ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿಯವರೆಗೆ ಅಬ್ಬರಿಸಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಬಹುತೇಕ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಹಲವೆಡೆ ಮನೆಗಳು, ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದೆ.
ಮೂರು ದಿನದಿಂದ ಆಗಾಗ್ಗೆ ಬೀಳುತ್ತಿದ್ದ ಮಳೆ, ಸೋಮವಾರ ರಾತ್ರಿಯಿಂದ ಆರಂಭವಾಗಿ ಮಂಗಳವಾರ ಮುಂಜಾನೆಯಿಂದ ಬಿರುಸಾಯಿತು. ತಗ್ಗುಪ್ರದೇಶಗಳ ನಿವಾಸಿಗಳು ಪರಿತಪಿಸಿದರು.
ಮಂಗಳವಾರ ಮಧ್ಯಾಹ್ನದವರೆಗೂ ಮಳೆ ನಿರಂತರವಾಗಿ ಸುರಿದಿದ್ದರಿಂದ, ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಿದರು. ಕಚೇರಿ ಹಾಗೂ ಇತರೆ ಕಾರ್ಯಗಳಿಗೆ ಹೊರಟಿದ್ದ ನಾಗರಿಕರು ಮಳೆಯಲ್ಲೇ ಸಂಚರಿಸಬೇಕಾಯಿತು.
ಯಲಹಂಕ, ಕೆ.ಆರ್. ಪುರದ ಕೆಲವು ಬಡಾವಣೆ, ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಮಳೆ ನೀರಿನ ಜೊತೆಗೆ ಒಳಚರಂಡಿ ನೀರೂ ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.
ಸೋಮವಾರ ಬೆಳಿಗ್ಗೆ 8.30ರಿಂದ ಮಂಗಳವಾರ ಬೆಳಿಗ್ಗೆ 8.30ರವರೆಗೆ ಸರಾಸರಿ 3.7 ಸೆಂಟಿ ಮೀಟರ್ ಮಳೆಯಾಗಿತ್ತು. ಮಂಗಳವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 3.30ರವರೆಗೆ ಸರಾಸರಿ 6.5 ಸೆಂ.ಮೀಟರ್ ಮಳೆಯಾಗಿದೆ. ಯಲಹಂಕ, ಪಶ್ಚಿಮ ಹಾಗೂ ಪೂರ್ವ ವಲಯದಲ್ಲಿ ಅತಿಹೆಚ್ಚು ಮಳೆ ಸುರಿದಿದೆ.
ಯಲಹಂಕ ವಲಯದಲ್ಲಿ 142 ಮನೆಗಳಿಗೆ ನೀರು ನುಗ್ಗಿದ್ದು, 102 ಮನೆಗಳಲ್ಲಿ ಬಿಬಿಎಂಪಿ ಸಿಬ್ಬಂದಿ ಪರಿಹಾರ ಕಾರ್ಯ ಕೈಗೊಂಡಿದ್ದರು. ಮಳೆ ನೀರಿನ ಜೊತೆಗೆ ರಾಜಕಾಲುವೆ ನೀರು ಹಾಗೂ ಒಳಚರಂಡಿ ಕಲ್ಮಶವೂ ಮನೆಗಳಿಗೆ ನುಗ್ಗಿ ಜನರು ಸಂಕಷ್ಟ ಅನುಭವಿಸಿದರು.
39 ಮರಗಳು ಧರೆಗೆ: ಸಿಎಂಟಿಐ ಜಂಕ್ಷನ್ ಬಳಿ ಎಫ್‌ಟಿಐ ರಸ್ತೆಯಲ್ಲಿ ಮರ ಬಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.
ಲಾವೆಲ್ಲೆ ರಸ್ತೆಯಿಂದ ರಿಚ್ಮಂಡ್ ಸರ್ಕಲ್ ಕಡೆಗೆ ಹೋಗುವ ಮಾರ್ಗದಲ್ಲಿ ಮರ ಬಿದ್ದು, ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಎಚ್‌ಎಂಟಿ ಬಡಾವಣೆಯಲ್ಲಿ ಮರ ಉರುಳಿಬಿದ್ದು ಕಾರಿಗೆ ಹಾನಿಯಾಗಿದೆ.
ಒಟ್ಟು 39 ಮರಗಳು ಧರೆಗುರುಳಿದ್ದು, ಯಲಹಂಕ ವಲಯದಲ್ಲಿ ಅತಿ ಹೆಚ್ಚು (10) ಮರಗಳು ಬಿದ್ದಿವೆ. 55 ಕಡೆ ಕೊಂಬೆಗಳು ಬಿದ್ದಿದ್ದು, ಪೂರ್ವ (22) ಹಾಗೂ ಬೊಮ್ಮನಹಳ್ಳಿ (16) ವಲಯದಲ್ಲಿ ಹೆಚ್ಚು ಬಿದ್ದಿದ್ದವು.
