ADVERTISEMENT

ಚಲಿಸುತ್ತಿದ್ದ ರೈಲಿನಿಂದ ಹೊರಗೆಳೆದು ಸೈನಿಕನ ಸುಲಿಗೆ

ತೀವ್ರ ಗಾಯಗೊಂಡ ಯೋಧನಿಗೆ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:52 IST
Last Updated 27 ಆಗಸ್ಟ್ 2019, 19:52 IST
.
.   

ಬೆಂಗಳೂರು: ರೈಲಿನ ಕಿಟಕಿ ಬಳಿ ನಿಂತು ಪ್ರಯಾಣಿಸುವವರನ್ನು ಸುಲಿಗೆ ಮಾಡುವ ದುಷ್ಕರ್ಮಿಗಳ ಗ್ಯಾಂಗ್ ಪುನಃ ಕಾಣಿಸಿಕೊಂಡಿದ್ದು, ಇದೀಗ ಸೈನಿಕರೊಬ್ಬರನ್ನು ರೈಲಿನಿಂದ ಹೊರಗೆಳೆದು ಬೀಳಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದೆ.

ತೀವ್ರ ಗಾಯಗೊಂಡಿರುವ ಸೈನಿಕ ಮಾದೇಗೌಡ (28) ಎಂಬುವರನ್ನು ಕಮಾಂಡೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಹೇಳಿಕೆ ಆಧರಿಸಿ ಬೆಂಗಳೂರು ರೈಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಮದ್ದೂರು ತಾಲ್ಲೂಕಿನ ಕಾರ್ಕಳಿಯ ಮಾದೇಗೌಡ, ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆ ತೆಗೆದುಕೊಂಡು ಪತ್ನಿ ಹಾಗೂ ಮಗನ ಜೊತೆ ಇದೇ 25ರಂದು ಬೆಂಗಳೂರಿಗೆ ಬಂದಿದ್ದರು. ಮದ್ದೂರಿಗೆ ಹೋಗಲು ಬೆಳಿಗ್ಗೆ ರೈಲು ನಿಲ್ದಾಣದಿಂದ ತೂತುಕುಡಿ ಎಕ್ಸ್‌ಪ್ರೆಸ್‌ ರೈಲು ಹತ್ತಿದ್ದರು’ ಎಂದು ರೈಲು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ರೈಲು ಹೊರಟಿರುವಾಗಲೇ ಶೌಚಾಲಯಕ್ಕೆ ಹೋಗಿದ್ದ ಮಾದೇಗೌಡ, ಅಲ್ಲಿಂದ ಹೊರಬಂದು ಕಿಟಕಿ ಬಳಿ ನಿಂತಿದ್ದರು. ಹಳಿ ಪಕ್ಕದ ಸಿಗ್ನಲ್‌ ಕಂಬ ಏರಿ ನಿಂತಿದ್ದ ದುಷ್ಕರ್ಮಿಗಳು, ಅವರನ್ನು ಹೊರಗೆಳೆದು ಮೊಬೈಲ್‌ ಕಿತ್ತುಕೊಂಡಿದ್ದರು. ಸೈನಿಕ ಹಳಿ ಮೇಲೆಯೇ ಬಿದ್ದು ನರಳಾಡುತ್ತಿದ್ದರು’.

ADVERTISEMENT

‘ಪತಿ ವಾಪಸ್‌ ಬಾರದಿದ್ದರಿಂದ ಗಾಬರಿಗೊಂಡ ಪತ್ನಿ, ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಚೈನ್ ಎಳೆದು ರೈಲು ನಿಲ್ಲಿಸಿದ್ದರು. ಸಹಾಯಕ್ಕೆ ಹೋಗಿದ್ದ ಯುವಕನೊಬ್ಬ, ಹಳಿ ಮೇಲೆ ಹುಡುಕುತ್ತ ಹೋಗಿದ್ದ. ನರಳಾಡುತ್ತಿದ್ದ ಮಾದೇಗೌಡ ಅವರನ್ನು ಆತನೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾನೆ’ ಎಂದು ಪೊಲೀಸರು ವಿವರಿಸಿದರು.

ಇತ್ತೀಚೆಗಷ್ಟೇ ಇಬ್ಬರನ್ನು ಬಂಧಿಸಿದ್ದರು
ನಗರದಿಂದ ಅರಸೀಕೆರೆಗೆ ಹೊರಟಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿ.ಆರ್.ಸತೀಶ್ ಎಂಬುವರನ್ನು ಹೊರಗೆ ಎಳೆದು ಬೀಳಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದರು. ಅವರಿಂದ 11 ಮೊಬೈಲ್ ಹಾಗೂ ಎರಡು ಚಿನ್ನದ ಸರ ಜಪ್ತಿಮಾಡಿದ್ದರು.

ಅದಾದ ನಂತರ, ಪುನಃ ಸುಲಿಗೆ ಪ್ರಕರಣ ವರದಿಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.