ನಿರ್ದಿಷ್ಟ ವಿಸ್ತೀರ್ಣದ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂಬ ಕಾನೂನು ಇದೆ. ನೀರಿನ ಉಳಿತಾಯ ಮತ್ತು ಸಂಗ್ರಹದ ಬಗ್ಗೆ ಜನರಲ್ಲಿ ತಿಳಿವಳಿಕೆಯೂ ಇದೆ. ಆದರೆ, ಕಾನೂನು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ, ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಬಹುತೇಕರು ಮನಸು ಮಾಡುತ್ತಿಲ್ಲ. ಸದ್ಯಕ್ಕೆ ಸುಲಭವಾಗಿ, ಕಡಿಮೆ ಬೆಲೆಗೆ ನೀರು ಸಿಗುತ್ತಿರುವುದರಿಂದಲೇ ಜಲದ ನಿಜವಾದ ‘ಬೆಲೆ’ ತಿಳಿಯುತ್ತಿಲ್ಲ ಎಂಬುದು ವಾಸ್ತವ...
ಬೆಂಗಳೂರು:‘ಮಳೆ ನೀರು ಸಂಗ್ರಹ’ ಎಂಬ ವಾಕ್ಯ ಕಿವಿಗೆ ಇಂಪಾಗಿ ಕೇಳಿಸುತ್ತದೆ. ಕಾಗದದ ಮೇಲೆ ಒಂದೊಳ್ಳೆ ರೂಪಕದಂತೆ ಭಾಸವಾಗುವ ಈ ವಾಕ್ಯ ಅಷ್ಟೇ ಸುಂದರವಾಗಿ ಕಾರ್ಯರೂಪಕ್ಕೆ ಇಳಿದಿಲ್ಲ.
ಮಳೆ ನೀರು ಸಂಗ್ರಹ ಕಡ್ಡಾಯ ಮಾಡುವ ಬಗ್ಗೆ ಹಲವು ಕಾನೂನುಗಳಿದ್ದರೂ, ಜನರಲ್ಲಿ ಅದರ ಬಗ್ಗೆ ಅರಿವಿನ ಕೊರತೆ ಇದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬ ಮನಸಿದ್ದರೂ, ಜಾಗದ ಕೊರತೆ ನೆಪ ಹೇಳಿ ನಾಗರಿಕರು ಸುಮ್ಮನಾಗುತ್ತಿದ್ದಾರೆ. ಇದರೊಂದಿಗೆ, ಈ ಬಗ್ಗೆ ಅರಿವು ಮೂಡಿಸುವುದಕ್ಕಿಂತ ಹೆಚ್ಚಾಗಿ, ದಂಡ ವಿಧಿಸಿ ಕೈ ತೊಳೆದುಕೊಳ್ಳುತ್ತಿದೆ ಜಲಮಂಡಳಿ.
ಕಾಯ್ದೆ ಏನು ಹೇಳುತ್ತದೆ?
ಜಲಮಂಡಳಿಯ ಕಾಯ್ದೆ 72ಎ ಪ್ರಕಾರ, ಬಿಬಿಎಂಪಿವ್ಯಾಪ್ತಿಯಲ್ಲಿರುವ 2,400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನಿವೇಶನದಲ್ಲಿ, ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಹಾಗೂ 1,200 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನೂತನವಾಗಿ ನಿರ್ಮಾಣಗೊಳ್ಳುವ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸುವುದು ಕಡ್ಡಾಯ. 2009ರ ಆಗಸ್ಟ್‌ನಿಂದ ಈ ಕಾನೂನು ಜಾರಿಗೆ ಬಂದಿದೆ.
2009ರ ನಂತರ ನಿರ್ಮಾಣವಾದ ನಗರದ 1.20 ಲಕ್ಷ ಕಟ್ಟಡಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಳ್ಳದ 63 ಸಾವಿರ ಕಟ್ಟಡಗಳ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಜಲಮಂಡಳಿ ಹೇಳುತ್ತದೆ. ತಿಂಗಳಿಗೆ ₹50 ಲಕ್ಷದಿಂದ ₹60 ಲಕ್ಷದಂತೆ ಈ ವರ್ಷ ₹3 ಕೋಟಿಗಿಂತ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.
