ಬೆಂಗಳೂರು: ಲೆವೆಲ್ ಕ್ರಾಸ್‌ಗಳಲ್ಲಿ (ಎಲ್‌ಸಿ) ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ನೈರುತ್ಯ ರೈಲ್ವೆ ಯೋಜನೆಯೊಂದನ್ನು ರೂಪಿಸಿದೆ. ನಗರದಲ್ಲಿ ಎಲ್‌ಸಿಗಳೇ ಇಲ್ಲದಂತೆ ಮಾಡಲು ಮುಂದಾಗಿದೆ.
ಎಲ್ಲ ಕಡೆಗಳಲ್ಲಿ ರೈಲು ಹಳಿಯ ಕೆಳಗೆ ಸೇತುವೆ (ಆರ್‌ಯುಬಿ) ಮತ್ತು ಹಳಿಯ ಮೇಲೆ ಸೇತುವೆ (ಆರ್‌ಒಬಿ) ನಿರ್ಮಿಸುವ ಯೋಜನೆ ಆರಂಭಿಸಿದೆ. ಜೊತೆಗೆ ಬಿಎಸ್‌ಆರ್‌ಪಿ ಕಾರಿಡಾರ್‌ಗಳು ಹೋಗುವಲ್ಲಿ ಹಳಿ ಎತ್ತರಿಸುವ ಯೋಜನೆಯೂ ಜಾರಿಯಲ್ಲಿದೆ.
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈಗಾಗಲೇ ಆರ್‌ಯುಬಿ/ಆರ್‌ಒಬಿ ನಿರ್ಮಿಸಿ, ಏಳು ಲೆವೆಲ್ ಕ್ರಾಸಿಂಗ್‌ಗಳನ್ನು (ಎಲ್‌ಸಿ) ಮುಚ್ಚಿದೆ. ಮುಂದಿನ ಮಾರ್ಚ್ ಒಳಗೆ ಮತ್ತೆ ನಾಲ್ಕು ಕಡೆಗಳಲ್ಲಿ ನಾಲ್ಕು ಎಲ್‌ಸಿಗಳನ್ನು ತೆಗೆದು ಹಾಕಲಿದೆ. ಇದಲ್ಲದೇ ಇನ್ನೂ ಮೂರು ಎಲ್‌ಸಿಗಳನ್ನು ತೆಗೆಯುವ ಕಾಮಗಾರಿ ಮಂಜೂರಾಗಿದೆ.
ಹಳಿಯನ್ನೇ ಎತ್ತರಿಸುವ ಯೋಜನೆ: ಲೆವೆಲ್ ಕ್ರಾಸಿಂಗ್ ತಪ್ಪಿಸಲು ಆರ್‌ಯುಬಿ ಅಥವಾ ಆರ್‌ಒಬಿ ನಿರ್ಮಿಸುವ ಪದ್ಧತಿಯನ್ನು ಬಿಟ್ಟು ಹಳಿಯನ್ನೇ ಎತ್ತರಿಸಿ ಲೆವೆಲ್ ಕ್ರಾಸಿಂಗ್ ಇಲ್ಲದಂತೆ ಮಾಡುವ ಯೋಜನೆಯನ್ನು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುತ್ತಿದೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯಲ್ಲಿ (ಬಿಎಸ್‌ಆರ್‌ಪಿ) ನಾಲ್ಕು ಕಾರಿಡಾರ್‌ಗಳಿವೆ. ಒಟ್ಟು 149 ಕಿಲೋಮೀಟರ್ ಉದ್ದದ ಈ ಯೋಜನೆಯನ್ನು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ–ರೈಡ್) ಜಾರಿಗೆ ತರುತ್ತಿದೆ. ಅದರಲ್ಲಿ ಈಗಾಗಲೇ ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ನಡುವೆ (ಕಾರಿಡಾರ್–2) ಕಾಮಗಾರಿ ಚಾಲ್ತಿಯಲ್ಲಿದೆ. ಈ ಕಾರಿಡಾರ್‌ನಲ್ಲಿ ಪ್ರಮುಖ ಏಳು ಲೆವೆಲ್ ಕ್ರಾಸಿಂಗ್ ತೆರವಿಗೆ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಹೆಬ್ಬಾಳ–ಬಾಣಸವಾಡಿ ನಡುವೆ 6 ಕಿಲೋಮೀಟರ್‌ನಷ್ಟು ರೈಲ್ವೆ ಹಳಿಯನ್ನು 10 ಅಡಿಯಷ್ಟು ಎತ್ತರಿಸಲಾಗುತ್ತಿದೆ.
