ADVERTISEMENT

ಪೀಣ್ಯ ದಾಸರಹಳ್ಳಿ | ಅಬ್ಬಿಗೆರೆ ಕೆರೆ ಕೋಡಿ: ಹಲವು ಬಡಾವಣೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:54 IST
Last Updated 22 ಅಕ್ಟೋಬರ್ 2024, 15:54 IST
ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಜಲಾವೃತಗೊಂಡಿರುವುದು
ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳು ಜಲಾವೃತಗೊಂಡಿರುವುದು   

ಪೀಣ್ಯ ದಾಸರಹಳ್ಳಿ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಎಂಟಕ್ಕೂ ಹೆಚ್ಚು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮಾರುತಿ ನಗರ, ದ್ವಾರಕನಗರ, ಕೆರೆಗುಡ್ಡದ ಹಳ್ಳಿಯ ಎಸ್‌ಎಸ್‌ವಿ ಗಾರ್ಡನ್ ಮತ್ತು ಶೆಟ್ಟಿಹಳ್ಳಿ ವಾರ್ಡ್‌‌ನ ಮೇದರಹಳ್ಳಿಯ ಕಾವೇರಿ ಬಡಾವಣೆ, ಶ್ರೀದೇವಿ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು.

ಮುಂಜಾನೆ 2.30ರ ಸುಮಾರಿಗೆ ಅಬ್ಬಿಗೆರೆಯ ಕೆರೆ ಕೋಡಿಬಿದ್ದು, ಸಮೀಪದಲ್ಲಿರುವ ಸಪ್ತಗಿರಿ ಬಡಾವಣೆ ಮತ್ತು ನಿಸರ್ಗ ಬಡಾವಣೆಗಳಲ್ಲಿನ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ನೀರನ್ನು ರಾಜಕಾಲುವೆಗೆ ಹರಿಸಲು ವ್ಯವಸ್ಥೆ ಮಾಡಿದರು.

ADVERTISEMENT

‘ಕೆರೆ ಗುಡ್ಡದಹಳ್ಳಿ ಸಮೀಪದಲ್ಲಿ ಬಿಡಿಎ ಅಭಿವೃದ್ಧಿಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಯ ರಾಜಕಾಲುವೆ, ಎಸ್‌ಎಸ್‌ವಿ ಬಡಾವಣೆ ಸಮೀಪದವರೆಗೂ ವಿಸ್ತರಿಸಿದೆ. ಅಲ್ಲಿಂದ ಹರಿದು ಬರುವ ನೀರು ಮುಂದಕ್ಕೆ ಸಾಗದೇ ಬಡಾವಣೆಗೆ ಹರಿದು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡಿವೆ’ ಎಂದು  ಸ್ಥಳೀಯ ನಿವಾಸಿ ಜನಾರ್ದನ್‌ ವಿವರಿಸಿದರು.

‘ಪುರಸಭೆ ಅಧಿಕಾರಿಗಳಿಗೆ ಕರೆ ಮಾಡಿ ಹಿಟಾಚಿ, ಜೆಸಿಬಿ ತರಿಸಿ ನೀರನ್ನು ತೆರವುಗೊಳಿಸಲಾಯಿತು. ಈಗಲೂ ಸುತ್ತಮುತ್ತ ಪ್ರದೇಶದಲ್ಲಿ ನೀರು ನಿಂತಿದೆ. ವಾಹನ ಸಂಚಾರಕ್ಕೆ ತೊಂದರೆಯಾಗಿದೆ' ಎಂದು ಅವರು ತಿಳಿಸಿದರು. ಶಾಸಕ ಎಸ್. ಮುನಿರಾಜು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಎಚ್.ಎ.ಕುಮಾರ್, ‘ಅಬ್ಬಿಗೆರೆ ಮತ್ತು ಗಾಣಿಗರಹಳ್ಳಿ ಕೆರೆ ಕೋಡಿ ಬಿದಿದೆ. ರಾಜಕಾಲುವೆ ಒತ್ತುವರಿಯಾಗಿರುವುದರಿಂದ ಬಡಾವಣೆಗಳಿಗೆ ನೀರು ನುಗ್ಗಿದೆ. ನೀರು ಹೊರಗೆ ಕಳಿಸಲಾಗುತ್ತಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.