ADVERTISEMENT

ರಫೇಲ್ ಹಗರಣಕ್ಕೆ ಪುರಾವೆಗಳಿದ್ದರೂ ಪ್ರಕರಣ ಏಕಿಲ್ಲ: ಪವನ್ ಖೇರಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 6:17 IST
Last Updated 14 ನವೆಂಬರ್ 2021, 6:17 IST
ಪವನ್ ಖೇರಾ
ಪವನ್ ಖೇರಾ   

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಇತರ ನಾಯಕರ ಮೇಲೆ ದಾಳಿ ಮಾಡುವ ಇಡಿ, ಸಿಬಿಐ, ರಫೇಲ್ ಹಗರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ ಪ್ರಕರಣ ದಾಖಲಿಸುತ್ತಿಲ್ಲ ಯಾಕೆ’ ಎಂದು ಎಐಸಿಸಿ ವಕ್ತಾರರಾದ ಪವನ್ ಖೇರಾ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಈ ಸಂಸ್ಥೆಗಳು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಿಲ್ಲವೇ? ರಫೇಲ್ ಹಗರಣದಲ್ಲಿ ನಡೆದಿರುವ ಭ್ರಷ್ಟಾಚಾರ, ಲಂಚ, ಒಳಸಂಚನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪದೇ ಪದೇ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಈ ಪ್ರಕರಣದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದಾದರೆ ನಾವು ತನಿಖೆಗೆ ಆಗ್ರಹಿಸುತ್ತಿರುವಾಗ ಸರ್ಕಾರ ಪಲಾಯನ ಮಾಡುತ್ತಿರುವುದೇಕೆ. ವಿಚಾರಣೆಗೆ ಜಂಟಿ ಸಂಸದೀಯ ಸಮಿತಿ ರಚಿಸುವ ಬದಲು ಪ್ರಧಾನಿ ಓಡಿ ಹೋಗುತ್ತಿರುವುದೇಕೆ. ನಾವು ತಪ್ಪು ಮಾಡಿದ್ದರೆ ನಾವು ಹೆದರಬೇಕಿತ್ತಲ್ಲವೇ. ನಾವು ಯಾವುದೇ ತನಿಖೆಗೆ ಹೆದರುತ್ತಿಲ್ಲ. ಹಾಗಾದರೆ ಇಲ್ಲಿ ತಪ್ಪಿತಸ್ಥರು ಯಾರು. ಯಾವುದೇ ಜನಸಾಮಾನ್ಯನ ಕೈಗೆ ಸಿಗಬಾರದಂಥ ಸೂಕ್ಷ್ಮ ದಾಖಲೆಗಳು ಮಧ್ಯವರ್ತಿಗೆ ಸಿಕ್ಕಿದ್ದಾದರೂ ಹೇಗೆ’ ಎಂದೂ ಅವರು ಪ್ರಶ್ನಿಸಿದರು.

ADVERTISEMENT

‘ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ರಫೇಲ್ ಒಪ್ಪಂ ದಕ್ಕೆ ಮುಂದಾಗಿದೆ. ಹೀಗಾಗಿ, ಈ ಪ್ರಕರಣದ ವಿಚಾರಣೆಯನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದೂ ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಪದಾಧಿಕಾರಿಗಳಾದ ಐಶ್ವರ್ಯ ಮಹದೇವ್, ಲಾವಣ್ಯ ಬಲ್ಲಾಳ್,ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಇದ್ದರು.

ನಕಲಿ ಛಾಪಾ ಕಾಗದ ತಯಾರಿಕೆ: ಐದು ಮಂದಿಯ ಸೆರೆ
ಬೆಂಗಳೂರು ನಗರದಲ್ಲಿ ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದ ಆರೋಪದ ಮೇಲೆ ಐವರನ್ನು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ನೇತೃತ್ವದ ಪೊಲೀಸರ ತಂಡವು ಶನಿವಾರ ಬಂಧಿಸಿದೆ.

‘ವಿವೇಕ ನಗರ ಹಾಗೂ ಬ್ಯಾಟರಾಯನಪುರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಾಲ್ಕು ಕಡೆ ದಾಳಿ ನಡೆಸಿ ಐವರನ್ನು ಬಂಧಿಸಲಾಗಿದೆ. ಆರೋಪಿಗಳ ಮನೆಗಳಲ್ಲಿ ಸಾವಿರಾರು ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದಗಳು, ಠಸ್ಸೆಗಳು ( ಸೀಲ್‌ಗಳು), ಪೆನ್‌ಡ್ರೈವ್‌ಗಳು ಹಾಗೂ ಇತರ ದಾಖಲೆಗಳು ಸಿಕ್ಕಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಅವರಿಂದ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಆ ದಿಸೆಯಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದೂ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.