ಬೆಂಗಳೂರು: ದಾಸರಹಳ್ಳಿ ವಲಯದ ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿಯಿಂದ ಪೀಣ್ಯ ಕೈಗಾರಿಕೆ ಪ್ರದೇಶ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದೆ. ಇದರ ಜೊತೆಗೆ ಕೆರೆ ಸುತ್ತಮುತ್ತ ಇರುವ ಸಣ್ಣ ಬಡಾವಣೆಗಳಲ್ಲಿ ಮಳೆ ಬಂದಾಗ ಮನೆಗೆ ನೀರು ನುಗ್ಗಿ ಜನ ಪರದಾಡುತ್ತಾರೆ. ಕಾಲುವೆಗಳ ಒತ್ತುವರಿ ಹಾಗೂ ಹೂಳು ತುಂಬಿರುವುದರಿಂದ ಹಲವು ಬಡಾವಣೆಗಳೂ ಜಲಾವೃತವಾಗುತ್ತವೆ. ಬಿಬಿಎಂಪಿ ಗುರುತಿಸಿರುವ ನಕ್ಷೆ ಹಾಗೂ ಸಂಖ್ಯೆಗಿಂತ ಹೆಚ್ಚು ಪ್ರಮಾಣದಲ್ಲಿ ರಾಜಕಾಲುವೆ ಇಲ್ಲಿ ಒತ್ತುವರಿಯಾಗಿರುವುದು ಕಂಡುಬರುತ್ತದೆ.
ಬಾಗಲಗುಂಟೆ ಸಿದ್ದೇನಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಬಡಾವಣೆಗಾಗಿ ಸುಮಾರು 25 ಸಾವಿರ ಚದರ ಮೀಟರ್ ರಾಜಕಾಲುವೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದೆ. ಇದಲ್ಲದೆ, ಬಡಾವಣೆ, ರಸ್ತೆ, ಕೈಗಾರಿಕೆ, ಕೃಷಿ, ತೆರೆದ ಪ್ರದೇಶ, ಹಲವು ವ್ಯಕ್ತಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಜಲಮಂಡಳಿ ಕೂಡ ರಾಜಕಾಲುವೆಯಲ್ಲೇ ಬೃಹತ್ ಕೊಳವೆ ಮಾರ್ಗ ನಿರ್ಮಿಸಿರುವುದು ಈ ಭಾಗದಲ್ಲಿ ಮಳೆನೀರು ಉಕ್ಕಿಹರಿಯಲು ಮತ್ತೊಂದು ಕಾರಣ.
ತುಮಕೂರು ರಸ್ತೆಗೆ ಹೊಂದಿಕೊಂಡಂತಿರುವ ದಾಸರಹಳ್ಳಿ ಕೆರೆಯ ರಾಜಕಾಲುವೆ ಒಂದು ಭಾಗದಿಂದ ಮತ್ತೊಂದು ಬದಿಗೆ ಹರಿಯಲು ಸ್ಥಳವನ್ನೇ ಹೊಂದಿಲ್ಲ. ಮುಂದೆ 8ನೇ ಮೈಲುಗಲ್ಲು ರಸ್ತೆಯ ಸಮೀಪವೂ ರಾಜಕಾಲುವೆ ಮುಖ್ಯರಸ್ತೆಯಲ್ಲಿ ಮತ್ತೊಂದೆಡೆಗೆ ಸಂಪರ್ಕ ಕಡಿದುಕೊಂಡಿದೆ. ಹೀಗಾಗಿ ಮಳೆ ಬಂದಾಗ ರಸ್ತೆ ಜಲಾವೃತವಾಗುತ್ತದೆ.
ನೆಲಗದರನಹಳ್ಳಿ ಕೆರೆ ಭಾಗದಲ್ಲಿರುವ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ರಾಜಕಾಲುವೆಯ ನೀರಿನ ಜೊತೆಗೆ ಕಸ–ಕಲ್ಮಶವೆಲ್ಲ ತುಂಬಿಕೊಳ್ಳುತ್ತದೆ. ಈ ಭಾಗದಲ್ಲಿ ಕೆಲವು ಕೈಗಾರಿಕೆಗಳಿಂದಲೂ ರಾಜಕಾಲುವೆ ಒತ್ತುವರಿಯಾಗಿದೆ. ಇನ್ನು ಈ ಭಾಗದಲ್ಲಿ ರಾಸಾಯನಿಕ ತ್ಯಾಜ್ಯವನ್ನೂ ರಾಜಕಾಲುವೆಗೆ ಹರಿಸಲಾಗುತ್ತಿದೆ. ಇದು ಅರ್ಕಾವತಿ ನದಿಯ ಹಳ್ಳವನ್ನು ಸೇರುತ್ತದೆ. ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆ ಕ್ರಮ ಕೈಗೊಂಡಿಲ್ಲ.
