ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುತ್ತಿದ್ದ ಆಹಾರದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದ್ದು, ಜನವರಿಯಿಂದ ಬೆಂಗಳೂರಿನ ಗ್ರಾಹಕರು ರಾಗಿ ಮುದ್ದೆ ಊಟ ಸವಿಯಬಹುದು.
ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ವೈವಿಧ್ಯತೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆಯಾ ಪ್ರದೇಶದ ಊಟವನ್ನು ಸೇರಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ 169 ಇಂದಿರಾ ಕ್ಯಾಂಟೀನ್‌ಗಳಿದ್ದು, ಇನ್ನು ಮುಂದೆ ನಿತ್ಯ ಗ್ರಾಹಕರಿಗೆ ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ ಊಟ ಲಭ್ಯವಾಗಲಿದೆ. ನಗರದ ಕ್ಯಾಂಟೀನ್‌ಗಳಲ್ಲಿ ಇದುವರೆಗೂ ರೈಸ್‌ಬಾತ್, ಇಡ್ಲಿ, ಉಪ್ಪಿಟ್ಟು, ಅನ್ನ, ಸಾಂಬಾರ್ ಮಾತ್ರ ಸಿಗುತ್ತಿತ್ತು. ಹೊಸದಾಗಿ ರಾಗಿ ಮುದ್ದೆಯನ್ನು ಮೆನುವಿನಲ್ಲಿ ಸೇರಿಸಲಾಗಿದೆ.
‘ಸ್ಥಳೀಯವಾಗಿ ಬಳಸುವ ಆಹಾರ ಪದಾರ್ಥ ನೀಡುವಂತೆ ಸರ್ಕಾರ ಸೂಚಿಸಿತ್ತು. ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಊಟದ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಳೇ ದರದಂತೆ ಬೆಳಿಗ್ಗಿನ ತಿಂಡಿಗೆ ₹5 ಹಾಗೂ ಊಟ ₹10ಕ್ಕೆ ಲಭ್ಯವಾಗಲಿದೆ. ಜನವರಿ ಮೊದಲ ವಾರದಿಂದಲೇ ಹೊಸ ಮೆನುವಿನಂತೆ ಆಹಾರ ಪೂರೈಸಲು ಪ್ರಯತ್ನಿಸಲಾಗುತ್ತಿದೆ. ಅದು ಸಾಧ್ಯವಾಗದಿದ್ದರೆ ಜನವರಿ 26ರಿಂದ ಖಂಡಿತಾ ಹೊಸ ಮೆನು ಜಾರಿಗೊಳ್ಳಲಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.