ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಎಂಟಿಸಿ ಬಸ್ಸಿನಲ್ಲಿ ಜನಸಾಮಾನ್ಯರ ಜೊತೆ ಸೋಮವಾರ ಪ್ರಯಾಣಿಸಿದರು.
ಬೆಳಿಗ್ಗೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಓಡಾಡಿದ ರಾಹುಲ್, ಸಮೀಪದಲ್ಲೇ ಇದ್ದ ಬಸ್ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರಿಂದ ತುಂಬಿದ್ದ ಬಿಎಂಟಿಸಿ ಬಸ್ (ಕೆ.ಆರ್. ಮಾರುಕಟ್ಟೆ– ಬಿಳಿಶಿವಾಲೆ) ಏರಿದ ಅವರು ಹೆಣ್ಣೂರು ಕ್ರಾಸ್‌ವರೆಗೆ ಪ್ರಯಾಣಿಸಿದರು. ರಾಹುಲ್‌ಗೆ ಮಹಿಳೆಯೊಬ್ಬರು ತಮ್ಮ ಸೀಟು ಬಿಟ್ಟುಕೊಟ್ಟರು.
ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯರ ಜೊತೆ ರಾಹುಲ್ ಸಂವಾದ ನಡೆಸಿದರು. ರಾಜ್ಯದ ಅಭಿವೃದ್ಧಿ ಕುರಿತ ಅವರ ದೃಷ್ಟಿಕೋನದ ಬಗ್ಗೆ ಮಾಹಿತಿ ಪಡೆದರು.
‘ಅಗತ್ಯ ವಸ್ತುಗಳ ಬೆಲೆ ಏರಿಕೆ, ಗೃಹಲಕ್ಷ್ಮಿ ಯೋಜನೆ (ಮನೆಯ ಮುಖ್ಯಸ್ಥ ಮಹಿಳೆಗೆ ತಿಂಗಳಿಗೆ ₹2,000), ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಕಾಂಗ್ರೆಸ್‌ನ ‘ಗ್ಯಾರಂಟಿ’ ಯೋಜನೆಗಳ ಕುರಿತು ರಾಹುಲ್ ನಮ್ಮ ಜೊತೆ ಚರ್ಚಿಸಿದರು’ ಎಂದು ಬಸ್ಸಿನಲ್ಲಿದ್ದ ಮಹಿಳೆಯೊಬ್ಬರು ಹೇಳಿದರು.
ಅದಕ್ಕೂ ಮೊದಲು ವಸಂತನಗರದಲ್ಲಿರುವ ಕಾಫಿ ಡೇಗೆ ರಾಹುಲ್ ತೆರಳಿದಾಗ ಅಲ್ಲಿದ್ದ ವಿದ್ಯಾರ್ಥಿನಿಯರುರಾಹುಲ್ ಜೊತೆ ನಿಂತು ಸೆಲ್ಫಿ ತೆಗೆದುಕೊಂಡರು. ವಿದ್ಯಾರ್ಥಿನಿಯೊಬ್ಬಳುಹಿಜಾಬ್ ತೆಗೆದು ಸೆಲ್ಫಿಗೆ ಪೋಸ್ ಕೊಟ್ಟಳು. ‘ಲವ್ ಯು ಸರ್’ ಎಂದ ವಿದ್ಯಾರ್ಥಿನಿಯ ಕೈ ಕುಲುಕಿದ
ರಾಹುಲ್, ‘ಲವ್ ಯು ಟೂ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.