ADVERTISEMENT

ಆರ್‌.ಆರ್‌.ನಗರ ಉಪ ಚುನಾವಣೆ; ಚುರುಕುಗೊಂಡ ಮತದಾನ

ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ 26.58 ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 8:29 IST
Last Updated 3 ನವೆಂಬರ್ 2020, 8:29 IST
ರಾಜರಾಜೇಶ್ವರಿನಗರ ಉಪಚುನಾವಣೆ ಅಂಗವಾಗಿ ಚಲನಚಿತ್ರ ನಟರಾದ ಪ್ರೇಮ್ ಮತ್ತು ಜ್ಯೋತಿ ಪ್ರೇಮ್ ಅವರು ನಾಗರಬಾವಿಯ ರೇಣುಕ ಪಬ್ಲಿಕ್ ಶಾಲೆಯಲ್ಲಿ ಕೊಟ್ಟಿಗೆಪಾಳ್ಯ ವಾರ್ಡ್‌ನಲ್ಲಿ ಮತಚಲಾಯಿಸಿದರು.
ರಾಜರಾಜೇಶ್ವರಿನಗರ ಉಪಚುನಾವಣೆ ಅಂಗವಾಗಿ ಚಲನಚಿತ್ರ ನಟರಾದ ಪ್ರೇಮ್ ಮತ್ತು ಜ್ಯೋತಿ ಪ್ರೇಮ್ ಅವರು ನಾಗರಬಾವಿಯ ರೇಣುಕ ಪಬ್ಲಿಕ್ ಶಾಲೆಯಲ್ಲಿ ಕೊಟ್ಟಿಗೆಪಾಳ್ಯ ವಾರ್ಡ್‌ನಲ್ಲಿ ಮತಚಲಾಯಿಸಿದರು.   
""

ಬೆಂಗಳೂರು: ಆರ್​.ಆರ್​. ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆ ಶೇ 26.58 ಮತದಾನ ಆಗಿದೆ. ನಟ ದರ್ಶನ್‌ ಅವರು ಮೌಂಟ್‌ ಕಾರ್ಮೆಲ್‌ ಶಾಲೆಯ ಮತಗಟ್ಟೆ 346ರಲ್ಲಿ ಮತ ಚಲಾಯಿಸಿದರು.

ಹಲವೆಡೆ ಮತದಾರರು ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತ ದೃಶ್ಯಗಳು ಕಂಡುಬಂದವು. ಮಧ್ಯಾಹ್ನದ ಬಳಿಕ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.

ಪಟ್ಟನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಉದ್ದದ ಸರದಿ ಕಂಡುಬಂದಿದೆ. ಬಿಸಿಲಿನ ನಡುವೆಯೂ ಮತದಾರರು ಮತದಾನ ಮಾಡುತ್ತಿದ್ದಾರೆ. ಯಾವುದೇ ಮತಗಟ್ಟೆಯಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿಲ್ಲ.

ADVERTISEMENT

ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ಕವಿ ಪ್ರೊ. ಸಿದ್ದಲಿಂಗಯ್ಯ ಅವರು ಪತ್ನಿ ಜೊತೆ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ‘ಭದ್ರತೆ ಹಾಗೂ ಸುರಾಕ್ಷತಾ ವ್ಯವಸ್ಥೆ ತುಂಬ ಚೆನ್ನಾಗಿದೆ. ಯಾವುದೇ ಭಯವಿಲ್ಲದೆ ಮತದಾನ ಮಾಡಬುದು. ಮತದಾನ ಮಾಡದೇ ಇದ್ದರೆ ಪ್ರಶ್ನೆ ಮಾಡುವ ಅಧಿಕಾರ ಕಳೆದುಕೊಳ್ಳತ್ತೇವೆ. ಎಲ್ಲರೂ ತಮ್ಮ ಅಧಿಕಾರ ಚಲಾಯಿಸಬೇಕು’ ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಆ ದೃಶ್ಯವನ್ನು ಸೆರೆಹಿಡಿಯಲು ಬಿಜೆಪಿ ಮಹಿಳಾ ಕಾರ್ಯಕರ್ತರು ಯತ್ನಿಸಿದ ಘಟನೆ ಯಶವಂತಪುರದ 136 ವಾರ್ಡ್‌ನಲ್ಲಿ ಘಟನೆ ನಡೆದಿದೆ. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಕ್ಯಾಮೆರಾ ಕಸಿಯಲು ಯತ್ನಿಸಿದರು. ಗುಂಪು ಸೇರಿದವರನ್ನು ಪೊಲೀಸರು ಚದುರಿಸಿದರು.

