ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಪುನರಾವರ್ತಿಸುತ್ತಿರುವ ಪ್ರವಾಹವನ್ನು ತಪ್ಪಿಸಲು ಹೆಚ್ಚುವರಿಯಾಗಿ 658 ಕಿ.ಮೀ ರಾಜಕಾಲುವೆ ನಿರ್ಮಿಸಬೇಕು ಎಂದು ಪ್ರಾಪರ್ಟಿ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾದ ‘ಬೆಂಗಳೂರು ಅರ್ಬನ್ ಫ್ಲಡ್ ವರದಿ’ಯಲ್ಲಿ ಸಲಹೆ ನೀಡಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಜಲಾವೃತಗೊಂಡಿದ್ದವು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ವೈಜ್ಞಾನಿಕ ರಾಜಕಾಲುವೆಗಳ ನಿರ್ಮಾಣ ಮಾಡಬೇಕು. ಮುಂಬೈ ನಗರದಲ್ಲಿ ಅಳವಡಿಸಿಕೊಂಡಿರುವ ವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಹೊಸದಾಗಿ 658 ಕಿ.ಮೀ ನಿರ್ಮಾಣ ಹಾಗೂ ಅಸ್ತಿತ್ವದಲ್ಲಿರುವ ರಾಜಕಾಲುವೆಗಳ ಪುನಶ್ಚೇತನ ಮತ್ತು ನಿರ್ವಹಣೆಗೆ ₹2,000 ಕೋಟಿ ಅಗತ್ಯವಿದೆ. ಸದ್ಯ ಇರುವ ರಾಜಕಾಲುವೆ ಸೇರಿ ಕೆರೆಗಳನ್ನು ಸ್ವಚ್ಛಗೊಳಿಸಲು ಮತ್ತು ಹೂಳೆತ್ತವುದಕ್ಕೆ ₹800 ಕೋಟಿ ಬೇಕಾಗುತ್ತದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.
ಬೆಂಗಳೂರಿನಲ್ಲಿ ಸದ್ಯ 842 ಕಿ.ಮೀ ಉದ್ದದ ರಾಜಕಾಲುವೆ ಇದೆ. ಆದರೆ, ಇದನ್ನು 1,500 ಕಿ.ಮೀಗೆ ವಿಸ್ತರಿಸುವ ಅಗತ್ಯವಿದೆ. ಇದಕ್ಕೆ ಅಗತ್ಯವಾಗಿರುವ ಹಣವನ್ನು ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್ (ವಿಸಿಎಫ್) ಮೂಲಕ ಸಂಗ್ರಹಿಸಿಕೊಳ್ಳಬಹುದು. ಅಂದರೆ, ರಾಜಕಾಲುವೆಯಲ್ಲಿ ಸುಗಮವಾಗಿ ನೀರು ಹರಿಯುವುದರಿಂದ ಭೂಮಿಗೆ ಬೆಲೆ ಬರುತ್ತದೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಸರ್ಕಾರ ಇಂತಹ ಕ್ಷೇತ್ರಗಳಿಂದ ಹಣ ಪಡೆಯಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ದ್ವಿಗುಣಗೊಂಡಿದೆ. ತ್ವರಿತ ಮತ್ತು ಅವೈಜ್ಞಾನಿಕ ಅಭಿವೃದ್ಧಿಯಿಂದ ನಗರದ ನಿರ್ಮಾಣ ಪ್ರದೇಶವು ಶೇ 93.3ರಷ್ಟು ಏರಿಕೆ ಕಂಡಿದೆ. ಇದು ಬೆಂಗಳೂರಿನ ನೈಸರ್ಗಿಕ ಪರಿಸರದ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದೆ. ಜೊತೆಗೆ ಕೆರೆಗಳು ಮತ್ತು ರಾಜಕಾಲುವೆಗಳ ನಡುವಿನ ಸಂಪರ್ಕ ಕಡಿತಗೊಳ್ಳಲು ಕಾರಣವಾಗಿದೆ. ಇದರಿಂದ ಭಾರೀ ಮಳೆಯ ಸಂದರ್ಭದಲ್ಲಿ ನಗರವು ಪುನರಾವರ್ತಿತ ಪ್ರವಾಹಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದೆ.
ನೈಟ್ ಫ್ರಾಂಕ್ ಇಂಡಿಯಾ ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್ ವರದಿ ಬಿಡುಗಡೆ ಮಾಡಿದರು. ‘ನಗರದ ಪರಿಸರ ವ್ಯವಸ್ಥೆಗೆ ಹಾನಿಯಾಗದಂತೆ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಪ್ರವಾಹ ಸಮಸ್ಯೆ ಪ್ರತಿವರ್ಷವೂ ಸಂಭವಿಸುತ್ತದೆ. ಇದರಿಂದ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಹೂಡಿಕೆಯ ಮೇಲೆ ಪರಿಣಾಮ ಬೀರತ್ತಿದೆ’ ಎಂದರು.
