ADVERTISEMENT

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಮಳೆ ಅಡ್ಡಿ

ಇನ್ನೆರಡು ದಿನದಲ್ಲಿ ಕಸ ಸಾಗಣೆ ಸಹಜ ಸ್ಥಿತಿಗೆ: ಬಿಎಸ್‌ಡಬ್ಲ್ಯುಎಂಎಲ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:22 IST
Last Updated 24 ಅಕ್ಟೋಬರ್ 2024, 15:22 IST
ಬೆಲ್ಲಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳಿಂದ ತ್ಯಾಜ್ಯ ವಿಲೇವಾರಿ ಗುರುವಾರದಿಂದ ಆರಂಭವಾಗಿದೆ
ಬೆಲ್ಲಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳಿಂದ ತ್ಯಾಜ್ಯ ವಿಲೇವಾರಿ ಗುರುವಾರದಿಂದ ಆರಂಭವಾಗಿದೆ   

ಬೆಂಗಳೂರು: ನಗರದ ಹೊರವಲಯದ ಮುಖ್ಯ ರಸ್ತೆಗಳು ಮಳೆ ನೀರಿನಿಂದ ಆವೃತವಾಗಿರುವುದರಿಂದ ಕಸ ವಿಲೇವಾರಿಗೆ ಸಮಸ್ಯೆ ಉಂಟಾಗಿದೆ.

ಆಯುಧಪೂಜೆ ಹಬ್ಬದ ನಂತರ ನಗರದಲ್ಲಿ ಆಗಾಗ್ಗೆ ಭಾರಿ ಮಳೆಯಾಗುತ್ತಿದ್ದು, ಹೊರವಲಯದಲ್ಲಿ ರಸ್ತೆಗಳು ಜಲಾವೃತವಾಗುತ್ತಿವೆ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಗಳಿಗೆ ಕಸ ಸಾಗಿಸಲು  ಸಾಧ್ಯವಾಗುತ್ತಿಲ್ಲ. ಹೀಗಾಗಿ ನಗರದ ಕೆಲವು ಪ್ರದೇಶಗಳಲ್ಲಿ ತ್ಯಾಜ್ಯ ಉಳಿದುಕೊಂಡಿದೆ.

‘ಮಳೆಯಿಂದಾಗಿ ಸಂಸ್ಕರಣಾ ಘಟಕಗಳಲ್ಲಿ ಕಾಂಪ್ಯಾಕ್ಟರ್‌ಗಳಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಾಧ್ಯವಾಗಿರಲಿಲ್ಲ. ಗುರುವಾರ ಮಳೆ ಇಲ್ಲದ್ದರಿಂದ ವಿಲೇವಾರಿ ಪ್ರಾರಂಭವಾಗಿದೆ’ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್‌ನ (ಬಿಎಸ್‌ಡಬ್ಲ್ಯುಎಂಎಲ್‌) ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ತಿಳಿಸಿದರು.

ADVERTISEMENT

‘230 ಕಾಂಪ್ಯಾಕ್ಟರ್‌ಗಳಲಿದ್ದ ತ್ಯಾಜ್ಯವನ್ನು ಈವರೆಗೆ ಘಟಕಗಳಲ್ಲಿ ವಿಲೇವಾರಿ ಮಾಡಲಾಗಿದೆ. ಇನ್ನೂ 150ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳಲ್ಲಿ ತ್ಯಾಜ್ಯ ಉಳಿದಿವೆ ಎಂದು ಭೂಭರ್ತಿ ಪ್ರದೇಶದಲ್ಲಿರುವ ಮಾರ್ಷಲ್‌ಗಳು ಮಾಹಿತಿ ನೀಡಿದ್ದಾರೆ. ಮತ್ತೆ ಮಳೆಯ ಸಮಸ್ಯೆ ಆಗದಿದ್ದರೆ ಒಂದೆರಡು ದಿನಗಳಲ್ಲಿ ಎಲ್ಲ ವಿಲೇವಾರಿಯಾಗಿ, ಸಹಜ ಸ್ಥಿತಿಗೆ ಮರಳುತ್ತದೆ’ ಎಂದು ಮಾಹಿತಿ ನೀಡಿದರು.

‘ಮಳೆಯಿಂದ ಕಾಂಪ್ಯಾಕ್ಟರ್‌ಗಳು ಘಟಕಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನೀರು ತುಂಬಿದ ರಸ್ತೆಯಲ್ಲಿ ದೊಡ್ಡ ವಾಹನಗಳು ಸಂಚರಿಸುವುದಕ್ಕೆ ಅಡ್ಡಿಯಾಗಿತ್ತು. ಅಲ್ಲದೆ, ಘಟಕಗಳ ಸಮೀಪ ಮಣ್ಣು ತುಂಬಿದ ರಸ್ತೆಗಳಿದ್ದು, ಅಲ್ಲಿ ಕಾಂಪ್ಯಾಕ್ಟರ್‌ಗಳು ಚಲಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿತ್ತು. ಇದೀಗ ಮಳೆ ಬಿಡುವು ನೀಡಿದ್ದು, ವಾಹನಗಳು ಸಂಚರಿಸುತ್ತಿವೆ’ ಎಂದು ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ತಿಳಿಸಿದರು.

‘ನಗರದಲ್ಲಿ ಕಸ ವಿಲೇವಾರಿಗೆ ಒಂದು ದಿನ ಸಮಸ್ಯೆಯಾದರೆ ಅದು ಸಹಜ ಸ್ಥಿತಿಗೆ ಬರಲು ಮೂರ್ನಾಲ್ಕು ದಿನ ಬೇಕಾಗುತ್ತದೆ. ಇನ್ನೆರಡು ದಿನಗಳಲ್ಲಿ ಸಾಗಣೆ– ವಿಲೇವಾರಿ ಸಹಜ ಸ್ಥಿತಿಗೆ ಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.