ಉದಾಹರಣೆಗೆ, ನೀರಿನ ಶುಲ್ಕ ₹100 ಎಂದು ತೆಗೆದುಕೊಂಡರೆ, ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಕಟ್ಟಡಗಳ ಮಾಲೀಕರಿಗೆ ಮೊದಲ ಮೂರು ತಿಂಗಳು ₹25ರಂತೆ ದಂಡ ಹಾಕಲಾಗುತ್ತದೆ. ಅಂದರೆ, ಅವರು ₹125 ಪಾವತಿಸಬೇಕು. ಆರು ತಿಂಗಳ ನಂತರವೂ ಮಳೆ ಸಂಗ್ರಹ ವ್ಯವಸ್ಥೆ ಅಳವಡಿಸದಿದ್ದರೆ, ನೀರಿನ ಶುಲ್ಕದ ಶೇ 50ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ.
ಕಾನೂನು ಹಾಗೆ – ಜನ ಹೀಗೆ...: ನಗರದಲ್ಲಿ ಸುತ್ತಾಡಿದರೆ, 30X40 ಅಡಿ ವಿಸ್ತೀರ್ಣದ ಸಾವಿರಾರು ಕಟ್ಟಡಗಳಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳದೇ ಇರುವುದು ಗಮನಕ್ಕೆ ಬರುತ್ತದೆ. ವಿಚಾರಿಸಿದರೆ, ನಮ್ಮ ಮನೆ ಹತ್ತು ವರ್ಷಕ್ಕಿಂತ ಹಳೆಯದು ಎಂಬ ಉತ್ತರ ನೀಡುತ್ತಾರೆ. ಹೊಸ ಮನೆಗಳಲ್ಲಿ ವಿಚಾರಿಸಿದರೆ, ಜಾಗದ ಕೊರತೆ ಎಂಬ ನೆಪ ಹೇಳುತ್ತಾರೆ.
‘ಜಾಗದ ಕೊರತೆ ನೆಪ ಹೇಳಲು ಸಾಧ್ಯವೇ ಇಲ್ಲ. 1,200 ಚದರ ಅಡಿಗಿಂತ ಅಧಿಕ ವಿಸ್ತೀರ್ಣದ ಕಟ್ಟಡ ಹೊಂದಿರುವ ಯಾರೇ ಆದರೂ, ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಅವರ ಮನೆಗೆ ನೀರಿನ ಸಂಪರ್ಕ ನೀಡುವುದೇ ಇಲ್ಲ. ಹೀಗಾಗಿ, ಎಲ್ಲರೂ ಈ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಮಾಡಿಕೊಂಡಿದ್ದಾರೆ' ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.
1,200 ಚದರ ಅಡಿಯ ನಿವೇಶನ ಹೊಂದಿರುವವರು ಈ ವ್ಯವಸ್ಥೆ ಹಾಕಿಕೊಂಡಿರುವುದಕ್ಕೆ ಸಾಕ್ಷಿಯಾಗಿ ಫೋಟೊ ಕೊಡಬೇಕು. ವೆಬ್‌ಸೈಟ್ ನಲ್ಲಿಯೂ ಈ ಫೋಟೊಗಳನ್ನು ಅಪ್ ಲೋಡ್ ಮಾಡಲಾಗುತ್ತದೆ ಎಂದು ಅವರು ಹೇಳುತ್ತಾರೆ.
