ಬೆಂಗಳೂರು: ‘ನಮ್ಮ ಮನೆಯನ್ನು ಸುಟ್ಟಿದ್ದು ರಜಾಕಾರರು, ಮುಸ್ಲಿಮರಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಇತಿಹಾಸ ಗೊತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ರಜಾಕಾರರಿಂದ ತನ್ನ ತಾಯಿ, ಸಹೋದರಿ ಸುಟ್ಟು ಹೋದರೂ ಖರ್ಗೆ ಮೌನ ವಹಿಸಿದ್ದಾರೆ’ ಎಂಬ ಯೋಗಿ ಆದಿತ್ಯನಾಥ ಟೀಕೆ ಕುರಿತು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಮನೆ ಸುಟ್ಟಿದ್ದು ಮುಸ್ಲಿಂ ಸಮುದಾಯವಲ್ಲ. ಒಂದು ಸಮುದಾಯದ ಯಾರೋ ಮೋಸ ಮಾಡುತ್ತಾರೆ ಎಂಬ ಕಾರಣಕ್ಕೆ ಇಡೀ ಸಮುದಾಯವನ್ನು ಹೊಣೆ ಮಾಡಲು ಆಗುತ್ತದಾ’ ಎಂದು ಕೇಳಿದರು.
ಈ ಚರ್ಚೆಯೇ ಈಗ ಅಪ್ರಸ್ತುತ. ಇಷ್ಟೆಲ್ಲ ಮಾತನಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ? ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತಗಳಲ್ಲಿ ಮೊದಲು ಸಮಾನತೆ ತರಲಿ ಎಂದರು.
‘ಬಿಜೆಪಿ ಅಪಾಯದಲ್ಲಿದೆ. ಅದಕ್ಕಾಗಿ ಹಿಂದೂಗಳೆಲ್ಲರೂ ಅಪಾಯದಲ್ಲಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಬಿಜೆಪಿಯವರು ತಾವು ಅಪಾಯದಲ್ಲಿದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ’ ಎಂದು ಹೇಳಿದರು.
ಬಿಜೆಪಿಯವರು ಭಯಗೊಂಡಿದ್ದಾರೆ:
‘ಕೋವಿಡ್‌ನಿಂದ ರಾಜ್ಯದಲ್ಲಿ 4.26 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಸತ್ತಿದ್ದು 30,000 ಮಂದಿ ಮಾತ್ರ ಎಂದು ಬಿಜೆಪಿ ನೇತೃತ್ವದ ಸರ್ಕಾರ ವಾದಿಸಿತ್ತು. ಮೈಕಲ್ ಡಿಕುನ್ಹ ಆಯೋಗ ಮಧ್ಯಂತರ ವರದಿ ಬಂದಿದೆ. ಅದಕ್ಕೇ ಬಿಜೆಪಿಯವರು ಭಯಗೊಂಡಿದ್ದಾರೆ’ ಎಂದರು.
‘ಇನ್ನೂ ಆಯೋಗದಿಂದ ಅಂತಿಮ ವರದಿ ಬರಬೇಕಿದೆ. ಮಧ್ಯಂತರ ವರದಿಯಲ್ಲಿ ಬಲವಾದ ಸಾಕ್ಷ್ಯಗಳಿದ್ದರೆ ಕ್ರಮಕ್ಕೆ ನಮ್ಮ ಸರ್ಕಾರ ಹಿಂಜರಿಯುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.