ಬೆಂಗಳೂರು: ಬೊಮ್ಮನಹಳ್ಳಿ ವಲಯದಲ್ಲಿ ಮಳೆಗಾಲದಲ್ಲಿ ಸಮಸ್ಯೆ ಎದುರಾಗುವ ಪ್ರಮುಖ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಥಳೀಯರ ಅಹವಾಲು ಆಲಿಸಿದರು.
‘ಇತ್ತೀಚಿಗೆ ಮಳೆ ವೇಳೆ ಸಾಕಷ್ಟು ಮರಗಳು ಧರೆಗುರುಳಿವೆ. ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಎದುರಾಗುತ್ತಿದ್ದು, ಇದನ್ನು ತಡೆಯಲು ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕು’ ಎಂದು ಎಚ್‌ಎಸ್‌ಆರ್ ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು.
ಬಡಾವಣೆಯ 6ನೇ ಸೆಕ್ಟರ್ ನಲ್ಲಿ 3ನೇಮುಖ್ಯ ರಸ್ತೆ ಮತ್ತು 16ನೇ ಅಡ್ಡ ರಸ್ತೆ ಬಳಿಯ ತಗ್ಗು ಪ್ರದೇಶಗಳು ಮಳೆಗಾಲದಲ್ಲಿ ಜಲಾವೃತವಾಗುತ್ತದೆ. ಇದನ್ನು ತಡೆಯಲು ರಾಜಕಾಲುವೆಯಲ್ಲಿ 286 ಮೀ. ಉದ್ದದ ಪೂರಕ ಕಾಲುವೆ ನಿರ್ಮಿಸಲಾಗುತ್ತಿದೆ ಅಧಿಕಾರಿಗಳು ಮಾಹಿತಿ ನೀಡಿದರು.
ಬಡಾವಣೆಯ 9ನೇ ಮುಖ್ಯ ರಸ್ತೆಯ ಬಳಿಯ ಸೇತುವೆಯನ್ನು 3.5 ಮೀಟರ್‌ನಷ್ಟು ಎತ್ತರಿಸಲಾಗಿದ್ದು, ಇಲ್ಲಿನ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ಪ್ರದೇಶ ಜಲಾವೃತವಾಗುವುದನ್ನು ತಡೆಯಲು ರಾಜಕಾಲುವೆಯಲ್ಲಿ 600 ಮೀಟರ್ ಉದ್ದದ ಪರ್ಯಾಯ ಕಾಲುವೆ ನಿರ್ಮಿಸಲಾಗುತ್ತಿದೆ. ಜೋರು ಮಳೆಯಾದಾಗ ತುಂಬಿಕೊಳ್ಳುವ ಹಿನ್ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಬಾಕಿ ಕಾಮಗಾರಿಗಳನ್ನು ಮಳೆಗಾಲಕ್ಕೆ ಮುನ್ನವೇ ಪೂರ್ಣಗೊಳಿಸಲು ತುಷಾರ್ ಸೂಚನೆ ನೀಡಿದರು.
ಅನುಗ್ರಹ ಬಡಾವಣೆಯ ಮೊದಲ ಹಂತದ ತಗ್ಗು ಪ್ರದೇಶಗಳು ಮಳೆ ಬಂದಾಗ ಜಲಾವೃತವಾಗುತ್ತಿದ್ದು, ಇಲ್ಲಿ ಮಳೆ ನೀರನ್ನು ಮಡಿವಾಳ ಕೆರೆಗೆ ಸಂಪರ್ಕವಿರುವ ಕಾಲುವೆಗೆ ಪಂಪ್ ಮಾಡಲು 45 ಅಶ್ವಶಕ್ತಿ ಸಾಮರ್ಥ್ಯದ ಪಂಪ್‌ಸೆಟ್ ಅನ್ನು ಸ್ಥಳದಲ್ಲೇ ಇಡಲಾಗಿದೆ.ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತುಷಾರ್ ಸೂಚನೆ ನೀಡಿದರು.
ಕರ್ತಕ್ಕೆ ಗೈರಾಗುವ ಪೌರಕಾರ್ಮಿಕರ ವರ್ಗ: ಎಚ್.ಎಸ್.ಆರ್ ಬಡಾವಣೆಯ ಮಸ್ಟರಿಂಗ್ ಕೇಂದ್ರಕ್ಕೆ ತುಷಾರ್ ಅವರು ಮುಂಜಾನೆ ಭೇಟಿ ನೀಡಿದಾಗ ಅಲ್ಲಿನ 64 ಪೌರಕಾರ್ಮಿಕರಲ್ಲಿ 54 ಮಂದಿ ಮಾತ್ರ ಹಾಜರಿದ್ದರು. ದೀರ್ಘಕಾಲ ಕರ್ತವ್ಯಕ್ಕೆ ಗೈರಾಗುವ ಪೌರ ಕಾರ್ಮಿಕರನ್ನು ಬೇರೆ ಕೇಂದ್ರಕ್ಕೆ ವರ್ಗಾಯಿಸುವಂತೆ ಅವರು ಸೂಚಿಸಿದರು.