ಖರ್ಚಿನ ಚಿಂತೆ:30x40 ಚದರ ಅಡಿ ವಿಸ್ತೀರ್ಣದ ಮನೆಗೆ ಸಂಪು ಸಮೇತ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ₹6 ಸಾವಿರದಿಂದ ₹7 ಸಾವಿರ ವೆಚ್ಚವಾಗುತ್ತದೆ. ಇಂಗುಗುಂಡಿ ಮಾಡಲು ₹15 ಸಾವಿರದಿಂದ ₹16 ಸಾವಿರ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಸೇವಾ ಸಂಸ್ಥೆಗಳು ₹30 ಸಾವಿರಕ್ಕಿಂತ ಹೆಚ್ಚು ಶುಲ್ಕ ಕೇಳುತ್ತವೆ. ಹೀಗಾಗಿ, ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ ಎನ್ನುತ್ತಾರೆ ಜಯನಗರದ ಕೆ. ಸುರೇಶ್.
ಹಲವು ನಾಗರಿಕರು ಮತ್ತು ಕಂಪನಿಗಳು ಈ ನಿಟ್ಟಿನಲ್ಲಿ ಮಾದರಿ ವ್ಯವಸ್ಥೆ ಮಾಡಿಕೊಂಡಿವೆ. ಜಯನಗರ, ಬಸವನಗುಡಿ, ಹೆಬ್ಬಾಳದ ಹಲವು ಕಡೆ ಪಾದಚಾರಿ ಮಾರ್ಗ ಪಕ್ಕದ ಚರಂಡಿಗಳಲ್ಲಿ ನೀರು ಇಂಗಿಸುವ ವ್ಯವಸ್ಥೆ ಮಾಡಲಾಗಿದೆ. ಹಲವು ನಾಗರಿಕರು ಜಲ ಸ್ವಾವಲಂಬನೆ ಸಾಧಿಸುವ ಮಾದರಿ ಕೆಲಸ ಮಾಡಿದ್ದಾರೆ. ಜಲವಿಜ್ಞಾನಿ ಎ.ಆರ್. ಶಿವಕುಮಾರ್ ತಮ್ಮ 60X40 ಅಡಿಯ ನಿವೇಶನದಲ್ಲಿ ಬೀಳುವ ಮಳೆ ನೀರನ್ನೇ ಬಳಸಿ, ತಮ್ಮ ವರ್ಷವಿಡೀ ಕುಟುಂಬ ಮತ್ತು ತಾರಸಿ ತೋಟ, ಕೈದೋಟಗಳ ನಿರ್ವಹಣೆ→ಮಾಡುತ್ತಾರೆ. 11 ವರ್ಷಗಳಿಂದ ಅವರು ಕಾವೇರಿ ನೀರನ್ನೇ ಅವಲಂಬಿಸಿಲ್ಲ.
ಇಂತಹ ಉದಾಹರಣೆಗಳು ಹೆಚ್ಚಾಗಬೇಕಿದೆ. ಜಲಮಂಡಳಿ ದಂಡ ಕಟ್ಟಿಸಿಕೊಂಡು ಕೈ ತೊಳೆದುಕೊಳ್ಳದೆ, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ನಿಯಮಿತವಾಗಿ ಪರಿಶೀಲನೆ ನಡೆಸುದಕ್ಕೂ ಮುಂದಾಗಬೇಕು. ಎಲ್ಲದಕ್ಕಿಂತ ಹೆಚ್ಚಾಗಿ, ನಾಗರಿಕರು ಮಳೆ ನೀರು ಸಂಗ್ರಹಿಸುವ ಮನಸು ಮಾಡಬೇಕಿದೆ.
ಪರಿಶೀಲನೆ ವ್ಯವಸ್ಥೆ ಇಲ್ಲ
ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಾಟಾಚಾರಕ್ಕೆ ಅಳವಡಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಹೆಚ್ಚಿನವರು ಈ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ ಎಂಬ ಕಾರಣಕ್ಕೆ ಹಾಗೂ ಜಲಮಂಡಳಿಗೆ ಫೋಟೊ ನೀಡಬೇಕು ಎಂಬ ಕಾರಣಕ್ಕೆ ಅಳವಡಿಸುತ್ತಾರೆ. ನೀರು ಉಳಿತಾಯ ಮಾಡಬೇಕು, ಸಂಗ್ರಹಿಸಬೇಕು, ಜಲ ಸ್ವಾವಲಂಬನೆ ಸಾಧಿಸಬೇಕು ಎಂಬ ಮನಸು ಹೊಂದಿರುವವರು ಕೆಲವೇ ಮಂದಿ ಎಂದು ಜಲ ತಜ್ಞರು ಹೇಳುತ್ತಾರೆ.
