ADVERTISEMENT

ಬೆಂಗಳೂರು | ರೈಲಿನಲ್ಲಿ ಮಹಿಳೆಯರ ಸರ ಕಳವು; ಇಬ್ಬರ ಬಂಧನ

ಸಾಲ ತೀರಿಸಲು ಅಗತ್ಯವಿದ್ದ ಹಣ ಹೊಂದಿಸಲು ಕೃತ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 14:30 IST
Last Updated 15 ಫೆಬ್ರುವರಿ 2024, 14:30 IST
ಬಾಲಾಜಿ
ಬಾಲಾಜಿ   

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ಚಿನ್ನದ ಸರಗಳನ್ನು ಕಿತ್ತೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಬಂಗಾರಪೇಟೆ ದೇಶಿಹಳ್ಳಿಯ ಎಸ್‌.ಕೆ. ಕಮಲನಾಥನ್ (42) ಹಾಗೂ ಕೆ. ಬಾಲಾಜಿ (24) ಬಂಧಿತರು. ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಇವರಿಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಕಳ್ಳತನ ಸಂಗತಿ ಪತ್ತೆಯಾಯಿತು’ ಎಂದು ರೈಲ್ವೆ ಪೊಲೀಸರು ಹೇಳಿದರು.

‘ಆರೋಪಿ ಕಮಲನಾಥ್, ಕೇಟರಿಂಗ್‌ ಕೆಲಸ ಮಾಡುತ್ತಿದ್ದ. ಜೀವನ ನಿರ್ವಹಣೆಗೆ ಸಂಬಳ ಸಾಲುತ್ತಿರಲಿಲ್ಲ. ಹಲವರ ಬಳಿ ಸಾಲ ಮಾಡಿದ್ದ. ನಿಗದಿತ ಅವಧಿಯೊಳಗೆ ಸಾಲ ತೀರಿಸಲು ಆಗಿರಲಿಲ್ಲ. ಸಾಲಗಾರರು ತಮ್ಮ ಹಣ ವಾಪಸು ನೀಡುವಂತೆ ಕಿರುಕುಳ ನೀಡಲಾರಂಭಿಸಿದ್ದರು’ ಎಂದರು.

ADVERTISEMENT

‘ಸಾಲ ತೀರಿಸಲು ಅಗತ್ಯವಿರುವ ಹಣ ಹೊಂದಿಸಲೆಂದು ಕಮಲನಾಥ್ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಈ ಬಗ್ಗೆ ಕೆ. ಬಾಲಾಜಿ ಸಹಾಯ ಕೋರಿದ್ದ. ಬಾಲಾಜಿಗೂ ಹಣದ ಅಗತ್ಯವಿತ್ತು. ಇಬ್ಬರೂ ಸೇರಿ ಕಳ್ಳತನಕ್ಕೆ ಸಿದ್ಧವಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪರಾರಿ: ‘ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳು, ಚಿನ್ನದ ಸರ ಧರಿಸಿರುತ್ತಿದ್ದ ಮಹಿಳೆಯರನ್ನು ಗುರುತಿಸುತ್ತಿದ್ದರು. ನಿಲ್ದಾಣದಲ್ಲಿ ರೈಲು ನಿಧಾನವಾಗುತ್ತಿದ್ದಂತೆ, ಮಹಿಳೆಯ ಸರವನ್ನು ಕಿತ್ತುಕೊಂಡು ರೈಲಿನಿಂದ ಜಿಗಿದು ಆರೋಪಿಗಳು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕದ್ದ ಚಿನ್ನದ ಸರವನ್ನು ಮಾರಾಟ ಮಾಡಿ, ಬಂದ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು. ಜ. 18ರಂದು ಕುಪ್ಪಂ ನಿವಾಸಿಯಾದ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಆರೋಪಿಗಳು ಕಿತ್ತೊಯ್ದಿದ್ದರು. ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಆರೋಪಿಗಳಿಂದ ₹ 4.34 ಲಕ್ಷ ಮೌಲ್ಯದ 79 ಗ್ರಾಂ ತೂಕದ ಚಿನ್ನದ ಸರಗಳನ್ನು ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದಲ್ಲೂ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದು ತಿಳಿಸಿದರು.

ಕಮಲನಾಥನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.