ಬಾಗಲಗುಂಟೆ, ಮಲ್ಲಸಂದ್ರ ಕೆರೆಗಳನ್ನು ಬಿಬಿಎಂಪಿ ತನ್ನ ನಕ್ಷೆಯಲ್ಲಿ ಮಾಯ ಮಾಡಿದೆ. ಇದರ ಜೊತೆಯಲ್ಲಿ ಮೂರ್ನಾಲ್ಕು ಕೆರೆಗಳನ್ನು ಕಪ್ಪಾಗಿಸಿದೆ. ನೆಲಗದರನಹಳ್ಳಿ ಕೆರೆ, ದಾಸರಹಳ್ಳಿ ಕೆರೆ, ಕಮ್ಮಗೊಂಡನಹಳ್ಳಿ ಕೆರೆಗಳ ಕೆಳ, ಮೇಲ್ಭಾಗದಲ್ಲಿರುವ ಬಡಾವಣೆಗಳಲ್ಲಿ ರಾಜಕಾಲುವೆಗಳು ಇಲ್ಲದೆ, ನೀರು ಜಿನುಗುತ್ತಿರುತ್ತದೆ.
ಮಳೆ ನೀರು ಇಂಗಿಸಲಿ
ರಾಜಕಾಲುವೆಗಳು ಉಕ್ಕುವುದನ್ನು ಕಡಿಮೆ ಮಾಡಲು ಸರ್ಕಾರವು ಸಾರ್ವಜನಿಕ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹ ಮಾಡಬೇಕು. ಪ್ರತಿ ಪ್ರದೇಶದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಮಳೆ ನೀರು ಇಂಗಿಸುವ ವ್ಯವಸ್ಥೆ ಮಾಡಬೇಕು. ಕೈಗಾರಿಕೆ ಪ್ರದೇಶಗಳಲ್ಲಿ ಹೆಚ್ಚುವರಿ ಯಾಗಿ, ರಾಜಕಾಲುವೆಗಳಲ್ಲಿ ಪ್ರತಿ 50ರಿಂದ 100 ಮೀಟರ್‌ಗೆ ನೀರಿನ ಸೋರಿಕೆಯನ್ನು ಅನುಮತಿಸಿ ಕೆಳಭಾಗ ವನ್ನು ಜಲ್ಲಿಕಲ್ಲುಗಳಿಂದ ತೆರೆದಿರಬೇಕು. ಈ ಕ್ರಮಗಳು ಪ್ರವಾಹವನ್ನು ಕಡಿಮೆ ಮಾಡುವುದರ ಜೊತೆಗೆ, ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು ಸಹಾಯ ಮಾಡುತ್ತವೆ.
- ರಾಜಕುಮಾರ್ ದುಗಾರ್,ಸ್ಥಾಪಕ, ಸಿಟಿಜನ್ ಫಾರ್ ಸಿಟಿಜನ್ಸ್
ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿ
ಕೆರೆಗಳು ಹಾಗೂ ರಾಜಕಾಲುವೆಗಳನ್ನು ಒತ್ತು ವರಿ ಮಾಡಿ, ಅದರ ಮೇಲೆ ಕಟ್ಟಡಗಳನ್ನು ಕಟ್ಟುವುದರಿಂದ ಭವಿಷ್ಯದಲ್ಲಿ ಭಾರಿ ಸಂಕಷ್ಟವಾಗುತ್ತದೆ ಎಂದು ನಾವು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹೇಳು ತ್ತಲೇ ಬಂದಿದ್ದೇವೆ. ಆದರೆ ಅವರು ಕೇಳುತ್ತಲೇ ಇಲ್ಲ. ಅಧಿಕಾರಿಗಳಿಗೆ ಒತ್ತುವರಿ ಬಗ್ಗೆ ಗೊತ್ತಿದ್ದರೂ ಕೆಲವು ಗಿಮಿಕ್ ಮಾಡಿ ಸುಮ್ಮನಿರುತ್ತಾರೆ. ಮೂಲ ರಾಜಕಾಲುವೆಗಳ ಮಾರ್ಗ, ವಿಸ್ತೀರ್ಣ ಹಾಗೂ ಅದರ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು.
- ವಿಜಯ್ ನಿಶಾಂತ್,ಪರಿಸರ ಕಾರ್ಯಕರ್ತ
ತೆರಿಗೆ ಬೇಕು, ಸೌಕರ್ಯ ಕೊಡಲ್ಲ
‘ಪೀಣ್ಯ ಕೈಗಾರಿಕೆ ಪ್ರದೇಶಗಳಲ್ಲಿನ ಅವ್ಯವಸ್ಥೆಯಿಂದಾಗಿ ಕಳೆದ ಬಾರಿ ಮಳೆ ಬಂದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು, ಕಚ್ಚಾ ವಸ್ತುಗಳಿಗೆ ಹಾನಿಯಾಗಿತ್ತು. ಈ ನಷ್ಟವನ್ನು ಯಾರೂ ತುಂಬಿಕೊಡಲಿಲ್ಲ. ಬಿಬಿಎಂಪಿಗೆ ತೆರಿಗೆ ಬೇಕು, ಸರ್ಕಾರಕ್ಕೆ ನಮ್ಮಿಂದ ಆದಾಯ ಬೇಕು. ಆದರೆ ಇಲ್ಲಿ ರಾಜಕಾಲುವೆಗಳಿಂದ ಉಕ್ಕಿ ಹರಿಯುವ ಕೊಳಕು ನೀರು, ಕಲ್ಮಶ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಕೈಗಾರಿಕೆಗಳಿಗೆ ಸೇರಿಕೊಳ್ಳುವುದನ್ನು ತಪ್ಪಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಲಾಗಿದೆ’ ಎನ್ನುತ್ತಾರೆ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿರುವ ಉದ್ಯಮಿ ಪ್ರಮೋದ್ ಬಾಳಿಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.