ಪಾರಕಾರ್ಮಿಕರೆಲ್ಲರೂ ಕಡ್ಡಾಯವಾಗಿ ಸುರಕ್ಷಾ ಸಾಮಗ್ರಿಗಳನ್ನು ಧರಿಸಬೇಕು. ಇಲ್ಲದಿದ್ದರೆ ಮೇಲ್ವಿಚಾರಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಗೊಟ್ಟಿಗೆರೆ ವಾರ್ಡ್‌ನ ಒಣ ಕಸ ಸಂಗ್ರಹ ಘಟಕ, ಸುವಿಧಾ ಕ್ಯಾಬಿನ್, ಕಸ ವರ್ಗಾವಣೆ ಕೇಂದ್ರಗಳನ್ನು ಮುಖ್ಯ ಆಯುಕ್ತರು ವೀಕ್ಷಿಸಿದರು. ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಮೊದಲ ಹಂತದಲ್ಲಿ 227 ಕಡೆ ಸುವಿಧಾ ಕ್ಯಾಬ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಸೌಲಬ್ಯ ಇಲ್ಲದ ಕಡೆ ಪಾಲಿಕೆ ಆಸ್ಪತ್ರೆ, ಶಾಲೆ, ಕಚೇರಿಗಳ ಶೌಚಾಲಯ ಬಳಸಲು ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಎಚ್.ಎಸ್.ಆರ್ ಬಡಾವಣೆಯಲ್ಲಿರುವ ಕಸ ನಿರ್ವಹಣೆ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯ ಆಯುಕ್ತರು ಕಸದಿಂದ ಗೊಬ್ಬರ ತಯಾರಿಸುವ ಬಗೆ, ಕಸ ವಿಂಗಡಣೆ ಮಾಡುವ ವಿಧಾನವನ್ನು ವೀಕ್ಷಿಸಿದರು.
‘ಈ ಬಡಾವಣೆಯಲ್ಲಿ ಶೇ. 95 ರಷ್ಟು ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಣೆ ಮಾಡಲಾಗುತ್ತಿದೆ. ಮೂಲದಲ್ಲಿಯೇ ಕಸ ವಿಂಗಡಣೆ ಮಾಡಲು ಜನರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ನಾಗರಿಕರನ್ನು ಪ್ರೇರೇಪಿಸಬೇಕು’ ಎಂದು ಅಧಿಕಾರಿಗಳಿಗೆ ತುಷಾರ್ ಸಲಹೆ ನೀಡಿದರು.
ಎಚ್‌ಎಸ್‌ಆರ್ ಬಡವಣೆಯ ನೇಕಾರರ ಕಾಲೋನಿಯ ರಾಜಕಾಲುವೆ ಪರಿಶೀಲನೆ ನಡೆಸಿ ಮುಖ್ಯ ಆಯುಕ್ತರು, ‘ಕಚ್ಚಾ ಕಾಲುವೆಯನ್ನು ದುರಸ್ತಿಪಡಿಸಿ, ತಡೆಗೋಡೆ ನಿರ್ಮಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರಾದ ಸತೀಶ್ ರೆಡ್ಡಿ, ಕೃಷ್ಣಪ್ಪ, ವಲಯ ಆಯುಕ್ತ ಹರೀಶ್ ಕುಮಾರ್, ಜಂಟಿ ಆಯುಕ್ತ ಕೃಷ್ಣಮೂರ್ತಿ, ಮುಖ್ಯ ಎಂಜಿನಿಯರ್‌ಗಳಾದ ಶಶಿಕುಮಾರ್, ಸುಗುಣಾ, ವಿಜಯ್ ಕುಮಾರ್ ಹರಿದಾಸ್, ಸೂಪರಿಂಟೆಂಡಿಂಗ್ ಎಂಜಿನಿಯರ್ ಬಸವರಾಜ್ ಕಬಾಡೆ ಮತ್ತಿತರ ಅಧಿಕಾರಿಗಳು ಜೊತೆಗಿದ್ದರು.