ಹೆಚ್ಚಾದ ಪ್ರಯಾಣ ದರ: ನಗರದಲ್ಲಿ ದಿನವಿಡಿ ಸುರಿದ ಮಳೆಯಿಂದ, ಆಟೊ ಹಾಗೂ ಟ್ಯಾಕ್ಸಿ ಪ್ರಯಾಣ ದರ ದಿಢೀರನೇ ದುಪ್ಪಟ್ಟಿಗಿಂತ ಹೆಚ್ಚಾಯಿತು. ₹100 ದರಕ್ಕೆ ₹400ರವರೆಗೂ ಆಟೊ ಮತ್ತು ಟ್ಯಾಕ್ಸಿ ಚಾಲಕರು ಬೇಡಿಕೆ ಇರಿಸಿದರು.
ಮಳೆ ಸುರಿಯುತ್ತಿದ್ದುದರಿಂದ ಅನ್ಯ ಮಾರ್ಗವಿಲ್ಲದೆ ಪ್ರಯಾಣಿಕರು ಹೆಚ್ಚಿನ ಮೊತ್ತ ನೀಡಿ ಪ್ರಯಾಣಿಸಿದರು. ‘ಕೆಲವು ಸಂದರ್ಭದಲ್ಲಿ ಬುಕ್ ಮಾಡಿದ ದರಕ್ಕಿಂತ ಹೆಚ್ಚು ಮೊತ್ತವನ್ನೂ ನೀಡಬೇಕಾಯಿತು’ ಎಂದು ನಾಗರಿಕರು ದೂರಿದರು.
ಸಂಚಾರ ದಟ್ಟಣೆ: ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ನಾಲ್ಕೈದು ಕಿ.ಮೀ ಪ್ರಯಾಣಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಯಿತು.
ಎಲ್ಲೆಲ್ಲಿ ರಸ್ತೆಗಳು ಜಲಾವೃತ?
ಬಳೆಗೆರೆ-ಪಣತ್ತೂರು ರಸ್ತೆ ಪಣತ್ತೂರು ರೈಲ್ವೆ ಅಂಡರ್‌ಪಾಸ್ ಕಾಡುಬೀಸನಹಳ್ಳಿ ಮತ್ತು ಮಾರತ್ತಹಳ್ಳಿ ನಡುವಿನ ಹೊರ ವರ್ತುಲ ರಸ್ತೆ ನಾಗವಾರ ಮೇಲ್ಸೇತುವೆ ಮಾನ್ಯತಾ ಟೆಕ್ ಪಾರ್ಕ್ ಬಳ್ಳಾರಿ ರಸ್ತೆ ಹುಣಸಮಾರನಹಳ್ಳಿ ವಿಂಡ್ಸರ್ ಮ್ಯಾನರ್ ಅಂಡರ್‌ಪಾಸ್ ದೊಮ್ಮಲೂರು 17ನೇ ಮುಖ್ಯರಸ್ತೆ ಇಂದಿರಾನಗರ ಕೊಡತಿ - ಸರ್ಜಾಪುರ ರಸ್ತೆ ಆಂಜನೇಯ ದೇವಸ್ಥಾನ– ಜೀವನಬಿಮಾನಗರ ಹೆಣ್ಣೂರು-ಬಾಗಲೂರು ರಸ್ತೆಯಿಂದ ಹೆಣ್ಣೂರು ಜಂಕ್ಷನ್ ಎಚ್ಎಎಲ್ ವಿಮಾನ ರಸ್ತೆಯಿಂದ ಇಸ್ರೊ– ರಾಜೇಶ್ವರಿ ಜಂಕ್ಷನ್ ಐಟಿಪಿಎಲ್ ರಸ್ತೆ ಹೂಡಿ ಜಂಕ್ಷನ್‌ನಿಂದ ಶಾಂತಿಕೇತನ ಮತ್ತು ವೈ ಜಂಕ್ಷನ್ ಹಳೆ ಮದ್ರಾಸ್ ರಸ್ತೆಯಲ್ಲಿ ಬೆನ್ನಿಗಾನಹಳ್ಳಿ ಟಿ.ಸಿ. ಪಾಳ್ಯದಿಂದ ಹಳೆ ಮದ್ರಾಸ್ ರಸ್ತೆ ಹೆಬ್ಬಾಳ ಡೌನ್ ರ‍್ಯಾಂಪ್‌ನಿಂದ ವಿಮಾನ ನಿಲ್ದಾಣದ ಕಡೆ ಯೋಗೇಶ್ವರ್ ನಗರ ಕ್ರಾಸ್‌ನಿಂದ ವೀರಣ್ಣಪಾಳ್ಯ ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಯ ಎರಡೂ ರಸ್ತೆಗಳು ರಾಷ್ಟ್ರೋತ್ಥಾನ ಸಮೀಪದ ಮೇಲ್ಸೇತುವೆ ಡೌನ್‌ರ‍್ಯಾಂಪ್ ಸಮೀಪದ ಮುಖ್ಯರಸ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.