ಬಿಬಿಎಂಪಿಯಿಂದ ಸ್ವಾಧೀನಾನುಭವ ಪ್ರಮಾಣಪತ್ರ ಪತ್ರ ಕೊಟ್ಟ ನಂತರ, ಜಲಮಂಡಳಿ ನೀರಿನ ಸಂಪರ್ಕ ನೀಡಿದ ಬಳಿಕ, ಮಳೆ ಸಂಗ್ರಹ ವ್ಯವಸ್ಥೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ಮತ್ತೊಮ್ಮೆ ಪರಿಶೀಲಿಸುವ ವ್ಯವಸ್ಥೆಯೇ ಇಲ್ಲ. ನೀರನ್ನು ಸಮರ್ಪಕವಾಗಿ ಸಂಗ್ರಹಿಸಲಾಗುತ್ತಿದೆಯೇ, ಅದನ್ನೇ ಬಳಸಲಾಗುತ್ತಿದೆಯೇ ಎಂಬುದರ ಪರಿಶೀಲನೆ ನಡೆಯುತ್ತಿಲ್ಲ.
ಸದ್ಯ, ನಗರದಲ್ಲಿ ನೀರಿನ ಕೊರತೆ ಇಲ್ಲ. ಕಾವೇರಿ ನೀರು ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಅವರಿಗೆ ಸಿಗುತ್ತದೆ. ಹೀಗಾಗಿ, ಮಳೆ ನೀರು ಸಂಗ್ರಹ ಎಷ್ಟು ಮಹತ್ವದ್ದು ಎಂಬ ಬಗ್ಗೆ ಅವರ ಅರಿವಿಗೆ ಬಂದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಜಯನಗರ ಮಳೆ ಸುಗ್ಗಿ ಕೇಂದ್ರ ಮಾದರಿ
ಜಯನಗರದಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರ ಎಲ್ಲ ನಗರಗಳು ಮತ್ತು ವಾರ್ಡ್‌ಗಳಿಗೆ ಮಾದರಿಯಾಗುವಂಥದ್ದು.
ಈ ಕೇಂದ್ರದಲ್ಲಿ ಮಳೆ ನೀರು ಸಂಗ್ರಹ ಕುರಿತು ಮಾಹಿತಿ ನೀಡುವುದಕ್ಕೆಂದೇ ಇಬ್ಬರು ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ನಿತ್ಯ 15ರಿಂದ 20 ನಾಗರಿಕರು, ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಅಚ್ಚರಿ ಎಂದರೆ, ಈ ಕೇಂದ್ರದ ಸುತ್ತ–ಮುತ್ತ ಇರುವ ವಿಶಾಲ ಮನೆಗಳಲ್ಲಿ ಬಹುತೇಕರು ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ !
ಸಂಪೂರ್ಣ ಮಾಹಿತಿ–ಸಲಹೆಗೆ ಆ್ಯಪ್
ಯುನೆಸ್ಕೊ ಮನವಿ ಮೇರೆಗೆ, ಜಲ ವಿಜ್ಞಾನಿ ಎ.ಆರ್. ಶಿವಕುಮಾರ್ ಒಂದು ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಸಲಹೆಗಳನ್ನು ಒಳಗೊಂಡ ಈ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಿಂದ RWH Advisor ಎಂದು ಟೈಪ್‌ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೊತೆಗೆ, ವೆಬ್‌ಸೈಟ್‌ನಲ್ಲಿ rwh-advisor.infoಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಆ್ಯಪ್ ಬಳಕೆ ಹೇಗೆ–ಏನೇನಿದೆ?
