ADVERTISEMENT

ಹವಾಮಾನ ಚತುರ ‘ಕೃಷಿಮೇಳ’ಕ್ಕೆ ಮಳೆ ಸಿಂಚನ; ಹರಿದು ಬಂದ ರೈತ ಸಮುದಾಯ

ನೂರಾರು ಮಳಿಗೆಗಳಲ್ಲಿ ಹಲವು ಪ್ರದರ್ಶನಗಳು

ಬಾಲಕೃಷ್ಣ ಪಿ.ಎಚ್‌
Published 14 ನವೆಂಬರ್ 2024, 22:30 IST
Last Updated 14 ನವೆಂಬರ್ 2024, 22:30 IST
ನಗರದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ದವಸಧಾನ್ಯಗಳನ್ನು ಬಳಸಿ ರಚಿಸಲಾದ ರಂಗೋಲಿ
ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ನಗರದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ದವಸಧಾನ್ಯಗಳನ್ನು ಬಳಸಿ ರಚಿಸಲಾದ ರಂಗೋಲಿ ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.   

ಬೆಂಗಳೂರು: ‘ಹವಾಮಾನ ಚತುರ ಡಿಜಿಟಲ್‌ ಕೃಷಿ’ ಎಂಬ ಘೋಷವಾಕ್ಯದಡಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಗುರುವಾರ ಆರಂಭಗೊಂಡ ಕೃಷಿಮೇಳದ ಸಂದರ್ಭದಲ್ಲಿ ಸುರಿದ ಮಳೆ, ಸಂಘಟಕರ ಚತುರತೆಯನ್ನು ಪರೀಕ್ಷಿಸಿತು. ಭಾರಿ ಸಂಖ್ಯೆಯಲ್ಲಿ ಬಂದಿದ್ದ ರೈತರನ್ನು, ಆಸಕ್ತರನ್ನು ಪಕ್ಕದ ಚಾವಣಿಗಳ ಅಡಿಗೆ ಆಗಾಗ ಓಡುವಂತೆ ಮಾಡಿತು.

ಬೆಳಿಗ್ಗಿನಿಂದಲೇ ತಂಡೋಪತಂಡವಾಗಿ ಬಂದವರು ವೇದಿಕೆ ಕಡೆಗಿಂತ ಪ್ರದರ್ಶನಗಳ ಕಡೆಗೇ ಹೆಚ್ಚು ಧಾವಿಸಿದರು. ವಿಭಿನ್ನ ತಳಿಯ ಕೋಳಿಗಳು, ಆಲಂಕಾರಿಕ ಮೀನುಗಳು, ಗಾಣದ ಎತ್ತು, ಅಧಿಕ ಹಾಲು ಕೊಡುವ ಎಮ್ಮೆ, ಹಳ್ಳಿಕಾರ್‌ ಎತ್ತು, ಉದ್ದ ಕಿವಿಯ ಆಡುಗಳನ್ನು ಮುಗಿಬಿದ್ದು ನೋಡಿ ಆನಂದಿಸಿದರು.

ಮೇಳದಲ್ಲಿ 700ಕ್ಕೂ ಅಧಿಕ ಮಳೆಗಳು ಇದ್ದವು. ಸಿರಿಧಾನ್ಯ ಆಹಾರಕ್ಕೆ ಸಂಬಂಧಿಸಿದ ವಿಶೇಷ ಮಳಿಗೆಗಳು, ದಾವಣಗೆರೆ ಬೆಣ್ಣೆದೋಸೆ, ಮಂಡಕ್ಕಿ ಮಿರ್ಚಿ, ತುಮಕೂರು ತಟ್ಟೆ ಇಡ್ಲಿ, ಮಂಗಳೂರು ಮೀನೂಟ, ಉತ್ತರ ಕರ್ನಾಟಕದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಹುಬ್ಬಳ್ಳಿಯ ಗಿರ್ಮಿಟ್‌ ಮಿರ್ಚಿ, ಮೇಲುಕೋಟೆ ಪುಳಿಯೋಗರೆ, ಬೆಂಗಳೂರು ಬಾಡೂಟ, ದಮ್‌ ಬಿರಿಯಾನಿ, ಗೌಡ್ರಮನೆ ಹಳ್ಳಿಯೂಟ... ಹೀಗೆ ನಾನಾ ತರಹದ ಆಹಾರ ಮಳಿಗೆಗಳು ಬಾಯಲ್ಲಿ ನೀರೂರಿಸಿದವು. ರೈತರು ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ, ನಾಲ್ಕು ಹೊಸ ತಳಿಗಳಾದ ಮುಸುಕಿನಜೋಳ ಸಂಕರಣ (ಎಂಎಎಚ್‌ 15–85), ಅಲಸಂದೆ (ಕೆಬಿಸಿ–12), ಸೂರ್ಯಕಾಂತಿ ಸಂಕರಣ (ಕೆಬಿಎಸ್‌ಎಚ್–90), ಬಾಜ್ರ ನೇಪಿಯರ್‌ ಸಂಕರಣ (ಪಿಬಿಎನ್‌–342) ಎಂಬ ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಯಿತು.

ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯದ ಬೆಳೆ ಪದ್ಧತಿಗಳು, ರೇಷ್ಮೆಕೃಷಿ, ತೋಟಗಾರಿಕಾ ಬೆಳೆ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು, ಕೀಟ ನಿರ್ವಹಣೆ, ಮಣ್ಣು ರಹಿತ ಕೃಷಿ, ನೂತನ ಮಾಹಿತಿ ತಂತ್ರಜ್ಞಾನ, ಮಳೆ ನೀರು ಸಂಗ್ರಹ, ಬಿತ್ತನೆ ಬೀಜಗಳ ಪರೀಕ್ಷೆ, ಪಶುಸಂಗೋಪನೆ, ಹೈನುಗಾರಿಕೆ ಸಹಿತ ಅನೇಕ ವಿಚಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯನ್ನು ರೈತರು ಪಡೆದರು.

ಹವಾಮಾನಕ್ಕೆ ಹೊಂದಿಕೊಂಡು ಹೋಗುವ ಕೃಷಿಗೆ ಅನುಕೂಲವಾಗುವ ತಾಂತ್ರಿಕತೆ ಪರಿಚಯಿಸಲಾಯಿತು. ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಸೆನ್ಸಾರ್‌ ಆಧಾರಿತ ತಂತ್ರಜ್ಞಾನ ಪ್ರದರ್ಶಿಸಲಾಗಿದೆ. ಒಂದು ಪ್ರದೇಶಕ್ಕೆ ಔಷಧ ಸಿಂಪಡಣೆಯಾಗಿದ್ದರೆ ಮತ್ತೊಮ್ಮೆ ಆ ಪ್ರದೇಶಕ್ಕೆ ಹೋದರೆ ಔಷಧ ಸಿಂಪಡಣೆಯಾಗದಂತೆ ತಡೆಯುವ ಯಂತ್ರ ಗಮನ ಸೆಳೆಯಿತು. ಮಲ್ಟಿಸ್ಪೆಕ್ಟ್ರಲ್‌ ಡ್ರೋನ್, ಕೃಷಿ ಡ್ರೋನ್, ರೋಬೊಟ್‌ ಕೃಷಿ ಯಂತ್ರ, ಹಣ್ಣಿನ ವರ್ಗೀಕರಣಗೊಳಿಸುವ ಯಂತ್ರ, ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ, ಆಳ ನಿಯಂತ್ರಕ ರೋಟವೇಟರ್‌, ಸ್ವಯಂಚಾಲಿತ ಬೂಮ್‌ ಸ್ಪ್ರೇಯರ್ ಸಹಿತ ಅನೇಕ ಯಂತ್ರಗಳನ್ನು ರೈತರು ವೀಕ್ಷಿಸಿದರು.

ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾದ ಸೂರ್ಯಕಾಂತಿಯ ಹೊಸ ತಳಿಯನ್ನು ಸಚಿವ ಎನ್. ಚಲುವರಾಯಸ್ವಾಮಿ ಶಾಸಕ ಎಸ್‌. ಅರ್‌. ವಿಶ್ವನಾಥ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಶಾಸಕ ಶರತ್ ಬಚ್ಚೇಗೌಡ  ವೀಕ್ಷಿಸಿದರು.

ಸಮಗ್ರ ಬೇಸಾಯ ಅಳವಡಿಸಿಕೊಳ್ಳಿ: ಚಲುವರಾಯಸ್ವಾಮಿ

ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಮಾಡಿದರೆ ರೈತರಿಗೆ ಬೇಸಾಯವು ಸುಸ್ಥಿರ ಮತ್ತು ಲಾಭದಾಯಕವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿ ‘ಕೃಷಿ ವಿಶ್ವವಿದ್ಯಾಲಯಗಳು ನಡೆಸುವ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು. ಆಗ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯ’ ಎಂದರು.

ರಾಜ್ಯದಲ್ಲಿ 78 ಲಕ್ಷಕ್ಕೂ ಹೆಚ್ಚು ರೈತರು ಹಾಗೂ 1.25 ಕೋಟಿಗೂ ಹೆಚ್ಚು ಕಾರ್ಮಿಕರು ಕೃಷಿಯಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ಕೃಷಿಗೆ ಗರಿಷ್ಠ ಆದ್ಯತೆ ನೀಡಿದೆ. ಕಳೆದ ಸಾಲಿನಲ್ಲಿ ₹ 1000 ಕೋಟಿ ಸಬ್ಸಿಡಿಯೊಂದಿಗೆ ಯಂತ್ರೋಪಕರಣ ನೀರಾವರಿ ಸಲಕರಣೆಗಳನ್ನು ವಿತರಿಸಿದೆ. ₹ 2100 ಕೋಟಿ ರೂಪಾಯಿ ಬೆಳೆ ವಿಮೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಭರಿಸಲಾಗಿದೆ ಎಂದು ಯೋಜನೆಗಳನ್ನು ವಿವರಿಸಿದರು.

ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ವಯಂಚಾಲಿತ ಯಂತ್ರಗಳನ್ನು ಒಳಗೊಂಡ ಔಷಧ ಸಿಂಪಡಣಾ ಟ್ರ್ಯಾಕ್ಟರ್‌ಗೆ ಚಾಲನೆ ನೀಡಿದ ಕೃಷಿ ಸಚಿವರು ಅದನ್ನು ಚಲಾಯಿಸಿದರು. ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಶರತ್ ಬಚ್ಚೇಗೌಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.