ಬೆಂಗಳೂರು: ನಗರದ ಪೂರ್ವ ತಾಲ್ಲೂಕಿನಲ್ಲಿ ರಾಜಕಾಲುವೆ ಹೊಸ ಒತ್ತುವರಿಯನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದೆ.
‘ಪ್ರಜಾವಾಣಿ’ಯಲ್ಲಿ ಮಾರ್ಚ್ 30ರಂದು ‘ಅಳತೆ ಮಾಡಿದ್ದಷ್ಟೂ ಒತ್ತುವರಿ ಹೆಚ್ಚಳ’ ಶೀರ್ಷಿಕೆಯಡಿ ಪೂರ್ವ ಮುಳುಗಡೆಗೆ ಕಾರಣವಾದ ರಾಜಕಾಲುವೆ ಒತ್ತುವರಿ ತೆರವು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಆದರೆ, ಒತ್ತುವರಿ ಮಾತ್ರ ಅಳತೆ ಮಾಡಿದಂತೆಲ್ಲಾ ಹೆಚ್ಚಾಗುತ್ತಿದೆ. ಪೂರ್ವ ತಾಲ್ಲೂಕಿನ ಮೂರು ಹೋಬಳಿಗಳಲ್ಲಿ 26 ಎಕರೆಗೂ ಹೆಚ್ಚಿನ ಪ್ರಮಾಣದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ ಎಂದು ಪ್ರಕಟಿಸಲಾಗಿತ್ತು.
ಈ ವಿಷಯವು ಭೂ ಒತ್ತುವರಿಗೆ ಸಂಬಂಧಿಸಿದ್ದು, ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ ಕಲಂ 9ರಡಿಯಲ್ಲಿ ವಿಶೇಷ ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡಿದೆ. ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತರಿಗೆ ವಿವರವಾದ ವರದಿ ಸಲ್ಲಿಸಲು ಸೂಚಿಸಿ ಪ್ರಕರಣವನ್ನು ಮೇ 25ರವರೆಗೆ ಮುಂದೂಡಲಾಗಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.