ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಮಳೆ ಅಬ್ಬರಕ್ಕೆ ಎಂದಿನಂತೆ ರಸ್ತೆಗಳು ಜಲಾವೃತವಾಗಿದ್ದವು. ವಾರಾಂತ್ಯವಾದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ಒಂದಷ್ಟು ನೀರು ನಿಂತಿತ್ತು. ಶನಿವಾರ ಬೆಳಿಗ್ಗೆ 9 ಗಂಟೆಯ ನಂತರ ಸುರಿದ ಮಳೆಗೆ ನಗರದ ಬಹುತೇಕ ರಸ್ತೆಗಳು ನೀರಿನಿಂದ ತುಂಬಿಹೋದವು. ಹೊರವಲಯದಲ್ಲಿ ಸಂಕಷ್ಟ ಅಧಿಕವಾಗಿತ್ತು.
ಶನಿವಾರ ಬೆಳಿಗ್ಗೆ 9ರವರೆಗೆ ಕೆಂಗೇರಿಯಲ್ಲಿ ಅತಿಹೆಚ್ಚು (6.8 ಸೆಂ.ಮೀ) ಮಳೆಯಾಗಿತ್ತು. ರಾಜರಾಜೇಶ್ವರಿನಗರ, ಜ್ಞಾನಭಾರತಿ, ನಾಯಂಡಹಳ್ಳಿ ಸುತ್ತಮುತ್ತ ತಲಾ 5 ಸೆಂ.ಮೀ, ಗೊಟ್ಟಿಗೆರೆ, ಅಂಜನಾಪುರ, ಬೇಗೂರು, ನಾಗರಬಾವಿ, ಮಾರುತಿ ಮಮದಿರ ಸುತ್ತಮುತ್ತಲ ಪ್ರದೇಶಗಳಲ್ಲಿ ತಲಾ 3 ಸೆಂ.ಮೀಟರ್ ಮಳೆಯಾಯಿತು.
ಶನಿವಾರ ಬೆಳಿಗ್ಗೆ 10 ಗಂಟೆಯ ನಂತರ ರಾತ್ರಿಯವರೆಗೆ ಆಗಾಗ್ಗೆ ಮಳೆ ಸುರಿಯಿತು. ವಾರದ ಆರಂಭದ ಮೂರು ದಿನ ಮಳೆ ಅಬ್ಬರಕ್ಕೆ ತತ್ತರಿಸಿದ ನಾಗರಿಕರು, ಶನಿವಾರವೂ ಸಂಕಷ್ಟ ಅನುಭವಿಸಿದರು. ರಸ್ತೆಗಳಲ್ಲಿ ನಿಂತ ನೀರಿನಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ಸವಾಲಾಗಿತ್ತು. ವಾಹನ ಸಂಚಾರ ನಿಧಾನಗತಿಯಲ್ಲಿದ್ದುದ್ದರಿಂದ, ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಜಯಮಹಲ್ ಅಂಡರ್‌ಪಾಸ್ ಉದಯ ಟಿವಿ ಜಂಕ್ಷನ್, ಡೇರಿ ವೃತ್ತದಿಂದ ಸಾಗರ್ ಜಂಕ್ಷನ್‌ವರೆಗೆ, ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತ, ವೀರಣ್ಣಪಾಳ್ಯ - ಕೋರ್ಟ್‌ಯಾರ್ಡ್ ಮ್ಯಾರಿಯಟ್ ಹೋಟೆಲ್, ಸಿಟಿಒ ಜಂಕ್ಷನ್, ಹೆಬ್ಬಾಳ, ವಿಂಡ್ಸರ್ ಮ್ಯಾನರ್ ಕೆಳಸೇತುವೆ, ದೇವರಬೀಸನಹಳ್ಳಿಯಿಂದ ಬೆಳ್ಳಂದೂರು ಕೋಡಿ, ಹೆಣ್ಣೂರು ಬಾಗಲೂರು ಮುಖ್ಯರಸ್ತೆಯ ಎರಡು ಕಡೆ, ಸಿಬಿಐ ಮೇಲ್ಸೇತುವೆಯಿಂದ ವಿಮಾನ ನಿಲ್ದಾಣದ ಕಡೆಗೆ, ರಾಮಮೂರ್ತಿ ನಗರದಿಂದ ಹೆಬ್ಬಾಳ ಕಡೆಗೆ, ಕೊಡಿಗೇಹಳ್ಳಿ (ಬಳ್ಳಾರಿ ಮುಖ್ಯ ರಸ್ತೆ) ಬಳಿ, ಬನಶಂಕರಿ ಸಮೀಪದ ಗುರಪ್ಪನಪಾಳ್ಯ ಜಂಕ್ಷನ್ ಬಳಿ ನೀರು ವಾಹನ ಸಂಚಾರ ಹಲವು ಸಂದರ್ಭದಲ್ಲಿ ಸ್ಥಗಿತಗೊಂಡಿತ್ತು.
ಆರ್.ಟಿ. ನಗರದ ಪ್ರೆಸಿಡೆಂಟ್ ಸ್ಕೂಲ್ ಹಿಂಬದಿಯ ರಸ್ತೆಯಲ್ಲಿ ಮರ ಬಿದ್ದುದ್ದರಿಂದ ಸಂಚಾರ ಪೊಲೀಸರು ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದರು.
ಶನಿವಾರ ಬೆಳಿಗ್ಗೆ 8.30ರವರೆಗೆ 153 ವಾರ್ಡ್‌ಗಳಲ್ಲಿ ಮಳೆಯಾಗಿತ್ತು. ನಂತರ 103 ವಾರ್ಡ್‌ಗಳಲ್ಲಿ ಮಳೆಯಾಗಿದೆ.
ಸೋಂಪುರದಲ್ಲಿ ಧಾರಾಕಾರ ಮಳೆ
ದಾಬಸಪೇಟೆ: ಶನಿವಾರ ಬೆಳಗ್ಗಿನ ಜಾವ ಹಾಗೂ ಮಧ್ಯಾಹ್ನ ಸೋಂಪುರ ಹೋಬಳಿಯಲ್ಲಿ ಧಾರಾಕಾರ ಮಳೆಯಾಗಿದೆ. ಶುಕ್ರವಾರ ಬಿಡುವಿವುಕೊಟ್ಟ ಮಳೆ ಶನಿವಾರ ಬೆಳಗಿನಿಂದ ಜೋರಾಗಿ ಸುರಿಯಿತು. ಇದರಿಂದ ಹೊಲಗಳಲ್ಲಿ ನೀರು ನಿಂತುಕೊಂಡಿದೆ. ನಿರಂತರ ಮಳೆಯ ಪರಿಣಾಮ ತೋಟಗಾರಿಕೆ ಬೆಳೆಗಳಾದ ಹೂ ತರಕಾರಿ ಟೊಮೆಟೊ ಬೆಳೆಗಳಿಗೂ ತೊಂದರೆಯಾಗಿದೆ. ಹೂವು ಹಣ್ಣು ತರಕಾರಿ ಕೊಳೆಯುವ ಸ್ಥಿತಿ ನಿರ್ಮಾಣ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.