‘ಕ್ರೀಡಾಂಗಣ: ಗುತ್ತಿಗೆದಾರರಿಂದಲೇ ದುರಸ್ತಿಪಡಿಸಿ’
‘ಇತ್ತೀಚಿನ ಗಾಳಿ ಮಳೆಗೆ ಟೆನ್ಸಿಲ್ ಚಾವಣಿಯು ಬಿದ್ದುಹೋಗಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ಗುತ್ತಿಗೆದಾರರಿಂದಲೇ ದುರಸ್ತಿಪಡಿಸಬೇಕು’ ಎಂದು ತುಷಾರ್ ಗಿರಿನಾಥ್ ಸೂಚನೆ ನೀಡಿದರು.
ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು, ‘ದುರಸ್ತಿ ಕಾರ್ಯವನ್ನು ಒಂದು ತಿಂಗಳ ಒಳಗೆ ಮುಗಿಸಬೇಕು’ ಎಂದು ತಾಕೀತು ಮಾಡಿದರು.
ಸುಮಾರು 7 ಎಕರೆ ಪ್ರದೇಶದಲ್ಲಿ ₹ 40 ಕೋಟಿ ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಕಾಮಗಾರಿ ಕೈಗತ್ತಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ಕಬ್ಬಡ್ಡಿ, ಬ್ಯಾಸ್ಕೆಟ್ ಬಾಲ್, ವಾಲಿಬಾಲ್ ಅಂಗಣಗಳನ್ನು ಮತ್ತು ಗ್ಯಾಲರಿಗಳನ್ನು ₹ 3.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳಿಗೆ ಟೆನ್ಸಲ್ ಚಾವಣಿ ರೂಫ್, 10 ಕಡೆ ಹೊನಲು ಬೆಳಕಿನ (ಫ್ಲಡ್ ಲೈಟ್ಸ್) ವ್ಯವಸ್ಥೆ ಕಲ್ಪಿಸುವ ಕಾರ್ಯ ಪೂರ್ಣಗೊಂಡಿದೆ. ಬಾಕಿಯಿರುವ ಕಾಮಗಾರಿಯನ್ನು ಗಡುವಿನೊಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.
ಸುಬ್ಬರಾಯನ ಕೆರೆ ವೀಕ್ಷಣೆ
ಗೊಟ್ಟಿಗೆರೆ ಮುಖ್ಯ ರಸ್ತೆಯ ಬಳಿ 5 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಸುಬ್ಬರಾಯನ ಕೆರೆಯನ್ನು ₹ 2.6 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಅಭಿವೃದ್ಧಿ ಪಡಿಸುತ್ತಿದೆ. ಕೆರೆಯ ಹೂಳೆತ್ತುವಿಕೆ, ಬೇಲಿ ನಿರ್ಮಾಣ, ದಂಡೆ ಅಭಿವೃದ್ಧಿ, ನೀರಿನ ಒಳಹರಿವು ಮತ್ತು ಹೊರ ಹರಿವು ನಾಲೆಗಳ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೆರೆಗೆ ಎರಡು ಕಡೆ ಶೌಚಾಲಯಗಳ ನೀರು ಸೇರಿಕೊಳ್ಳುತ್ತಿದೆ.
ಈ ಕೆರೆಯ ಕಾಮಗಾರಿ ವೀಕ್ಷಿಸಿದ ಮುಖ್ಯ ಆಯುಕ್ತರು, ‘ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯಲು ಪರ್ಯಾಯ ಕಾಲುವೆ ನಿರ್ಮಿಸಬೇಕು’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಕೆರೆಯ ಪಕ್ಕದಲ್ಲಿರುವ ಹೈಟೆನ್ಷನ್ ವಿದ್ಯುತ್ ಗೋಪುರಗಳನ್ನು ಸ್ಥಳಾಂತರಿಸುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಕಾಳೇನ ಅಗ್ರಹಾರ ಕೆರೆಯ ಬಳಿ ₹ 3 ಕೋಟಿ ವೆಚ್ಚದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಅಳವಡಿಸಲಾಗುತ್ತಿದೆ.ನಿತ್ಯ 1.50 ಲಕ್ಷ ಲೀಟರ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಕೆರೆಯ ಸುತ್ತಲೂ ಬೇಲಿ ನಿರ್ಮಿಸಲಾಗುತ್ತಿದೆ. ವಾಯು ವಿಹಾರ ಮಾರ್ಗ ನಿರ್ಮಿಸಿ ಸುತ್ತಲೂ ಸಸಿಗಳನ್ನು ಬೆಳೆಸಲಾಗುತ್ತಿದೆ. ಕಾಮಗಾರಿಗಳ ಮಾಹಿತಿ ಇರುವ ಶಾಶ್ವತ ಫಲಕವನ್ನು ಅಳವಡಿಸುವಂತೆ ತುಷಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.