ಬೊಮ್ಮನಹಳ್ಳಿ: ‘ಕರ್ನಾಟಕ ಸುವರ್ಣ ಸಂಭ್ರಮ 50’ ಅಂಗವಾಗಿ ಎಚ್‌ಎಸ್‌ಆರ್ ಬಡಾವಣೆಯ ಪರಂಗಿಪಾಳ್ಯದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ದಾವಣಗೆರೆಯ ಯೋಗೇಶ್ ಮತ್ತು ವೈಟ್‌ಫೀಲ್ಡ್‌ನ ಸೌಮ್ಯಾ ಪ್ರಥಮ ಬಹುಮಾನ ಗಳಿಸಿದ್ದಾರೆ.
ದಾವಣಗೆರೆ, ರಾಮನಗರ, ಕುಣಿಗಲ್, ಮಾಲೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜನರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪುರುಷರ ವಿಭಾಗದಲ್ಲಿ ದಾವಣಗೆರೆಯ ಯೋಗೇಶ್ 13 ಮುದ್ದೆಗಳನ್ನು ತಿಂದು ಪ್ರಥಮ ಸ್ಥಾನದೊಂದಿಗೆ ಟಗರನ್ನು ಬಹುಮಾನವಾಗಿ ಪಡೆದರು, ಮಹಿಳೆಯರ ವಿಭಾಗದಲ್ಲಿ ವೈಟ್‌ಫೀಲ್ಡ್‌ನ ಸೌಮ್ಯಾ ಒಂಬತ್ತು ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದು 32 ಇಂಚಿನ ಟಿವಿಯನ್ನು ಬಹುಮಾನವಾಗಿ ಪಡೆದರು.
ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಹನ್ನೆರೆಡೂವರೆ ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದು ಕುರಿ ಮರಿ, ಕುಣಿಗಲ್‌ನ ಲೋಕೆಶ್ 12 ಮುದ್ದೆ ತಿಂದು ತೃತೀಯ ಸ್ಥಾನದೊಂದಿಗೆ ಎರಡು ನಾಟಿ ಕೋಳಿಗಳನ್ನು ಬಹುಮಾನವಾಗಿ ಪಡೆದರು.
ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಚಂದ್ರಕಲಾ ಸಿ.ಜಿ. ಎಂಟು ಮುದ್ದೆ ತಿಂದು ಮಿಕ್ಸರ್ ಗ್ರೈಂಡರ್, ತಾರಾ ಹೋಟೆಲ್‌ಗಳಲ್ಲಿ ಕಾರ್ಯಕ್ರಮಗಳಲ್ಲಿ ಹಾಜರಾಗಿ ಊಟ ಸವಿಯುವ ಬೆಂಗಳೂರಿನ ಕವಿತಾ ಏಳು ಮುದ್ದೆ ತಿಂದು ತೃತೀಯ ಸ್ಥಾನದೊಂದಿಗೆ ಕಿಚನ್ ಸೆಟ್ ಬಹುಮಾನ ಪಡೆದರು.
ಕಾರ್ಯಕ್ರಮ ಆಯೋಜಕ ಅನಿಲ್ ರೆಡ್ಡಿ ಮಾತನಾಡಿ, ‘ದೇಸಿ ಆಹಾರ ಪದ್ದತಿಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಜಂಕ್ ಫುಡ್‌ನಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತಿದೆ. ಉತ್ತಮ ಆಹಾರ ಶೈಲಿಯನ್ನು ಉತ್ತೇಜಿಸುವ ಕಾರಣದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಉಮಾಪತಿ ಶ್ರೀನಿವಾಸ ಗೌಡ, ನಾರಾಯಣ ಗೌಡ, ಟಿ.ವಾಸುದೇವ ರೆಡ್ಡಿ ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.