೆ. ಕಡಿಮೆ ಸಮಯದಲ್ಲಿ ನಿಖರ ಶಸ್ತ್ರಚಿಕಿತ್ಸೆ ಸಾಧ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.