ನಟ ದಿಗಂತ್ ಅವರು ಆರ್.ಆರ್‌. ನಗರದ ಬಿಇಟಿ ಕಾನ್ವೆಂಟ್ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಿಇಟಿ ಶಾಲೆಯ ಮೂರು ಮತಗಟ್ಟೆಯಲ್ಲಿ 12 ಗಂಟೆಗೆ ಶೇ 25ರಷ್ಟು ಮತದಾನ ಆಗಿದೆ. ಕೆಲವು ಮತಗಟ್ಟೆಗಳಲ್ಲಿ ಮತದಾರರಿಗಿಂತ ಕಾರ್ಯಕರ್ತರು ಅಂತರ ಕಾಪಾಡದೆ ಹೆಚ್ಚು ಓಡಾಡುತ್ತಿದ್ದಾರೆ.

ಮಾಹಿತಿ ಪಡೆದ ನಾಯಕರು: ಮತದಾನ ಮುಂದುವರಿದಿರುವ ಮಧ್ಯೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಆಪ್ತರ ಮೂಲಕ ಮತದಾನ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಕೈಕೈ ಮಿಲಾಯಿಸಿದ ಕೈ– ಬಿಜೆಪಿ ಕಾರ್ಯಕರ್ತರು
ಬೆಂಗಳೂರು‌:
ಆರ್‌.ಆರ್‌. ನಗರ ಕ್ಷೇತ್ರದ ಜೆ.ಪಿ. ಪಾರ್ಕ್ 17ನೇ ವಾರ್ಡ್‌ನ 147, 151 ಮತಗಟ್ಟೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿ ವಾಗ್ವಾದ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ನಡುರಸ್ತೆಯಲ್ಲೇ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಪಕ್ಷದ ಶಲ್ಯ ಧರಿಸಿ ಮತಗಟ್ಟೆ ಪ್ರವೇಶಿಸಿದ ಕಾರಣಕ್ಕೆ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಮಧ್ಯೆಪ್ರವೇಶಿಸಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಿದರು.

ಮತದಾನದ ಬಳಿಕ ಮಾತನಾಡಿದ ನಟ ದಿಗಂತ್, ‘ಮುಂದಿನ ಪೀಳಿಗೆಗೆ ನಾಯಕರನ್ನು ಆರಿಸಬೇಕೆಂದರೆ ಮತ ಚಲಾಯಿಸಬೇಕು. ನಮ್ಮ‌ ನಾಯಕರನ್ನು ನಾವು ಆರಿಸಬೇಕು. ಅದಕ್ಕಾಗಿ ನಾವು ಮತ ಚಲಾಯಿಬೇಕು. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ’ ಎಂದರು.

‘ಮತಗಟ್ಟೆ ಅಧಿಕಾರಿಗಳು ಸಾಕಷ್ಟು ಮುನ್ನಚ್ಚರಿಕೆ ತೆಗೆದುಕೊಂಡಿದ್ದಾರೆ. ಹೀಗಾಗಿ, ನಿರಾಂತಕವಾಗಿ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಬಹುದು’ ಎಂದರು.

ಎಲ್ಲೆಂದರಲ್ಲಿ ಕೈ ಗವಸು: ಮತಗಟ್ಟೆಯಲ್ಲಿ ಮತದಾರರಿಗೆ ನೀಡಲಾಗಿರುವ ಕೈ ಗವಸುಗಳನ್ನು ಮತದಾರರು ಎಲ್ಲೆಂದಲ್ಲಿ ಬಿಸಾಡಿ ಹೋಗಿರುವ ದೃಶ್ಯ ಕೆಲವೆಡೆ ಕಂಡುಬಂದಿದೆ.

ಕೊರೊನಾ ಕಾರಣ ಮತದಾರರಿಗೆ ಕೈ ಗವಸು ನೀಡಲಾಗುತ್ತಿದೆ. ಆರ್‌.ಆರ್‌. ನಗರ ಕ್ಷೇತ್ರದ ಬೂತ್ ನಂಬರ್ 137ರಿಂದ 139ರ ಬಳಿ ಎಲ್ಲೆಂದರಲ್ಲಿ ಕೈಗವಸು ಬಿದ್ದಿದೆ. ಕೈ ಗವಸು ವಿಲೇವಾರಿಗೆ ಮತಗಟ್ಟೆಗಳಲ್ಲಿ ವ್ಯವಸ್ಥೆ ಮಾಡದಿರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ.

ನಟ ದಿಗಂತ್ ಅವರು ಆರ್.ಆರ್‌. ನಗರದ ಬಿಇಟಿ ಕಾನ್ವೆಂಟ್ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಮತಗಟ್ಟೆಯತ್ತ ಮತದಾರ; ಎಲ್ಲೆಡೆ ಬಿಗಿ ಬಂದೋಬಸ್ತ್
ಬೆಂಗಳೂರು:
ಆರ್‌.ಆರ್‌. ನಗರ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭವಾಗಿದೆ. ಮತದಾರರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಯ ಕಡೆಗೆ ಮುಖ ಮಾಡಿದ್ದಾರೆ. ಕೆಲವು ಮತಗಟ್ಟೆಗಳಲ್ಲಿ ಬೆಳಿಗ್ಗೆಯೇ ಸರದಿ ಸಾಲು ಕಂಡುಬಂದಿದೆ. ಸಂಜೆ ಆರರವರೆಗೆ ಮತದಾನ ನಡೆಯಲಿದೆ.

ರಾಜಕೀಯ ಪಕ್ಷಗಳ ತೀವ್ರ ವಾಕ್ಸಮರದಿಂದ ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿದ್ದ ಈ ಕ್ಷೇತ್ರದಲ್ಲಿ ಎಲ್ಲೆಡೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ.

ಪ್ರತೀ ಮತಗಟ್ಟೆಯಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗೆ ಮಾಸ್ಕ್, ಕೈಗವಚ ಒದಗಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಪಿಪಿಇ ಕಿಟ್, ಸ್ಯಾನಿಟೈಸರ್ ವ್ಯವಸ್ಥೆ ಇದೆ. ಅಂತರ ಪಾಲನೆಯಾಗುವಂತೆ ಸೂಚನೆ ನೀಡಲಾಗುತ್ತಿದೆ.

ಕೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಅದರಲ್ಲಿ 82 ಮತಗಟ್ಟೆಗಳು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. 112 ಮೊಬೈಲ್ ಸ್ಕ್ವಾಡ್ ನಿಯೋಜಿಸಲಾಗಿದ್ದು ಈ ತಂಡವು ಪ್ರತಿ ಮತಗಟ್ಟೆಗೆ ತೆರಳಿ ಬಂದೋಬಸ್ತ್ ಹಾಗೂ ಸ್ಥಿತಿಗತಿ ಬಗ್ಗೆ ನಿಗಾ ಇಡಲಿದೆ. ಪೊಲೀಸರ ಗಸ್ತು ಹೆಚ್ಚಿಸಲು 32 ಹೊಯ್ಸಳ ವಾಹನ ಮತ್ತು 91 ಚೀತಾಗಳನ್ನು ಯೋಜಿಸಲಾಗಿದೆ.

ಆರ್ ಆರ್ ನಗರ ಅತಿ ಸೂಕ್ಷ್ಮ ಕ್ಷೇತ್ರವಾಗಿದ್ದು ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಸಲುವಾಗಿ 2563 ಪೊಲೀಸರನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ ಮೂವರು ಡಿಸಿಪಿಗಳು, 8 ಎಸಿಪಿ, 30 ಇನ್ಸ್‌ಪೆಕ್ಟರ್, 94 ಪಿಎಸ್ಐ, 185 ಎಎಸ್ಐ, 1547 ಕಾನ್‌ಸ್ಟೆಬಲ್ ಗಳು, 699 ಗೃಹ ರಕ್ಷಕ ಸಿಬ್ಬಂದಿ, 19 ಕೆಎಸ್ಆರ್ ಪಿ, 20 ಸಿಎಆರ್ ತುಕಡಿ, 3 ಸಿಎಪಿಎಫ್ ಪ್ಯಾರಾ ಮಿಲಿಟರಿ ತುಕಡಿ ನಿಯೋಜಿಸಲಾಗಿದೆ.

ಕೊರೊನಾ ಸೋಂಕಿತರಿಗೆ ಸಂಜೆ 5ರಿಂದ 6ರವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.

ಜೆಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಮತ್ತು ಕುಟುಂಬದವರು ಮತಚಲಾಯಿಸಿದರು. -ಪ್ರಜಾವಾಣಿ ಚಿತ್ರ
ಎಚ್‌ಎಂಆರ್‌ ಶಾಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮತ್ತು ಕುಟುಂಬದವರು ಮತಚಲಾಯಿಸಿದರು. -ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.