ADVERTISEMENT

ರೈಲ್ವೆ ಪ್ರಯಾಣ ದರ ರಿಯಾಯಿತಿ; ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 16:47 IST
Last Updated 1 ಜೂನ್ 2023, 16:47 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ರೈಲ್ವೆ ಪ್ರಯಾಣ ದರದಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮರು ಜಾರಿಗೊಳಿಸಲು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ನಿರ್ದೇಶಿಸಬೇಕು‘ ಎಂದು ಕೋರಲಾಗಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, ’ಈ ವಿಚಾರವಾಗಿ ಚುನಾಯಿತ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಪರಿಹಾರ ಪಡೆಯಿರಿ‘ ಎಂದು ಅರ್ಜಿದಾರರಿಗೆ ಸಲಹೆ ನೀಡಿದೆ.

ಈ ಕುರಿತಂತೆ ಹುಬ್ಬಳ್ಳಿಯ ವೈದ್ಯ, ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಡಾ. ವಿನೋದ್ ಜಿ. ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿನೋದ್ ಜಿ. ಕುಲಕರ್ಣಿ ವಾದ ಆಲಿಸಿದ ನ್ಯಾಯಪೀಠ, ’ಪ್ರಯಾಣ ದರದಲ್ಲಿ ರಿಯಾಯಿತಿ ಅಥವಾ ವಿನಾಯಿತಿ ನೀಡುವುದು ಸರ್ಕಾರದ ನೀತಿ ನಿರ್ಧಾರಕ್ಕೆ ಒಳಪಟ್ಟ ವಿಷಯ. ಇದರಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಲು ಅಥವಾ ಮಧ್ಯಪ್ರವೇಶಿಸಲು ಬರುವುದಿಲ್ಲ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದರ ಬದಲಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಭ್ಯವಿರುವ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ‘ ಎಂದು ಅರ್ಜಿದಾರರಿಗೆ ಸೂಚಿಸಿತು.

ADVERTISEMENT

ಅರ್ಜಿಯಲ್ಲಿ ಏನಿತ್ತು?:

’ರೈಲ್ವೆ ಪ್ರಯಾಣ ದರದಲ್ಲಿ ಈ ಮೊದಲು 58 ವರ್ಷ ದಾಟಿದ ಮಹಿಳೆಯರಿಗೆ ಶೇ 50ರಷ್ಟು ಹಾಗೂ 60 ವರ್ಷ ದಾಟಿದ ಪುರುಷರಿಗೆ ಶೇ 40ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಇದರಿಂದ ಹಿರಿಯ ನಾಗರಿಕರು ಧಾರ್ಮಿಕ ಕೇಂದ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಅನುಕೂಲವಾಗಿತ್ತು. ಆದರೆ, ಕೋವಿಡ್-19ರ ನಂತರ ರೈಲ್ವೆ ಇಲಾಖೆ ಈ ರಿಯಾಯಿತಿಯನ್ನು ಸ್ಥಗಿತಗೊಳಿಸಿದೆ. ಇದು ನಾಗರಿಕರ ಪ್ರಯಾಣದ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ‘ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.