*ಯಾವ ಊರಿನವರು, ಮನೆಯ ಚಾವಣಿ ವಿಸ್ತೀರ್ಣ ಎಷ್ಟಿದೆ, ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬ ಮಾಹಿತಿ ನೀಡಬೇಕು
* ದೇಶದ 580 ನಗರ ಮತ್ತು ಪಟ್ಟಣಗಳ ಮಾಹಿತಿ, ಜಿಲ್ಲಾ ಕೇಂದ್ರಗಳ ಕಳೆದ 100 ವರ್ಷಗಳಲ್ಲಿ ನಿತ್ಯ ಬಿದ್ದ ಮಳೆ ಪ್ರಮಾಣದ ದತ್ತಾಂಶ ಇದರಲ್ಲದೆ.
* ಆಯಾ ಊರಿನ ಮಳೆ ಪ್ರಮಾಣದ ದತ್ತಾಂಶಗಳನ್ನು ಪಡೆದು, ಅವರ ಚಾವಣಿ ಮೇಲೆ ಎಷ್ಟು ಮಳೆಯಾಗುತ್ತದೆ, ಎಷ್ಟು ಪ್ರಮಾಣದ ನೀರು ನಿಲ್ಲುತ್ತದೆ, ಈ ನೀರನ್ನು ಸಂಗ್ರಹಿಸಲು ಸಂಪ್‌ನ ಗಾತ್ರ ಕನಿಷ್ಠ ಎಷ್ಟಿರಬೇಕು, ಆ ಗಾತ್ರಕ್ಕೆ ಸಂಪ್ ಕಟ್ಟಿದರೆ ಆ ನೀರನ್ನು ಎಷ್ಟು ದಿನದವರೆಗೆ ಬಳಸಬಹುದು. ಒಬ್ಬೊಬ್ಬರು 135 ಲೀಟರ್ ನೀರು ಉಪಯೋಗಿಸಿದರೆ, ವರ್ಷಕ್ಕೆ ಎಷ್ಟು ದಿನದವರೆಗೆ ಆ ಕುಟುಂಬಕ್ಕೆ ಈ ನೀರು ಸಾಕಾಗುತ್ತದೆ ಎಂದು ತಿಳಿಸುತ್ತದೆ.
* ವರ್ಷದಲ್ಲಿ ಎಷ್ಟು ದಿನ ಆ ಸಂಪು ತುಂಬಿ ಹರಿಯುತ್ತದೆ ಎಂಬ ಬಗ್ಗೆಯೂ ಮಾಹಿತಿ ಸಿಗುತ್ತದೆ.
* ಆ ಸ್ಥಳದ ವ್ಯಾಪ್ತಿಯಲ್ಲಿರುವ ಡೀಲರ್‌ಗಳು, ಪ್ಲಂಬಿಂಗ್ ಗುತ್ತಿಗೆದಾರರು, ಕಾರ್ಮಿಕರ ಕೇಳುವ ಶುಲ್ಕವನ್ನು ಆಧರಿಸಿ, ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಹಾಕಲಾಗಿದೆ. ಮನೆ, ಸಂಪ್‌ನ ಗಾತ್ರ ಆಧರಿಸಿ ಅಂದಾಜು ವೆಚ್ಚ ಎಷ್ಟಾಗುತ್ತದೆ ಎಂಬುದನ್ನು ತಿಳಿಸಲಾಗಿದೆ
* ಸ್ಥಳೀಯ ಸಂಸ್ಥೆಗಳ ವಿಳಾಸ, ಆ ಊರಿನಲ್ಲಿ ಮಳೆ ಸಂಗ್ರಹ ವ್ಯವಸ್ಥೆ ಅಳವಡಿಸುವವರ ಮಾಹಿತಿ, ಈ ಬಗ್ಗೆ ತರಬೇತಿ ಪಡೆದವರ ವಿವರ, ದೂರವಾಣಿ ಸಂಖ್ಯೆ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.