ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಖರೀದಿಸಿ ಪಡಿತರ ಚೀಟಿದಾರರಿಗೆ ವಿತರಿಸಲು ಹಂಚಿಕೆ ಮಾಡಿರುವ ರಾಗಿ ನೇರವಾಗಿ ಕಾಳಸಂತೆಗೆ ಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಡಿತರ ಧಾನ್ಯ ಸಗಟು ಸಾಗಣೆಯ ಗುತ್ತಿಗೆ ಪಡೆದಿರುವವರೇ ಪಡಿತರವನ್ನು ಕಳ್ಳಸಾಗಣೆ ಮಾಡುತ್ತಿರುವುದು ಬಯಲಿಗೆ ಬಂದಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಜ್ಯೋತಿಪಾಳ್ಯ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟುನಿಂತಿದ್ದ ಲಾರಿ ತಪಾಸಣೆ ವೇಳೆ ಪಡಿತರ ರಾಗಿ ಕಳ್ಳಸಾಗಣೆ ಸಂಗತಿ ಹೊರಬಂದಿದೆ. ಬೆಂಗಳೂರು ಉತ್ತರ, ಪಶ್ಚಿಮ ಮತ್ತು ಪೂರ್ವ ವಲಯಗಳ ವ್ಯಾಪ್ತಿಯಲ್ಲಿನ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ (ಕೆಎಫ್‌ಸಿಎಸ್‌ಸಿ) ಗೋದಾಮುಗಳಿಗೆ ಸಗಟು ಪಡಿತರ ಸಾಗಿಸುವ ಗುತ್ತಿಗೆ ಹೊಂದಿರುವ ಎಸ್.ಎ.ಕೆ.ಟ್ರಾನ್ಸ್‌ಪೋರ್ಟ್ ರಾಗಿ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಎಸ್.ಎ.ಕೆ. ಟ್ರಾನ್ಸ್‌ಪೋರ್ಟ್ ಮಾಲೀಕ ಶೇಖ್ ಅಬ್ದುಲ್ ಖಾಲಿಕ್ ಮತ್ತು ವಾಹನ ಚಾಲಕನ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ. ರಾಗಿಯ ನಿರಂತರವಾಗಿ ಕಳ್ಳಸಾಗಣೆ ಸಂಶಯದ ಮೇಲೆ ತನಿಖೆ ಮುಂದುವರಿದಿದೆ.
ಸಂಗ್ರಹಣಾ ಕೇಂದ್ರದಿಂದ ಕಾಳಸಂತೆಗೆ: ಎಂಎಸ್‌ಪಿ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನ ರೈತರಿಂದ ಖರೀದಿಸಿರುವ ರಾಗಿಯನ್ನು ಅಲ್ಲಿನ ಸಂಗ್ರಹಣಾ ಕೇಂದ್ರದಲ್ಲಿ ದಾಸ್ತಾನು ಮಾಡಿದ್ದು, ಬೆಂಗಳೂರು ನಗರದ ವ್ಯಾಪ್ತಿಗೆ ಹಂಚಿಕೆ ಮಾಡಲಾಗಿತ್ತು. ಬೆಂಗಳೂರು ಉತ್ತರ ಪಡಿತರ ವಲಯದ ವ್ಯಾಪ್ತಿಯ ಕೆ.ಜಿ.ಹಳ್ಳಿಯ ಕೆಎಫ್‌ಸಿಎಸ್‌ಸಿ ಗೋದಾಮಿಗೆ ಸಾಗಿಸಲು 260 ಕ್ವಿಂಟಲ್ ರಾಗಿಯನ್ನು ಜೂನ್ 2ರಂದು ಎಸ್.ಎ.ಕೆ. ಟ್ರಾನ್ಸ್‌ಪೋರ್ಟ್‌ನ ಕೆಎ–01 ಎಡಿ–7535 ಲಾರಿಗೆ ತುಂಬಿಸಲಾಗಿತ್ತು.
ರಾಗಿಯನ್ನು ಕೆ.ಜಿ.ಹಳ್ಳಿ ಗೋದಾಮಿಗೆ ತರುವ ಬದಲಿಗೆ ಮಾಗಡಿ ಮಾರ್ಗವಾಗಿ ಕಾಳಸಂತೆಗೆ ಕೊಂಡೊಯ್ಯಲಾಗುತ್ತಿತ್ತು. ಜ್ಯೋತಿಪಾಳ್ಯದ ಬಳಿ ಲಾರಿ ಕೆಟ್ಟು ನಿಂತಿದ್ದರಿಂದ ಮುಂದಕ್ಕೆ ಸಾಗಲು ಆಗಿರಲಿಲ್ಲ. ರಾಮನಗರ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು ಸಂಶಯದ ಮೇಲೆ ತಪಾಸಣೆ ನಡೆಸಿದಾಗ ರಾಗಿ ಇರುವುದು ಕಂಡುಬಂದಿತ್ತು. ಮಾಗಡಿ ತಾಲ್ಲೂಕಿನ ಆಹಾರ ನಿರೀಕ್ಷಕಿ ಪುಷ್ಪಲತಾ ಟಿ.ಎನ್. ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ಕಾಳಸಂತೆಕೋರರ ನಂಟು: ‘ಪಡಿತರ ಉದ್ದೇಶ ಅಕ್ಕಿ, ರಾಗಿ, ಗೋಧಿಯನ್ನು ಅಧಿಕೃತ ಸಾಗಣೆ ಗುತ್ತಿಗೆದಾರರು, ಕಾಳಸಂತೆಕೋರರು ಶಾಮೀಲಾಗಿ ಕಳ್ಳಸಾಗಣೆ ಮಾಡುತ್ತಿರು ವುದು ನಿರಂತರ ನಡೆಯುತ್ತಿದೆ. ವಿತರಣಾ ಕೇಂದ್ರಗಳಿಂದ ನೇರವಾಗಿ ಕಾಳಸಂತೆಗೆ ಒಯ್ಯುತ್ತಿರುವುದೂ ಹೆಚ್ಚುತ್ತಿದೆ. ಈ ಪ್ರಕರಣದಲ್ಲೂ ಸಾಗಣೆ ಗುತ್ತಿಗೆದಾರರ ಜತೆ ಕಾಳಸಂತೆಕೋರರು ಕೈಜೋಡಿಸಿರುವ ಶಂಕೆ ಇದೆ’ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.
‘ಗುತ್ತಿಗೆದಾರ ಕಪ್ಪುಪಟ್ಟಿಗೆ’
‘ಶೇಖ್ ಅಬ್ದುಲ್ ಖಾಲಿಕ್‌ಗೆ ವಿವಿಧೆಡೆ ನೀಡಿರುವ ಸಾಗಣೆ ಗುತ್ತಿಗೆ ಅಮಾನತು ಮತ್ತು ಎಸ್.ಎ.ಕೆ. ಟ್ರಾನ್ಸ್‌ಪೋರ್ಟ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತೆ ಎಂ. ಕನಗವಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.