ಕಾರಿಡಾರ್–1 ಬೆಂಗಳೂರು ನಗರ–ದೇವನಹಳ್ಳಿ ಮಾರ್ಗದಲ್ಲಿ 6, ಕಾರಿಡಾರ್–3 ಹೀಲಲಿಗೆ–ರಾಜಾನುಕುಂಟೆ ಮಾರ್ಗದಲ್ಲಿ 2 ಮತ್ತು ಕಾರಿಡಾರ್–4 ಕೆಂಗೇರಿ–ವೈಟ್‌ಫೀಲ್ಡ್ ಮಾರ್ಗದಲ್ಲಿ 11 ಸೇರಿದಂತೆ ನಾಲ್ಕು ಕಾರಿಡಾರ್‌ಗಳಲ್ಲಿ 26 ಲೆವೆಲ್ ಕ್ರಾಸಿಂಗ್‌ಗಳನ್ನು ಬಿಎಸ್‌ಆರ್‌ಪಿ ತೆಗೆದು ಹಾಕಲಿದೆ ಎಂದು ಕೆ–ರೈಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖ ಎಲ್‌ಸಿಗಳನ್ನು ಗುರುತಿಸಿದ್ದರೂ, ಅವುಗಳಲ್ಲದೇ ಇದೇ ಮಾರ್ಗಗಳಲ್ಲಿ ಸಣ್ಣ ಸಣ್ಣ ರಸ್ತೆಗಳ ಕ್ರಾಸಿಂಗ್ ಕೂಡ ಇವೆ. ಹಳಿ ಎತ್ತರಿಸುವುದರಿಂದ ಎಲ್ಲದಕ್ಕೂ ಪರಿಹಾರ ಸಿಗಲಿದೆ. ರಸ್ತೆಗಳು ಹಾಗೇ ಉಳಿಯಲಿದ್ದು, ರೈಲು ಮಾತ್ರ ಮೇಲಿನಿಂದ ಸಾಗಲಿದೆ. ನಾಲ್ಕು ಕಾರಿಡಾರ್‌ಗಳ ಕಾಮಗಾರಿಗಳು ಪೂರ್ಣಗೊಂಡಾಗ ಬೆಂಗಳೂರು ‘ಲೆವೆಲ್ ಕ್ರಾಸಿಂಗ್‌ರಹಿತ’ ನಗರವಾಗಿ ಗುರುತಿಸಿಕೊಳ್ಳಲಿದೆ.
ಆರ್‌ಒಬಿ, ಆರ್‌ಯುಬಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಬೇಕಾಗುತ್ತದೆ. ಆದರೆ, ಹಳಿ ಎತ್ತರಿಸುವ ವಿಧಾನ ಅಳವಡಿಸುವಾಗ ಭೂಸ್ವಾಧೀನದ ಅಗತ್ಯವಿಲ್ಲ. ಏಕೆಂದರೆ, ಈಗಾಗಲೇ ಇರುವ ರೈಲು ಹಳಿಯ ಪಕ್ಕದಲ್ಲೇ ಕಾರಿಡಾರ್‌ಗಳು ನಿರ್ಮಾಣಗೊಳ್ಳುತ್ತಿವೆ. ಹಾಗಾಗಿ ಭೂಸ್ವಾಧೀನದ ಕಷ್ಟವೂ ತಪ್ಪಲಿದೆ. ಮೊದಲು ಬಿಎಸ್‌ಆರ್‌ಪಿ ಹಳಿಗಳನ್ನು ಎತ್ತರಿಸಿ ಅಳವಡಿಸಲಾಗುತ್ತದೆ. ರೈಲು ಸಂಚಾರವನ್ನು ಈ ಹಳಿಗಳಿಗೆ ಬದಲಾಯಿಸಿದ ಬಳಿಕ ಈಗಾಗಲೇ ಇರುವ ಹಳಿಗಳನ್ನು ಎತ್ತರಿಸಲಾಗುತ್ತದೆ. ನಾಲ್ಕು ಪಥಗಳು ನಿರ್ಮಾಣಗೊಂಡ ಬಳಿಕವಷ್ಟೇ ಬಿಎಸ್‌ಆರ್‌ಪಿ ರೈಲು ಸಂಚಾರ ಆರಂಭಗೊಳ್ಳಲಿದೆ. ಹಾಗಾಗಿ ಹಳಿಗಳನ್ನು ಎತ್ತರಿಸುವ ಕಾಮಗಾರಿ ನಡೆಯುವ ಸಮಯದಲ್ಲಿ ರೈಲು ಸಂಚಾರಕ್ಕೆ ತೊಡಕಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಲ್ಲವಾಗುವ ಎಲ್‌ಸಿಗಳು: ಕೊಡಿಗೇಹಳ್ಳಿ, ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಹಿಂಭಾಗ, ದೊಡ್ಡಜಾಲ, ಕೆಐಎಡಿಬಿ, ದೇವನಹಳ್ಳಿಯಲ್ಲಿ 2, ಬಾಣಸವಾಡಿ, ಕಾವೇರಿನಗರ, ನಾಗವಾರ, ಕನಕನಗರದಲ್ಲಿ 2, ಜ್ಞಾನಭಾರತಿ, ಆರ್.ವಿ. ಕಾಲೇಜು, ಸಿಂಗ್ರನ ಅಗ್ರಹಾರ, ಹುಸ್ಕೂರಿನಲ್ಲಿ 2, ಅಂಬೇಡ್ಕರ್ ನಗರ, ಮಾರತ್‌ಹಳ್ಳಿ, ಕಗ್ಗದಾಸಪುರ, ಜಕ್ಕೂರು, ಕೆಪಿಸಿಎಲ್ ಗ್ಯಾಸ್ ಪವರ್ ಪ್ಲಾಂಟ್, ಮುದ್ದನಹಳ್ಳಿ, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆಗಳಲ್ಲಿ ಒಟ್ಟು 26 ಎಲ್‌ಸಿಗಳನ್ನು ಬಿಎಸ್‌ಆರ್‌ಪಿ ತೆಗೆದುಹಾಕಲಿದೆ.
ಸಮಯ ಇಂಧನ ಉಳಿತಾಯ
ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆಯುವ ಮೂಲಕ ವಾಹನಗಳು ಸರಾಗವಾಗಿ ಸಂಚರಿಸುವಂತೆ ಮಾಡುವುದರಿಂದ ಸವಾರರ ಸಮಯ ಉಳಿಯುತ್ತದೆ. ಇಂಧನವೂ ಉಳಿತಾಯವಾಗುತ್ತದೆ. ರೈಲು ಹೋದಮೇಲೆ ವಾಹನಗಳು ಸಾಗುವಾಗ ಮಾಡುವ ಹಾರ್ನ್‌ಗಳ ಸದ್ದು ತಲೆಚಿಟ್ಟು ಹಿಡಿಸುತ್ತದೆ. ಎಲ್‌ಸಿ ತೆರವಿನಿಂದ ಈ ಸಮಸ್ಯೆಯೂ ಇರುವುದಿಲ್ಲ. ಕೆ–ರೈಡ್‌ನವರು ಬಿಎಸ್‌ಆರ್‌ಪಿ ಕಾರಿಡಾರ್‌ಗಳ ಮಾರ್ಗಗಳಲ್ಲಿ ನಿರ್ಮಿಸುತ್ತಿರುವ ಹಳಿ ಎತ್ತರಿಸುವ ಯೋಜನೆಯಿಂದ ಭೂಸ್ವಾಧೀನ ಉಳಿತಾಯವಲ್ಲದೇ ಕಾಮಗಾರಿ ವೇಳೆ ಆರು ತಿಂಗಳಿಂದ ಒಂದು ವರ್ಷದವರೆಗೆ ರಸ್ತೆ ಮುಚ್ಚುವ ಅಗತ್ಯವಿರುವುದಿಲ್ಲ. ಬ್ಲಾಕ್‌ಗಳನ್ನು ತಂದು ಕೂರಿಸುವಾಗ ಮಾತ್ರ ಸಂಚಾರ ಸ್ಥಗಿತಗೊಳಿಸಿದರೆ ಸಾಕಾಗುತ್ತದೆ.