‘ನಗರದಲ್ಲಿ ಸಂಭವಿಸುವ ಪ್ರವಾಹ ತಡೆಗಟ್ಟಲು ‘ಸ್ಪಾಂಜ್ ಸಿಟಿ’ ಎಂಬ ಪ್ರಾಕೃತಿಕ ಆಧಾರಿತ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು. ಚೀನಾದಲ್ಲಿ ಈ ಮಾದರಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಇದು ಪರಿಸರ, ಮೂಲಸೌಕರ್ಯ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ’ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ವಿಜಯ್ ಮತ್ತು ಶಿಲ್ಪಾ ಶ್ರೀ ಇದ್ದರು.
ರಾಜಕಾಲುವೆ ನಿರ್ಮಾಣ: ಕಟ್ಟೆಚ್ಚರಿಕೆಗೆ ಸೂಚನೆ
ಬೆಂಗಳೂರು: ಬೃಹತ್ ನೀರುಗಾಲುವೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕಟ್ಟೆಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ದಕ್ಷಿಣ ವಲಯದ ಆಯುಕ್ತ ಜಯರಾಮ ರಾಯಪುರ ಸೂಚಿಸಿದರು.
ದಕ್ಷಿಣ ವಲಯದಲ್ಲಿ ಬೃಹತ್ ನೀರುಗಾಲುವೆ (ರಾಜಕಾಲುವೆ) ಕಾಮಗಾರಿಗಳನ್ನು ಬುಧವಾರ ಅವರು ಪರಿಶೀಲಿಸಿದರು.
ಸಿಂಧೂರ್ ಕನ್ವೆನ್ಷನ್ ಹಾಲ್ ಹತ್ತಿರ ಪ್ರಗತಿಯಲ್ಲಿರುವ ಬೃಹತ್ ನೀರುಗಾಲುವೆ ಪೈಪ್ ಲೈನ್ ಕಾಮಗಾರಿಯು 17ನೇ ಕ್ರಾಸ್ ರಸ್ತೆಯವರೆಗೆ ನಡೆಯುತ್ತಿದೆ. ಈ ಸ್ಥಳದಲ್ಲಿ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕೆ ನೋಡಿಕೊಳ್ಳಲು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚಿಸಿದರು.
ಫ್ರ್ಯಾಂಕ್ ಪಬ್ಲಿಕ್ ಶಾಲೆ ಹತ್ತಿರ ನಡೆಯುತ್ತಿರುವ ಭೂಗತ(ಟಿಟಿ) ಕಾಮಗಾರಿಗೆ ಸಿಂಕಿಂಗ್ ಪಿಟ್‌ಗಳನ್ನು ನಿರ್ಮಿಸಿರುವ ಬಗ್ಗೆ ಪರಿಶೀಲಿಸಿ, ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ತಿಳಿಸಿದರು.
ಜಯನಗರದ ಡಾಲರ್ಸ್ ಕಾಲೊನಿ ವ್ಯಾಪ್ತಿಯ ವೈಷ್ಣವಿ ಟೆರೆಸಸ್ ಹತ್ತಿರ ವಿರುವ ಬೃಹತ್ ನೀರುಗಾಲುವೆ ವೈಷ್ಣವಿ ಟೆರಸ್ ಹತ್ತಿರ 6 ಮೀಟರ್ ಅಗಲವಿದ್ದು, ತದನಂತರದಲ್ಲಿ ಮುಂದೆ ರೈನ್ ಬೋ ಆಸ್ಪತ್ರೆಯ ಸ್ಥಳದಲ್ಲಿ 3 ಮೀಟರ್ ಇದೆ. ನೀರುಗಾಲುವೆ ಅಗಲ ಕಡಿಮೆಯಾಗಿರುವುದರಿಂದ ಇದಕ್ಕೆ ಪರ್ಯಾಯ ಕಾಲುವೆ ನಿರ್ಮಿಸುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.
ಬೊಮ್ಮನಹಳ್ಳಿ ವಿಭಾಗಕ್ಕೆ ಸೇರುವ ಬೃಹತ್ ನೀರುಗಾಲುವೆಯ ಹೂಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. 15 ದಿನಗಳಲ್ಲಿ ನೀರುಗಾಲುವೆ ಸಂಪರ್ಕಿಸುವ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.