ರಾಜ್‌ಕುಮಾರ್ ದುಗರ್ ಸಿಟಜನ್ಸ್ ಫಾರ್ ಸಿಟಿಜನ್ಸ್ (ಸಿ4ಸಿ) ಸಂಸ್ಥಾಪಕ
ತಪ್ಪಲಿದೆ ಅಪಾಯ
ವಾಹನದಟ್ಟಣೆಯ ಸಾಂದ್ರತೆಗೆ ಅನುಗುಣವಾಗಿ ಲೆವೆಲ್ ಕ್ರಾಸಿಂಗ್‌ಗಳನ್ನು ಎಬಿಸಿಡಿಇ ಎಂದು ವಿಭಾಗಿಸಿ ಅಧಿಕ ವಾಹನ ದಟ್ಟಣೆ ಉಂಟಾಗುವ ಸ್ಥಳಗಳಲ್ಲಿನ ಎಲ್‌ಸಿಗಳನ್ನು ಮೊದಲು ತೆರವುಗೊಳಿಸುತ್ತಿದ್ದಾರೆ. ಇದು ರಾಜ್ಯದಾದ್ಯಂತ ನಡೆಯುತ್ತಿದೆ. ಲೆವೆಲ್ ಕ್ರಾಸಿಂಗ್‌ಗಳಲ್ಲಿ ರೈಲು ಬರುವ ಹೊತ್ತಿಗೆ ಗೇಟ್ ಹಾಕಿದರೂ ಕೆಲವು ಕಡೆಗಳಲ್ಲಿ ಸೈಕಲ್ ಬೈಕ್ ಸವಾರರು ಗೇಟ್‌ನ ಸಂದಿಯಲ್ಲಿ ನುಗ್ಗಿ ದಾಟುತ್ತಾರೆ. ಪಾದಚಾರಿಗಳು ಕೂಡ ಇದೇ ಅಪಾಯದ ಕೆಲಸ ಮಾಡುತ್ತಾರೆ. ಎಲ್‌ಸಿ ತೆರವುಗೊಳಿಸುವುದರಿಂದ ಈ ಅಪಾಯ ತಪ್ಪಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮೇಲೆ ಒತ್ತಡ ತಂದು ಎಲ್ಲ ಎಲ್‌ಸಿಗಳನ್ನು ತೆರವುಗೊಳಿಸುವಂತೆ ಮಾಡಬೇಕು.
ಕೆ.ಎನ್. ಕೃಷ್ಣಪ್ರಸಾದ್ ರೈಲ್ವೆ ಹೋರಾಟಗಾರ
ವಿಳಂಬ ಬೇಡ
ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆಯುವ ಕೆಲಸ ತ್ವರಿತಗತಿಯಲ್ಲಿ ನಡೆಯಬೇಕು. ಮಳೆ ಬಂದರೆ ಕೆಳ ಸೇತುವೆಗಳಲ್ಲಿ ನೀರು ನಿಲ್ಲುತ್ತಿದೆ. ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಹಾಗಾಗಿ ನೀರು ನಿಲ್ಲದಂತೆ ಮಾಡಬೇಕು. ಇಂಥ ಸಮಸ್ಯೆಗಳನ್ನು ತಪ್ಪಿಸಲು ಹಳಿ ಎತ್ತರಿಸುವ ಯೋಜನೆ ಇದೆಯಾದರೂ ಉಪನಗರ ರೈಲು ಯೋಜನೆಯ ಕಾಮಗಾರಿಗಳು ಬಹಳ ನಿಧಾನವಾಗಿ ನಡೆಯುತ್ತಿವೆ. ಇವೆಲ್ಲ ವೇಗ ಪಡೆದುಕೊಳ್ಳಬೇಕು.
ಸೃಜನ್ ಪಿ. ಖಾಸಗಿ ಕಂಪನಿ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.